More

    ಸಾರ್ವಜನಿಕರಿಗೆ ಸೌಲಭ್ಯ ಕಲ್ಪಿಸುವಂತೆ ಒತ್ತಾಯ

    ಹುಣಸೂರು: ನಗರಸಭೆಯ 2024-25ನೇ ಸಾಲಿನ ಬಜೆಟ್ ಮಂಡನೆಗೆ ಸಲಹೆ, ಸೂಚನೆಗಳನ್ನು ಸ್ವೀಕರಿಸಲು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳನ್ನು ವ್ಯಕ್ತಪಡಿಸಿದರು.

    ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪುಟ್ಟರಾಜು ಮಾತನಾಡಿ, ನಗರದಾದ್ಯಂತ ಫುಟ್‌ಪಾತ್ ಒತ್ತುವರಿಯಾಗಿ ಪಾದಚಾರಿಗಳು ರಸ್ತೆಯ ಮೇಲೆ ಸಂಚರಿಸುವಂತಾಗಿದೆ. ಅದರಲ್ಲೂ ನಗರದ ಸಂವಿಧಾನವೃತ್ತದಿಂದ ಕಲ್ಪತರು ವೃತ್ತದವರೆಗೆ ಫುಟ್‌ಪಾತ್‌ಗೆ ಸಿಮೆಂಟ್ ಸ್ಲಾಬ್‌ಗಳನ್ನು ಅಳವಡಿಸಿ ವ್ಯಾಪಾರಿಗಳು ಮತ್ತು ವರ್ತಕರು ವಹಿವಾಟು ನಡೆಸುತ್ತಿದ್ದಾರೆ. ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ಪ್ರಮುಖ ವೃತ್ತಗಳಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆಗೆ ಪದೇ ಪದೆ ನಾಗರಿಕರು ಒತ್ತಾಯಿಸುತ್ತಿದ್ದರೂ ನಗರಸಭೆ ಗಮನಿಸುತ್ತಿಲ್ಲ ಏಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕಲ್ಪತರು ವೃತ್ತದ ಸರ್ಕಾರಿ ಜಾಗದಲ್ಲಿ ಅನಧೀಕೃತ ಶೆಡ್ ನಿರ್ಮಾಣ ಆಗಿದೆ. ಇದರ ತೆರವು ಆಗಿಲ್ಲ. ಗೋಕುಲ ರಸ್ತೆಯಲ್ಲಿ ಏಕಮುಖ ಸಂಚಾರ ನಿಯಮ ಜಾರಿಗೊಂಡಿದ್ದರೂ ಪಾಲನೆಯಾಗುತ್ತಿಲ್ಲ. 2 ಸಾವಿರಕ್ಕೂ ವಿದ್ಯಾರ್ಥಿಗಳು ಸಂಚರಿಸುವ ರಸ್ತೆ ಇದಾಗಿದ್ದು, ಸಂಚಾರ ಸುಗಮಗೊಳಿಸಲು ಕ್ರಮವಹಿಸಬೇಕು. ಮುನೇಶ್ವರ ಕಾವಲ್ ಮೈದಾನದ ಖಾಲಿಯಿರುವ ಭಾಗದಲ್ಲಿ ವಾಕಿಂಗ್‌ಪಾತ್ ನಿರ್ಮಾಣ ಕಾರ್ಯ ಮುಂದುವರಿಸಿ ಕಬ್ಬಿಣದ ಗೋಡೆಗಳನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು.

    ಡೀಡ್ ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ ಮಾತನಾಡಿ, ಕಾಡಿನಿಂದ ಹೊರಬಂದ ಆದಿವಾಸಿಗಳು ಗ್ರಾಮೀಣ ಭಾಗದ ಹಾಡಿಗಳಲ್ಲಿ ಅತಂತ್ರ ಸ್ಥಿತಿಯಲ್ಲೇ ವಾಸಿಸುತ್ತಿದ್ದಾರೆ. ಇದೀಗ ಆದಿವಾಸಿಗಳು ಮುಖ್ಯವಾಹಿನಿಗೆ ಬರಬೇಕೆಂದು ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಹುಣಸೂರು ನಗರವ್ಯಾಪ್ತಿಯಲ್ಲಿ ಒಂದು ಹಾಡಿಯನ್ನು ಸ್ಥಾಪಿಸಿ ನೂರು ಆದಿವಾಸಿ ಕುಟುಂಬಗಳಿಗೆ ನಗರ ವಾತಾವರಣದಲ್ಲಿ ಬಾಳಲು ಅವಕಾಶ ಮಾಡಿಕೊಡುವ ಮಹತ್ತರ ಯೋಜನೆಯನ್ನು ನಗರಸಭೆ ಕೈಗೆತ್ತಿಕೊಳ್ಳಬೇಕು.ನಗರದ ಮಧ್ಯಭಾಗದಲ್ಲಿ ಹರಿಯುವ ಲಕ್ಷ್ಮಣತೀರ್ಥ ನದಿ ಕಲುಷಿತಗೊಂಡಿದ್ದು, ನದಿಯ ಉಳಿವಿಗೆ ಶೀಘ್ರ ಕ್ರಮವಹಿಸಬೇಕು. ಚಿಕ್ಕಹುಣಸೂರು ಕೆರೆ ಸುತ್ತ ವಾಕಿಂಗ್ ಪಾತ್ ದುಸ್ತಿತಿಯಲ್ಲಿದ್ದು, ಅನುದಾನದ ಕೊರತೆಯಿಂದ 4 ವರ್ಷಗಳಿಂದ ಕಾಮಗಾರಿ ಪೂರ್ಣಗೊಳ್ಳದೇ ಅನೈತಿಕ ಟುವಟಿಕೆ ತಾಣವಾಗಿದೆ. ನಗರದ ವಿವಿಧ ವೃತ್ತಗಳು ಮತ್ತು ರಸ್ತೆಗಳಿಗೆ ಮಹನೀಯರ ಹೆಸರು ನಾಮಕರಣ ಮಾಡಬೇಕೆಂದು ಒತ್ತಾಯಿಸಿದರು.
    ಸಭೆಯಲ್ಲಿ ಪರಿಸರ ಇಂಜಿನಿಯರ್ ಎಲ್.ರೂಪಾ, ಹಿರಿಯ ಆರೋಗ್ಯ ನಿರೀಕ್ಷಕ ಸತೀಶ್, ಲೆಕ್ಕಾಧಿಕಾರಿ ವಿನಯ್‌ಕುಮಾರ್, ಮುಖಂಡರಾದ ಶ್ರೀನಿವಾಸ್, ಹರೀಶ್, ಮೊಯುದ್ದೀನ್ ಸೇರಿದಂತೆ ವಿವಿಧ ಸಂಘಟನೆಗಳ ಮುಖ್ಯಸ್ಥರು ಮತ್ತು ನಾಗರಿಕರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts