More

    ಎಚ್‌ಡಿಕೆಗೆ ಜಿಲ್ಲೆಯ ಜನ ಬಿಸಿಹಾಲು ಕೊಡ್ತಾರೆ: ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ವ್ಯಂಗ್ಯ

    ಮಂಡ್ಯ: ಜಿಲ್ಲೆಯ ಜನರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಬಿಸಿಹಾಲು ಕೊಟ್ಟು ಓಡಿಸುತ್ತಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮರಿತಿಬ್ಬೇಗೌಡ ವ್ಯಂಗ್ಯವಾಡಿದರು.
    ಎಚ್.ಡಿ.ದೇವೇಗೌಡರ ಸುದೀರ್ಘ 60 ವರ್ಷದ ರಾಜಕೀಯ ಜೀವನದಲ್ಲಿ ಜಿಲ್ಲೆಯ ಜನತೆ ಅವರ ಕೈ ಹಿಡಿದರು. ಕುಮಾರಸ್ವಾಮಿ ಅವರನ್ನೂ ಒಪ್ಪಿ ಅವರಿಗೆ ತಣ್ಣಗಿನ ಹಾಲು ಕೊಟ್ಟು ಸಲುಹಿದ್ದರು. ಅಂತಹ ಜನರಿಗೆ ನೀವು ವಿಷ ಕೊಟ್ಟಿರಿ. ಈಗ ವಿಷ ಕೊಡುತ್ತೀರೋ ಅಥವಾ ಹಾಲು ಕೊಡುತ್ತೀರೋ ಎಂದು ಕೇಳುತ್ತಾರೆಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
    ಬಿಜೆಪಿ ಸರ್ಕಾರ ಕಳೆದ 10 ವರ್ಷದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ. ಮೈಸೂರಿಗೆ ಪ್ರಧಾನಿ ನರೇಂದ್ರಮೋದಿ ಅವರು ಬಂದಾಗ ನಾಡಿನ ಜನತೆಗೆ ತಮ್ಮ ಅವಧಿಯಲ್ಲಿ ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಕೊಟ್ಟಿರುವುದರ ಬಗ್ಗೆ ಪ್ರಸ್ತಾಪ ಮಾಡದೆ ಇರುವುದು ಇದಕ್ಕೆ ಸಾಕ್ಷಿಯಾಗಿದೆ. ಕನ್ನಡ ನಾಡಿನ ಜನತೆಯ ಬರಿಹಾರ ಹಾಗೂ ಬಾಕಿ ತೆರಿಗೆ ನೀಡಿಲ್ಲ. ಯಾವುದೇ ನೀರಾವರಿ ಯೋಜನೆಗೆ ಅನುಮೋದನೆ ನೀಡಲಿಲ್ಲ. ಬಡವರು ರೈತರ ಹಾಗೂ ಸಂವಿಧಾನ ವಿರೋಧಿ ಸರ್ವಾಧಿಕಾರಿಯಾಗಿ ಆಡಳಿತ ನಡೆಸುತ್ತಿದೆ ಎಂದು ಕಿಡಿಕಾರಿದರು.
    ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರ ಒತ್ತಾಯದ ಮೇರೆಗೆ ಮೊದಲ ಬಜೆಟ್‌ನಲ್ಲಿ ಹೊಸ ಸಕ್ಕರೆ ಕಾರ್ಖಾನೆ, ಕೃಷಿ ವಿಶ್ವವಿದ್ಯಾನಿಲಯ ಮತ್ತು ನೀರಾವರಿ ಯೋಜನೆಗಳಿಗೆ 2 ಸಾವಿರ ಕೋಟಿ ರೂ ಅನುದಾನ ನಿಗದಿಪಡಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀಡಿದ್ದ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಈಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಹಲವು ಜನಪರ ಯೋಜನೆ ಜಾರಿಗೊಳ್ಳಲಿವೆ ಎಂದರು.
    ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಂ.ಎಸ್.ಚಿದಂಬರ್, ವಕ್ತಾರ ಟಿ.ಎಸ್.ಸತ್ಯಾನಂದ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಅಂಜನಾ ಶ್ರೀಕಾಂತ್, ಕೀಲಾರ ಕೃಷ್ಣ, ಕೋಣನಹಳ್ಳಿ ಜಯರಾಂ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts