More

    ವನ್ಯಜೀವಿಗಳ ದಾಹ ನೀಗಿಸಲು ಸಿದ್ಧತೆ

    ಗುಂಡ್ಲುಪೇಟೆ: ಬೇಸಿಗೆಗೂ ಮೊದಲೇ ಒಣಗಿರುವ ಬಂಡೀಪುರ ಅರಣ್ಯ ಸಂರಕ್ಷಣೆ ಹಾಗೂ ವನ್ಯಜೀವಿಗಳಿಗೆ ಸಮರ್ಪಕ ಕುಡಿಯುವ ನೀರು ಪೂರೈಸಲು ಅರಣ್ಯ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

    ಕೇವಲ ಎರಡು ಮೂರು ತಿಂಗಳ ಹಿಂದೆ ಹಚ್ಚ ಹಸುರಿನಿಂದ ನಳನಳಿಸುತ್ತಿದ್ದ ಬಂಡೀಪುರದಲ್ಲಿ ಮಾರ್ಚ್‌ಗೂ ಮೊದಲೇ ಒಣಗಿ ಮರಗಿಡಗಳು ಭಣಗುಡುತ್ತಿದೆ. ಎತ್ತ ನೋಡಿದರೂ ಒಣಗಿದ ತರಗೆಲೆಗಳು ಹರಡಿ ಅರಣ್ಯ ಪ್ರದೇಶವು ಬಿಕೋ ಎನ್ನುತ್ತಿದೆ.

    ದೊಡ್ಡ ದೊಡ್ಡ ಕೆರೆಗಳಲ್ಲಿ ಅರ್ಧದಷ್ಟು ನೀರಿದ್ದರೆ, ಚಿಕ್ಕ ಕೆರೆಗಳು ಸಂಪೂರ್ಣ ಬತ್ತಿಹೋಗಿವೆ. ಹುಲ್ಲುಗರಿಕೆ, ಮರಗಿಡಗಳು ಒಣಗಿರುವುದರಿಂದ ಸಸ್ಯಾಹಾರಿ ಜೀವಿಗಳಿಗೆ ಮೇವಿನ ಕೊರತೆ ಕಾಡುತ್ತಿದೆ. ಇದರಿಂದ ಆನೆ, ಕಾಟಿ, ಜಿಂಕೆ ಸೇರಿದಂತೆ ಮುಂತಾದ ವನ್ಯಜೀವಿಗಳಿಗೆ ಮೇವು, ನೀರಿನ ಕೊರತೆ ಎದುರಾಗಿದೆ. ಇದರ ಪರಿಣಾಮ ಕಬಿನಿ ಹಿನ್ನೀರಿನತ್ತ ವಲಸೆ ಹೋಗುತ್ತಿವೆ. ಜಿಂಕೆಗಳು ಒಣಗಿದ ಹುಲ್ಲಿನ ನಡುವೆ ಮೇವಿಗಾಗಿ ಅತ್ತಿಂದಿತ್ತ ಓಡಾಡುತ್ತಿವೆ.
    ದಿನೇ ದಿನೆ ಏರುತ್ತಿರುವ ತಾಪಮಾನದಿಂದ ಹುಲಿ ಯೋಜನೆಯ ವ್ಯಾಪ್ತಿಯಲ್ಲಿರುವ 376 ಕೆರೆ ಕಟ್ಟೆಗಳಲ್ಲಿ ನೀರಿನ ಸಂಗ್ರಹ ತೀವ್ರವಾಗಿ ಇಳಿಕೆಯಾಗುತ್ತಿದೆ. ಓಂಕಾರ್ ವಲಯ, ಮದ್ದೂರು ವಲಯ ಹಾಗೂ ಕುಂದಕೆರೆ ವಲಯಗಳ ಬಹುತೇಕ ಕೆರೆ ಕಟ್ಟೆಗಳು ಬರಿದಾಗಿವೆ. ಕೇರಳದಿಂದ ಹರಿದು ಬರುವ ಮೂಲೆಹೊಳೆಯಲ್ಲಿಯೂ ನೀರಿನ ಹರಿವು ಕ್ಷಿಣವಾಗಿದ್ದು, ಈ ಭಾಗದಲ್ಲಿ ಸಂಚರಿಸುವ ವನ್ಯಜೀವಿಗಳು ಹಳ್ಳಗುಂಡಿಗಳಲ್ಲಿ ನಿಂತಿರುವ ನೀರನ್ನೇ ಕುಡಿದು ದಾಹ ತಣಿಸಿಕೊಳ್ಳುತ್ತಿವೆ.

    ಬೆಳಗ್ಗೆಯಿಂದ ಸಂಜೆಯವರೆಗೂ ಬಿರು ಬಿಸಿಲಿನಿಂದ ಬಂಡೀಪುರ ಅರಣ್ಯದಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಸ್ವಲ್ಪ ಕಿಡಿ ಬಿದ್ದರೂ ಬೆಂಕಿ ಭುಗಿಲೇಳುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ನವೆಂಬರ್ ತಿಂಗಳಿನಿಂದಲೇ ಎಲ್ಲ 13 ವಲಯಗಳಲ್ಲಿಯೂ ಫೈರ್‌ಲೈನ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿದೆ. ಕಳೆದ ತಿಂಗಳು ಅರಣ್ಯ ಪ್ರದೇಶದಲ್ಲಿ ಒಣಗಿದ ಕಳೆಗಳನ್ನು ಸುಡುವ ಮೂಲಕ ಆಕಸ್ಮಿಕ ಬೆಂಕಿ ವ್ಯಾಪಿಸದಂತೆ ಮುನ್ನೆಚ್ಚರಿಕೆ ಕ್ರಮಕೈಗೊಂಡಿದೆ. ರಸ್ತೆಗಳಲ್ಲಿ ಸಂಚರಿಸುವ ಪ್ರವಾಸಿಗರಿಂದ ಬೆಂಕಿ ಬೀಳದಂತೆ ಮಾಡಲು ರಸ್ತೆಗಳ ಬದಿಗಳಲ್ಲಿ ವ್ಯೆಲೈನ್ ನಿರ್ಮಾಣ ಮಾಡಲಾಗಿದೆ.
    ಸದ್ಯ ಹುಲಿ ಯೋಜನೆಯ ಆಯ್ದ 47 ಕೆರೆಗಳಿಗೆ ಸೋಲಾರ್ ಮೋಟಾರ್ ಅಳವಡಿಸಿ ಕೊಳವೆ ಬಾವಿಯಿಂದ ನೀರು ತುಂಬಿಸುವ ಮೂಲಕ ವನ್ಯಜೀವಿಗಳ ದಾಹ ತಣಿಸುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts