More

    ಹಿಂದು ಧರ್ಮ ಜಗತ್ತಿನ ಆಶಾಕಿರಣ ಎಂದು ಬಣ್ಣಿಸಿದ ಮಾಜಿ ಸಿಎಂ ಬಿಎಸ್‌ವೈ

    ಬೆಂಗಳೂರು : ಹಿಂದು ಧರ್ಮ ಇಂದು ಇಡೀ ಜಗತ್ತಿನ ಆಶಾಕಿರಣವಾಗಿದ್ದು, ಕಾರ್ಮೋಡದ ನಡುವೆ ಕೋಲ್ಮಿಂಚಿನಂತೆ ಇಡೀ ಜಗತ್ತಿನ ಗಮನಸೆಳೆಯುತ್ತಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಿಸಿದ್ದಾರೆ

    ವಿಜಯನಗರದ ಶ್ರೀ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನವು ಹಮ್ಮಿಕೊಂಡಿರುವ ಶ್ರೀಸಿದ್ಧಾಂತ ಶಿಖಾಮಣಿ ಆಧ್ಯಾತ್ಮಿಕ ಆಶೀರ್ವಚನ ಹಾಗೂ ಧನುರ್ಮಾಸದ ಇಷ್ಟಲಿಂಗ ಮಹಾಪೂಜೆಯ ೪ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಹಿಂದು ಸಮಾಜ ಬಹಳ ಕಾಲ ಪರಕೀಯರ ದಾಳಿಗೆ ಒಳಗಾಗಿದ್ದ ಧರ್ಮ. ಹಿಂದುಗಳು ಎಂದಿಗೂ ಯಾವುದೇ ಧರ್ಮದ ಮೇಲೆ ದಾಳಿ ಮಾಡಿದ ಉದಾಹರಣೆ ಇಲ್ಲ. ಆದರೆ ಹಿಂದು ಧರ್ಮದ ಮೇಲೆ ಆಗಿರುವ ದಬ್ಬಾಳಿಕೆ ಜಗತ್ತಿನ ಇನ್ನಾವುದೇ ಧರ್ಮದ ಮೇಲೂ ಆಗಿಲ್ಲ. ಆದರೆ ಇತ್ತೀಚೆಗೆ ಪರಿಸ್ಥಿತಿ ಬದಲಾಗಿದೆ. ಹಿಂಸೆ, ಮೂಲಭೂತ ಕೌರ್ಯದೊಂದಿಗೆ ನಡೆಯುತ್ತಿರುವ ಯುದ್ಧದಂತಹ ಪರಿಸ್ಥಿತಿಯಲ್ಲಿ ಹಿಂದು ಧರ್ಮ ಸದಾ ಪ್ರತಿಪಾದಿಸಿಕೊಂಡು ಬಂದಿರುವ ಅಹಿಂಸೆ ಮತ್ತು ಆಧ್ಯಾತ್ಮದ ಆಶಯಗಳನ್ನು ಜಗತ್ತಿನ ಇತರ ರಾಷ್ಟ್ರಗಳು ಅನುಸರಿಸುವ ಬೆಳವಣಿಗೆಗಳಾಗುತ್ತಿರುವುದು ಸಂತಸದ ವಿಷಯ. ಈ ಬಹುದೊಡ್ಡ ಮಾರ್ಪಾಡಿಗೆ ಪ್ರಮುಖ ಕಾರಣ ಭಾರತದಲ್ಲಿರುವ ನಮ್ಮೆಲ್ಲ ಮಠಮಾನ್ಯಗಳು, ಸಾಧು-ಸಂತರು.

    ಈ ಹಿನ್ನೆಲೆಯಲ್ಲಿ ಕಾಶೀ ಜಗದ್ಗುರುಗಳು ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಧರ್ಮ ಪ್ರಸಾರ, ಲಿಂಗದೀಕ್ಷೆಯನ್ನು ನೀಡಿದ್ದು, ಇವರಿಂದ ಪ್ರೇರಿತರಾದ ಸಾವಿರಾರು ಶಿಷ್ಯರು ಆಯಾ ದೇಶಗಳಲ್ಲಿದ್ದಾರೆ. ಅಂತಹ ಓರ್ವ ಚಿಕ್ಕ ವಯಸ್ಸಿನ ಪಂಕಜ ರಾಯ್ ಎಂಬ ಬಾಂಗ್ಲಾ ದೇಶದ ಯುವ ಜಗದ್ಗುರುಗಳಿಂದ ಇಷ್ಟಲಿಂಗ ದೀಕ್ಷೆಯನ್ನು ಪಡೆದು ಬಾಂಗ್ಲಾದಲ್ಲಿ ಕಾಶೀ ಜಂಗಮವಾಡಿ ಮಠ ಸ್ಥಾಪನೆಗೆ ಮುಂದಾಗಿರುವುದು ಅತ್ಯಾಶ್ಚರ್ಯದ ಸಂಗತಿ ಎಂದು ಅವರು ವಿವರಿಸಿದರು.

    ಸಮಾರಂಭದಲ್ಲಿ ಶ್ರೀಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನದಿಂದ ಪ್ರತಿವರ್ಷ ಕೊಡಮಾಡುವ ಜಗದ್ಗುರು ‘ಪಂಚಾಚಾರ್ಯಶ್ರೀ’ ಪ್ರಶಸ್ತಿಯನ್ನು ಬಾಂಗ್ಲಾ ದೇಶದ ವೇದಬ್ರಹ್ಮ ಪಂಕಜ ರಾಯ್ ಅವರಿಗೆ ನೀಡಿ ಸನ್ಮಾನಿಸಲಾಯಿತು. ಕಾಶೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು, ವಿಭೂತಿಪುರ ಮತ್ತು ಶಿವಗಂಗೆ ಶ್ರೀಗಳು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಮರಿಸ್ವಾಮಿ, ಪ್ರಶಸ್ತಿಯ ಪ್ರಾಯೋಜಕರಾದ ಶಾಂತ ವಿ.ಗೌಡ ಮತ್ತಿತರರು ಉಪಸ್ಥಿತರಿದ್ದರು.

    ಸರ್ವರಿಗೂ ಸಮಪಾಲು ವೀರಶೈವ ಚಿಂತನೆ : ಯಡಿಯೂರಪ್ಪನವರು ಈ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾಗ ಅಳವಡಿಸಿಕೊಂಡಿದ್ದ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಎಂಬ ಧ್ಯೇಯವಾಕ್ಯವು ವೀರಶೈವ ಸಿದ್ಧಾಂತದಲ್ಲಿರುವ ಮೂಲ ಆಶಯ. ಪಂಚಪೀಠಗಳ ಪರಮ ಭಕ್ತರಾದ ಯಡಿಯೂರಪ್ಪನವರು ಈ ತತ್ವದ ತಳಹದಿಯಲ್ಲಿ ರಾಜ್ಯವನ್ನಾಳಿರುವುದರಿಂದ ಇಡೀ ರಾಜ್ಯದ ಎಲ್ಲ ಸಮುದಾಯದ ಜನ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಕಾಶೀ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts