More

    ಸೋಲಾರ್ ಬೇಲಿ ಅಳವಡಿಸಿಕೊಳ್ಳಲು ಸಹಾಯಧನ

    ಸೋಲಾರ್ ಬೇಲಿ ಅಳವಡಿಸಿಕೊಳ್ಳಲು ಸಹಾಯಧನ

    ಚಿಕ್ಕಮಗಳೂರು: ಆನೆ ಹಾವಳಿ ತಡೆಗೆ ರೈತರೇ ಸೋಲಾರ್ ಬೇಲಿ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಶೇ.50ರಷ್ಟು ಸರ್ಕಾರದಿಂದ ಸಹಾಯಧನ ನೀಡುತ್ತದೆ. ರೈತರು ಸ್ವಯಂ ಪ್ರೇರಿತರಾಗಿ ಮುಂದೆ ಬಂದರೆ ಸರ್ಕಾರಕ್ಕೆ ವರದಿ ಕಳುಹಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಚ್.ಜಗನ್ನಾಥ್ ಹೇಳಿದರು.

    ವಿಶ್ವ ಆನೆ ದಿನಾಚರಣೆ ಅಂಗವಾಗಿ ಕಾಮೇನಹಳ್ಳಿ ಕಲ್ಲೊಳೆಯಲ್ಲಿ ಅರಣ್ಯ ಇಲಾಖೆ ಬುಧವಾರ ಹಮ್ಮಿಕೊಂಡಿದ್ದ ಕೈಮರದಲ್ಲಿ ಬೈಕ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದರು.

    ಆನೆ ಮತ್ತು ಮಾನವನ ನಡುವೆ ಸಂಘರ್ಷ ನಡೆಯುತ್ತಿರುವಾಗ ಜನರಲ್ಲಿ ಕಾನೂನು ತಿಳಿವಳಿಕೆ ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಲ್ಲೊಳೆಯಲ್ಲಿ ಬೇಟೆ ನಿಗ್ರಹ ಶಿಬಿರ ನಿರ್ವಿುಸಿದ್ದು ದಿನದ 24 ಗಂಟೆ ನಿರಂತರವಾಗಿ ಓರ್ವ ಸಿಬ್ಬಂದಿ ಕರ್ತವ್ಯದಲ್ಲಿರುತ್ತಾರೆ. ಈ ವಿಭಾಗದಲ್ಲಿ 1.18 ಕೋಟಿ ರೂ. ಬೆಳೆ ನಾಶ ಪರಿಹಾರ ನೀಡಲಾಗಿದೆ. ಬೆಳೆಹಾನಿ ಆದಾಕ್ಷಣ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಿದರೆ ನೇರವಾಗಿ ಖಾತೆಗೆ ಪರಿಹಾರ ಜಮಾ ಆಗುತ್ತದೆ ಎಂದರು.

    ಮುಂದಿನ ದಿನಗಳಲ್ಲಿ ಆನೆ ತಡೆ ಕಂದಕಗಳನ್ನು ಮತ್ತಷ್ಟು ಆಳ ಮಾಡಲಾಗುತ್ತದೆ. ಭಾರತೀ ಬೈಲ್​ನಿಂದ ಸಾರಗೋಡುವರೆಗೆ ಕುಂದೂರು ಭಾಗಕ್ಕೆ ಆನೆ ಕಾರಿಡಾರ್​ನ 10 ಕಿಮೀ ದೂರ ಟೆಂಟೆಕಲ್ ಫೆನ್ಸಿಂಗ್ ಅಳವಡಿಸಿದ್ದು, ಅದೇ ರಿತಿ ಇಲ್ಲೂ ಇಪಿಟಿ ಮತ್ತು ಸೋಲಾರ್ ಬೇಲಿ ಅಳವಡಿಸಲಾಗುವುದು ಎಂದರು.

    ಕಾಡು ಪ್ರಾಣಿಗಳ ರಕ್ಷಣೆ ಜತೆಗೆ ಕೃಷಿ ಬೆಳೆಗಳನ್ನು ರಕ್ಷಿಸುವುದೂ ಅರಣ್ಯ ಇಲಾಖೆ ಆದ್ಯತೆ. ಅದೇ ರೀತಿ ವನ್ಯಜೀವಿಗಳ ಪ್ರಾಣಕ್ಕೆ ತೊಂದರೆ ಆಗದಂತೆ ಕೃಷಿಕರೂ ನಡೆದುಕೊಳ್ಳಬೇಕು ಎಂದು ಹೇಳಿದರು.

    ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್ ಮಾತನಾಡಿ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಆನೆ ಪಥ ಅಲ್ಲಲ್ಲಿ ತುಂಡರಿಸಿರುವುದರಿಂದ ಮಾನವ ಮತ್ತು ಆನೆ ಸಂಘರ್ಷ ಹೆಚ್ಚಾಗಿದೆ. ನಾಗರಹೊಳೆ, ಬಂಡಿಪುರ, ಬ್ರಹ್ಮಗಿರಿ, ಸಕಲೇಶಪುರ, ಮೂಡಿಗೆರೆ, ಭದ್ರ ಅಭಯಾರಣ್ಯ, ಉತ್ತರಕನ್ನಡದವರೆಗೂ ಚಾಚಿರುವ ಆನೆ ಪಥದ ಒತ್ತುವರಿಯಿಂದ ಸಮಸ್ಯೆ ಉದ್ಭವಿಸಿದೆ. ಸರ್ಕಾರ ಎಚ್ಚರಿಕೆ ವಹಿಸಿ ಇದನ್ನು ಸರಿದೂಗಿಸಿದರೆ ಸಂಘರ್ಷಕ್ಕೆ ತೆರೆ ಎಳೆಯಬಹುದು ಎಂದರು.

    ತರೀಕೆರೆ, ಕಡೂರು, ಚಿಕ್ಕಮಗಳೂರು ವಿಭಾಗದ ನೂರಕ್ಕೂ ಹೆಚ್ಚು ಸಿಬ್ಬಂದಿ ಮೂರು ತಂಡಗಳಾಗಿ ಬೈಕ್ ಜಾಥಾ ನಡೆಸಿ ಕಲ್ಲೊಳೆಯಲ್ಲಿ ಸಮಾವೇಶಗೊಂಡರು.

    ತಾಪಂ ಸದಸ್ಯ ವೈ.ಜಿ.ಸುರೇಶ್, ಎಸಿಎಫ್ ದಿನೇಶ್, ಆರ್​ಎಫ್​ಒಗಳಾದ ಸ್ವಾತಿ, ತನೂಜ್, ಶರೀಫ, ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಕೆ.ಆರ್.ಅನಿಲ್​ಕುಮಾರ್, ಪರಿಸರ ಪ್ರೇಮಿಗಳಾದ ಮಧು, ಭರತ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts