More

    ಅನುಮತಿ ಪಡೆಯದೆ ಜಮೀನಿನಲ್ಲಿ ರಸ್ತೆ ನಿರ್ಮಾಣ ಆರೋಪ * ವಿಜ್ಞಾನ ಭವನದ ಬಳಿ ಪ್ರತಿಭಟನೆ

    ಹಾವೇರಿ: ಇಲ್ಲಿನ ದೇವಗಿರಿ ರಸ್ತೆಯ ಜಿಲ್ಲಾಧಿಕಾರಿ ಕಚೇರಿ ಎದುರು ಗುಡ್ಡದಲ್ಲಿ ನಿರ್ಮಿಸಲಾಗುತ್ತಿರುವ ವಿಜ್ಞಾನ ಭವನಕ್ಕೆ ತಮ್ಮ ಅನುಮತಿ ಪಡೆಯದೇ ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿ ತಹಸೀಲ್ದಾರ್ ಎದುರು ರೈತರು ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಮಂಗಳವಾರ ಜರುಗಿತು. ರಸ್ತೆ ನಿರ್ಮಾಣ ಕಾಮಗಾರಿ ವೀಕ್ಷಣೆಗೆಂದು ಮಂಗಳವಾರ ವಿಜ್ಞಾನ ಭವನದ ಬಳಿ ತಹಸೀಲ್ದಾರ್ ಗಿರೀಶ ಸ್ವಾದಿ, ನಿರ್ಮಿತಿ ಕೇಂದ್ರದ ಹಿರಿಯ ಯೋಜನಾ ನಿರ್ದೇಶಕ ತಿಮ್ಮೇಶಕುಮಾರ ಸೇರಿದಂತೆ ಇತರ ಅಧಿಕಾರಿಗಳ ತಂಡ ಭಾರಿ ಪೊಲೀಸ್ ಭದ್ರತೆಯೊಂದಿಗೆ ಸ್ಥಳಕ್ಕೆ ಆಗಮಿಸಿತ್ತು. ಈ ವೇಳೆ ಜಮೀನಿನ ಮಾಲೀಕರಾದ ಸುನಂದಾ ಬಸವಂತಪ್ಪ ಮಾಳಗಿ, ಮುರಾರಿ ರಾಠೋಡ, ದೇವಿರವ್ವ ರಾಠೋಡ, ಮತ್ತಿತರರು ಪ್ರತಿರೋಧ ವ್ಯಕ್ತಪಡಿಸಿದರು. ನಮ್ಮ ಜಮೀನಿನಲ್ಲಿ ರಸ್ತೆ ನಿರ್ಮಿಸಲು ಅವಕಾಶ ಕೊಡುವುದಿಲ್ಲ ಎಂದು ವಿಜ್ಞಾನ ಭವನದ ಎದುರು ರಸ್ತೆ ಮೇಲೆ ಕುಳಿತು ಪ್ರತಿಭಟಿಸಿದರು. ಕಳೆದ ಆರು ವರ್ಷಗಳಿಂದ ವಿಜ್ಞಾನ ಭವನ ನಿರ್ಮಾಣದ ಸಿದ್ಧತೆ ನಡೆದಿದೆ. 2019ರಲ್ಲಿ ನಿರ್ಮಿತಿ ಕೇಂದ್ರದಿಂದ ದೇವಗಿರಿ ಗುಡ್ಡದ ಮೇಲೆ 7 ಕೋಟಿ ರೂ. ವೆಚ್ಚದಲ್ಲಿ ವಿಜ್ಞಾನ ಭವನ ನಿರ್ಮಿಸಲಾಗುತ್ತಿದೆ. ಸುತ್ತಲೂ ರೈತರ ಜಮೀನು ಇದ್ದು, ಮಧ್ಯದಲ್ಲಿ ಭವನ ನಿರ್ಮಿಸಲಾಗುತ್ತಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದರೂ ವಿಜ್ಞಾನ ಭವನಕ್ಕೆ ಈವರೆಗೆ ರಸ್ತೆ ನಿರ್ಮಿಸಲಾಗಿಲ್ಲ. ನಿರ್ಮಿತಿ ಕೇಂದ್ರದವರು ದೇವಗಿರಿಯ ಸರ್ವೆ ನಂಬರ್ 302ರಲ್ಲಿರುವ ನಮ್ಮ ಜಮೀನಿನಲ್ಲಿ ವಿಜ್ಞಾನ ಭವನಕ್ಕೆ ರಸ್ತೆ ನಿರ್ಮಾಣ ಮಾಡಲೆಂದು ಹಲವು ಬಾರಿ ಯತ್ನಿಸಿದ್ದಾರೆ. ನಮ್ಮಿಂದ ಅನುಮತಿ ಪಡೆಯದೇ ಏಕಾಏಕಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಕಳೆದ ತಿಂಗಳು ಲಕ್ಷಾಂತರ ರೂ. ಖರ್ಚು ಮಾಡಿ ಬೋರ್‌ವೆಲ್ ಕೊರೆಸಿದ ಜಾಗದಲ್ಲೇ ರಸ್ತೆ ನಿರ್ಮಾಣಕ್ಕೆ ಯತ್ನಿಸುತ್ತಿದ್ದಾರೆ. ನೆಮ್ಮದಿಯಾಗಿ ಬದುಕಲು ಬಿಡುತ್ತಿಲ್ಲ. ಹೊಲವನ್ನೇ ನಂಬಿ ಜೀವನ ಮಾಡುತ್ತಿರುವ ನಮಗೆ ಇದರಿಂದ ತೀವ್ರ ಸಂಕಷ್ಟ ಎದುರಾಗಿದೆ ಎಂದು ರೈತ ಕುಟುಂಬದವರು ನೋವು ತೋಡಿಕೊಂಡರು. ಜಮೀನಿನ ಮಾಲೀಕತ್ವದ ಕುರಿತು ಮರು ಸಮೀಕ್ಷೆ ನಡೆಸಲಾಗುವುದು. ನಂತರವೇ ರಸ್ತೆ ಕಾಮಗಾರಿ ಕುರಿತು ನಿರ್ಧರಿಸಲಾಗುವುದು ಎಂದು ತಹಸೀಲ್ದಾರ್ ಗಿರೀಶ ಸ್ವಾದಿ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.
    ನೀವೂ ದಾಖಲೆ ತೋರಿಸಿ
    ಈ ಹೊಲವನ್ನೇ ನಂಬಿಕೊಂಡು ತುತ್ತು ಅನ್ನ ತಿನ್ನುತ್ತಿರುವ ನಮಗೆ ಅಧಿಕಾರಿಗಳು ಮೋಸ ಮಾಡಲು ಮುಂದಾಗಿದ್ದಾರೆ. ಜಮೀನಿನ ದಾಖಲೆಗಳೆಲ್ಲ ನಮ್ಮ ಬಳಿ ಇದ್ದರೂ ನಮ್ಮ ಅನುಮತಿ ಪಡೆಯದೇ ನಮ್ಮ ಹೊಲದಲ್ಲಿ 40 ಅಡಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಜಾಗ ಸರ್ಕಾರದ್ದಾಗಿದ್ದರೆ ಅವರು ದಾಖಲೆ ತೋರಿಸಲಿ. ಯಾವುದೇ ಕಾರಣಕ್ಕೂ ರಸ್ತೆ ನಿರ್ಮಾಣಕ್ಕೆ ಅವಕಾಶ ಕೊಡಲ್ಲ. ಸರ್ಕಾರ, ಪೊಲೀಸರು ನಮಗೆ ರಕ್ಷಣೆ ಕೊಡಬೇಕು ಎಂದು ಜಮೀನು ಮಾಲಕಿ ಸುನಂದಾ ಲಮಾಣಿ ಆಗ್ರಹಿಸಿದರು.

    ಕೋಟ್:
    ವಿಜ್ಞಾನ ಭವನದ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಿರುವ ಜಮೀನು ಸರ್ಕಾರದ್ದು ಎನ್ನಲಾಗಿದ್ದು ಈ ಬಗ್ಗೆ ಕಂದಾಯ ಇಲಾಖೆಯವರು ಸ್ಪಷ್ಟಪಡಿಸಬೇಕಿದೆ. ಈ ಕುರಿತು ಕಂದಾಯ ಇಲಾಖೆಗೆ ಮಾಹಿತಿ ನೀಡಿದ್ದೇವೆ.
    ತಿಮ್ಮೇಶಕುಮಾರ, ಹಿರಿಯ ಯೋಜನಾ ನಿರ್ದೇಶಕ, ನಿರ್ಮಿತಿ ಕೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts