More

    ಮರಿಯಾನೆಯನ್ನು ಹೆಗಲ ಮೇಲೆ ಹೊತ್ತೊಯ್ದು ತಾಯಿ ಆನೆಯ ಮಡಿಲು ಸೇರಿಸಿದ್ದ ಅರಣ್ಯ ರಕ್ಷಕ, 2017ರ ಟ್ವೀಟ್​ ಮತ್ತೆ ವೈರಲ್​

    ನವದೆಹಲಿ: ಅರಣ್ಯ ರಕ್ಷಕರು ಅರಣ್ಯದ ಕಾವಲು ಕಾಯವುದು ಅಷ್ಟೇ ಅಲ್ಲ, ಗಾಯಗೊಂಡ ಪ್ರಾಣಿಗಳನ್ನು ರಕ್ಷಿಸುವ, ತಾಯಿಯಿಂದ ಬೇರ್ಪಟ್ಟಿರುವ ಮರಿಗಳನ್ನು ತಾಯಿಯ ಮಡಿಲು ಸೇರಿಸುವಂಥ ಮಾನವೀಯ ಕೆಲಸಗಳನ್ನು ಮಾಡುತ್ತಾರೆ.

    ಅದರಂತೆ, 2017ರಲ್ಲಿ ತಮಿಳುನಾಡಿನ ಅರಣ್ಯ ರಕ್ಷಕ ತಮ್ಮ ಪ್ರಾಣವನ್ನು ಲೆಕ್ಕಿಸದೆ 100 ಕೆ.ಜಿ. ಭಾರದ ಮರಿಯಾನೆಯನ್ನು ಹೆಗಲ ಮೇಲೆ ಹೊತ್ತು ಒಂದೆರಡು ಕಿ.ಮೀ. ದೂರದವರೆಗೆ ಸಾಗಿಸಿ, ತಾಯಿ ಆನೆಯೊಂದಿಗೆ ಸೇರಿಸಿದ್ದರು. ಟ್ವಿಟರ್​ನಲ್ಲಿ ಈ ಸುದ್ದಿ ಪ್ರಕಟವಾದ ಬಳಿಕ ಭಾರಿ ವೈರಲ್​ ಆಗಿತ್ತು. ಇದೀಗ ಲಾಕ್​ಡೌನ್​ ಅವಧಿಯಲ್ಲಿ ಫಾರೆಸ್ಟ್​ ಸರ್ವೀಸಸ್​ ಆಫೀಸರ್​ ದೀಪಿಕಾ ಬಾಜಪೇಯಿ ಈ ಟ್ವೀಟ್​ ಅನ್ನು ಮರುಟ್ವೀಟ್​ ಮಾಡಿದ್ದಾರೆ. ಅದೀಗ ಮತ್ತೆ ವೈರಲ್​ ಆಗಿದೆ.

    ತಮಿಳುನಾಡಿನ ಮೆಟ್ಟುಪಾಳ್ಯಂ ಅರಣ್ಯ ಪ್ರದೇಶದಲ್ಲಿ ಈ ಕಥೆಯ ನಾಯಕ ಪಳನಿಚಾಮಿ ಶರತ್​ಕುಮಾರ್​ ಅರಣ್ಯ ರಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದರು. 2017ರ ಡಿಸೆಂಬರ್​ 12ರಂದು ಒಂದು ಹೆಣ್ಣು ಆನೆ ರಸ್ತೆಯನ್ನು ಅಡ್ಡಗಟ್ಟಿ ನಿಂತಿರುವುದಾಗಿ, ಯಾರಿಗೂ ಓಡಾಡಲು ಬಿಡುತ್ತಿಲ್ಲ ಎಂದು ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗೆ ದೂರು ಸಲ್ಲಿಸಿದ್ದರು. ಆಗ ಪಳನಿಚಾಮಿ ಮತ್ತವರ ಸಹೋದ್ಯೋಗಿಗಳು ಸ್ಥಳಕ್ಕೆ ಹೋಗಿ ಪಟಾಕಿಗಳನ್ನು ಸಿಡಿಸಿ, ಹೆದರಿಸಿ ಆನೆಯನ್ನು ಓಡಿಸಿದ್ದರು.

    ನಂತರದಲ್ಲಿ ಅವರೆಲ್ಲರೂ ಜತೆಗೂಡಿ ಹೆಣ್ಣು ಆನೆ ನಿಂತಿದ್ದ ಪ್ರದೇಶದ ಸುತ್ತಮುತ್ತ ಶೋಧ ಕಾರ್ಯಾಚರಣೆ ನಡೆಸಿದಾಗ ಸಣ್ಣ ಕಂದಕದಲ್ಲಿ ಬಿದ್ದಿದ್ದ ಮರಿಯಾನೆಯೊಂದು ಪತ್ತೆಯಾಗಿತ್ತು. ಮೇಲೆ ಬರಲಾಗದೆ ಮರಿಯಾನೆ ಪರಿತಪಿಸುತ್ತಿತ್ತು. ತಕ್ಷಣವೇ ಕಂದಕಕ್ಕೆ ದೊಡ್ಡ ಬಂಡೆಯೊಂದನ್ನು ಉರುಳಿಸಿದ ಪಳನಿಚಾಮಿ ಮತ್ತು ಸಹೋದ್ಯೋಗಿಗಳು ಮೇಲೆ ಬರಲು ಮರಿಯಾನೆಗೆ ಸಹಕರಿಸಿದ್ದರು.

    ಮರಿಯಾನೆ ತುಂಬಾ ಸುಸ್ತಾಗಿತ್ತು. ಅಲ್ಲದೆ, ದಾರಿಗೆ ಅಡ್ಡ ನಿಂತಿದ್ದ ಹೆಣ್ಣಾನೆಯೇ ಇದರ ತಾಯಿ ಎಂಬುದು ಗೊತ್ತಾಗಿತ್ತು. ಆದ್ದರಿಂದ, ತಾಯಿಯೊಂದಿಗೆ ಅದನ್ನು ಸೇರಿಸಲು ನಿರ್ಧರಿಸಲಾಯಿತು. ಆದರೆ, ತನ್ನ ಮರಿಗೆ ಅಪಾಯವಾಗುವ ಭಯದಲ್ಲಿ ಅರಣ್ಯ ರಕ್ಷಕರ ಮೇಲೆ ತಾಯಿ ಆನೆ ದಾಳಿ ಮಾಡುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ತಾವು ಮರಿಯಾನೆಯನ್ನು ಹೊತ್ತು ರಸ್ತೆಯ ಇನ್ನೊಂದು ಬದಿಗೆ ಕೊಂಡೊಯ್ಯಲು ಪಳನಿಚಾಮಿ ಮುಂದಾಗಿದ್ದರು.

    100 ಕೆಜಿ ಭಾರವಿದ್ದ ಮರಿಯನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡು, ಸಾಕಷ್ಟು ದೂರ ನಡೆದ ಅವರು, ನೀರಿನ ಒರಸೆಯಿದ್ದ ಸ್ಥಳದಲ್ಲಿ ಮರಿಯನ್ನು ಇಳಿಸಿದ್ದರು. ಸ್ವಲ್ಪಹೊತ್ತಿನಲ್ಲೇ ಅಲ್ಲಿಗೆ ಬಂದ ತಾಯಿಯಾನೆ ಮರಿಯನ್ನು ಕರೆದೊಯ್ದಿತ್ತು.
    ಬಿಬಿಸಿ ಈ ಬಗ್ಗೆ ಮೊದಲು ವರದಿ ಮಾಡಿ, ಟ್ವೀಟ್​ ಮಾಡಿತ್ತು. ಇದೀಗ ದೀಪಿಕಾ ಬಾಜಪೇಯಿ ಅವರು ಇದನ್ನು ಮರುಟ್ವೀಟ್​ ಮಾಡಿದ್ದಾರೆ. ಇದು ವೈರಲ್​ ಆಗಿದೆ.

    ಯುವರಾಜ್​ ಸಿಂಗ್​ ಪ್ರತಿಷ್ಠಾನಕ್ಕೆ 10 ಸಾವಿರ ಡಾಲರ್​ ದೇಣಿಗೆ ನೀಡಿದ ಶಾಹೀದ್​ ಅಫ್ರಿದಿ, ಪಾಕ್​ ಪತ್ರಕರ್ತನ ಟ್ವೀಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts