More

    ಅರಣ್ಯ ಸಂಪತ್ತು ವೃದ್ಧಿಯತ್ತ ಜಿಪಂ

    ಬೆಳಗಾವಿ: ಪರಿಸರ ಮಾಲಿನ್ಯ ನಿಯಂತ್ರಣ, ಅರಣ್ಯ ಸಂಪತ್ತು, ಪಕ್ಷಿಸಂಕುಲ ಸಂರಕ್ಷಿಸುವ ನಿಟ್ಟಿನಲ್ಲಿ ಮುಂಗಾರು ಆರಂಭದಲ್ಲಿ 25 ಲಕ್ಷ ವಿವಿಧ ತಳಿಯ ಸಸಿಗಳನ್ನು ನೆಡಲು ಜಿಲ್ಲಾ ಪಂಚಾಯಿತಿ ನಿರ್ಧರಿಸಿದೆ. ಇದಕ್ಕಾಗಿ ನರೇಗಾ ಯೋಜನೆಯಡಿ ಪ್ರತಿ ಸಸಿಗೆ ಅವಶ್ಯವಾದ ಗುಂಡಿ ತೋಡುವ ಕೆಲಸವನ್ನೂ ಈಗಿನಿಂದಲೇ ಆರಂಭಿಸಿದೆ.

    ರಾಜ್ಯಾದ್ಯಂತ ಸರ್ಕಾರದ ಕೋಟಿವೃಕ್ಷದ ಅಭಿಯಾನದ ಯೋಜನೆಯಡಿ ಅರಣ್ಯ ಬೆಳೆಸಲು ಮುಂದಾಗಿದ್ದು, ಬೆಳಗಾವಿ ಜಿಲ್ಲಾ ಪಂಚಾಯಿತಿಯು ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ತೋಟಗಾರಿಕೆ, ಅರಣ್ಯ ಹಾಗೂ ಸಾಮಾಜಿಕ ಅರಣ್ಯ ಇಲಾಖೆ ಸಹಯೋಗದಲ್ಲಿ ಮೂರು ವರ್ಷದಲ್ಲಿ 1 ಕೋಟಿ ಸಸಿ ನೆಡಲು ಕ್ರಿಯಾ ಯೋಜನೆ ರೂಪಿಸಿದೆ.

    ಕಾರ್ಮಿಕರಿಗೆ ಉದ್ಯೋಗ: ಯೋಜನೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿರುವ ವಿವಿಧ ನರ್ಸರಿಗಳಲ್ಲಿ ಲಕ್ಷ ಲಕ್ಷ ಸಸಿ ಬೆಳಸಲಾಗುತ್ತಿದೆ. ಅವಶ್ಯಬಿದ್ದರೆ ಸಸಿಗಳನ್ನು ಬೆಳೆಸಲು ಖಾಸಗಿಯವರಿಗೆ ಟೆಂಡರ್ ನೀಡಲೂ ನಿರ್ಧರಿಸಲಾಗಿದೆ. ತೋಟಗಾರಿಕೆ, ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆ, 14 ತಾಪಂಗಳು, 502 ಗ್ರಾಪಂಗಳಿಗೆ ಹಾಗೂ 10 ಸಾವಿರ ಸರ್ಕಾರಿ ಶಾಲೆಗಳಿಗೆ ಸಸಿ ನೆಡುವ ಮತ್ತು ಅವುಗಳನ್ನು ಪೋಷಿಸಿ ಬೆಳಸುವ ಕುರಿತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನರೇಗಾ ಯೋಜನೆಯಡಿ ಕಾಮಗಾರಿ ಕೈಗೊಳ್ಳಲಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಸಾವಿರಾರು ಕೂಲಿ ಕಾರ್ಮಿಕರಿಗೆ ಬೇಸಿಗೆ ಕಾಲದಲ್ಲಿ ಉದ್ಯೋಗ ಸಿಗಲಿದೆ.

    ವಿವಿಧ ಸಸಿಗೆ ಬೇಡಿಕೆ: ಜಿಲ್ಲೆಯ 502 ಗ್ರಾಪಂಗಳಿಂದ 15 ಲಕ್ಷಕ್ಕೂ ಅಧಿಕ ನೇರಳೆ, ಸೀಬೆ, ಮಾವು, ಹುಣಸೆ, ಚಿಕ್ಕು, ದಾಳಿಂಬೆ, ನಿಂಬೆ ಸಸಿಗಳ ಬೇಡಿಕೆ ಇದೆ. 10 ಲಕ್ಷಕ್ಕೂ ಅಧಿಕ ಹೆಬ್ಬೇವು, ತೇಗ, ಹೊನ್ನೆ, ಶ್ರೀಗಂಧ ರಕ್ತಚಂದನ, ಇನ್ನಿತರ ತಳಿಗಳ ಗಿಡಕ್ಕೂ ಬೇಡಿಕೆ ಹೆಚ್ಚಿದೆ. ಆದರೆ, ಎಲ್ಲ ಕಡೆ ಹಣ್ಣಿನ ಸಸಿ ನೆಡುವುದು ಕಷ್ಟವಾಗಿದೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ಶೇ. 30ರಷ್ಟು ಹಣ್ಣು ಸಸಿಗಳು ಹಾಗೂ ಶೇ. 70ರಷ್ಟು ಇನ್ನಿತರ ಪ್ರಮುಖ ಸಸಿಗಳನ್ನು ನೆಡಲು ಯೋಜಿಸಲಾಗಿದೆ. ಸರ್ಕಾರಿ ಶಾಲೆಗಳ ಆವರಣದಲ್ಲಿ ಕಡ್ಡಾಯವಾಗಿ ಹಣ್ಣು-ಹಂಪಲ ಸಸಿಯನ್ನೇ ನೆಡಲಾಗುತ್ತಿದೆ ಎಂದು ತಾಪಂನ ನರೇಗಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಗ್ರಾಪಂಗಳಿಗೆ ತಲಾ 4 ಸಾವಿರ ಸಸಿ

    ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕೆ ಜಿಲ್ಲೆಯ 502 ಗ್ರಾಪಂಗಳ ವ್ಯಾಪ್ತಿಯಲ್ಲಿ ಖಾಲಿ ಪ್ರದೇಶ, ಸಾರ್ವಜನಿಕ ಸ್ಥಳಗಳು, ಸಮುದಾಯ, ದೇವಸ್ಥಾನ ಆವರಣ, ಸರ್ಕಾರಿ ಶಾಲೆ ಆವರಣ, ರಸ್ತೆಯ ಎರಡು ಬದಿಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ವಿವಿಧ ರೀತಿಯ ಸಸಿ ನೆಡಲು ಸರ್ಕಾರ ಯೋಜನೆ ರೂಪಿಸಿದೆ. ಈ ಮೊದಲು ಪ್ರತಿ ತಾಪಂ ವ್ಯಾಪ್ತಿಯ ಗ್ರಾಪಂಗಳಿಗೆ 40 ಸಾವಿರ ಸಸಿ ನೆಡುವ ಗುರಿ ನೀಡಲಾಗುತಿತ್ತು. ಆದರೆ, ಈ ವರ್ಷ ಪ್ರತಿ ಗ್ರಾಪಂಗೆ 3 ರಿಂದ 4 ಸಾವಿರ ವರೆಗೆ ಸಸಿ ನೆಡುವ ಗುರಿ ಹಾಕಿಕೊಳ್ಳಲಾಗಿದೆ.

    ಜೂನ್‌ನಿಂದ ಮುಂಗಾರು ಪ್ರಾರಂಭವಾಗಲಿದ್ದು, ಈ ಬಾರಿ 25 ಲಕ್ಷ ಸಸಿ ನೆಟ್ಟು ಬೆಳಸುವ ಮೂಲಕ ಕೋಟಿ ವೃಕ್ಷ ಅಭಿಯಾನ ಸಂಪೂರ್ಣ ಸಫಲತೆ ಸಾಧಿಸಲು ಯೋಜಿಸಲಾಗಿದೆ. ಏಪ್ರಿಲ್, ಮೇ ತಿಂಗಳಲ್ಲಿ ಗುಂಡಿ ತೋಡುವ ಕೆಲಸ ಆರಂಭವಾಗಲಿದೆ.
    | ಎಚ್.ವಿ. ದರ್ಶನ್. ಸಿಇಒ, ಜಿಪಂ ಬೆಳಗಾವಿ

    | ಮಂಜುನಾಥ ಕೋಳಿಗುಡ್ಡ ಬೆಳಗಾವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts