More

    ಸೋಂಕಿತರಿಗೆ ಮನೆಯಲ್ಲೇ ಆರೈಕೆ

    ಬೆಳಗಾವಿ: ಕೋವಿಡ್-19 ರೋಗದ ಪೂರ್ವ ಲಕ್ಷಣಗಳು ಅಥವಾ ರೋಗ ಲಕ್ಷಣಗಳಿಲ್ಲದಿರುವ ಜಿಲ್ಲೆಯ 664 ಕ್ಕೂ ಅಧಿಕ ಸೋಂಕಿತರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೋಂ ಐಸೋಲೇಷನ್ (ಮನೆಯಲ್ಲಿ ಆರೈಕೆ) ಸೌಲಭ್ಯ ಕಲ್ಪಿಸಿದೆ.

    ಬೆಳಗಾವಿ ಜಿಲ್ಲೆಯು ರಾಜ್ಯದಲ್ಲಿಯೇ ಅತೀ ಹೆಚ್ಚು ಹೋಂ ಐಸೋಲೇಷನ್ ಸೌಲಭ್ಯ ಒದಗಿಸುತ್ತಿರುವ ಜಿಲ್ಲೆಯಾಗಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು ಮತ್ತು ಕೋವಿಡ್-19 ಆಸ್ಪತ್ರೆಗಳಲ್ಲಿ ಹಾಸಿಗೆ, ಊಟ, ಉಪಚಾರ ಸೇರಿದಂತೆ ಇನ್ನಿತರ ಸಮಸ್ಯೆ ಉಂಟಾಗುತ್ತಿರುವ ಬೆನ್ನಲ್ಲೆ ಮನೆಯಲ್ಲೇ ಇಲಾಖೆ ಈ ಕ್ರಮಕ್ಕೆ ಮುಂದಾಗಿದೆ.

    ಸದ್ಯ ಜಿಲ್ಲೆಯಲ್ಲಿ ತಾಲೂಕು, ಖಾಸಗಿ ಹಾಗೂ ಸರ್ಕಾರಿ ವಸತಿ ನಿಲಯಗಳಲ್ಲಿ 300 ಬೆಡ್‌ಗಳ ಸೌಲಭ್ಯ ಹೊಂದಿರುವ ಕೋವಿಡ್ ಕೇರ್ ಆರಂಭಿಸಿಲಾಗಿದೆ. ಆದರೆ, ಒಂದು ವಾರದ ಅವಧಿಯಲ್ಲಿ 44,479 ಜನರ ಮೇಲೆ ತೀವ್ರ ನಿಗಾವಹಿಸಲಾಗುತ್ತಿದ್ದು, 2,387 ಜನರನ್ನು ವಿವಿಧ ಕೋವಿಡ್-19 ಆಸ್ಪತ್ರೆಗಳಲ್ಲಿ ಐಸೋಲೇಷನ್ ಮಾಡುವ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ 200 ಬೆಡ್‌ಗಳನ್ನು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಿಲ್ಲಾಡಳಿತ ಮೂಲಕ ಒಟ್ಟು ಕರೊನಾ ಸೋಂಕಿತರ ಆರೈಕೆಗಾಗಿ 500 ಬೆಡ್‌ಗಳ ವ್ಯವಸ್ಥೆ ಮಾಡಲಾಗಿದೆ.

    ಸಿಬ್ಬಂದಿಯಿಂದ ಆರೈಕೆ: ಹೋಂ ಐಸೋಲೇಷನ್‌ನಲ್ಲಿರುವ ಸೋಂಕಿತರ ಮೇಲೆ ನಿಗಾ ವಹಿಸುವ ಉದ್ದೇಶದಿಂದಲೇ ಸ್ಥಳೀಯ ಪ್ರಾಥಮಿಕ ಅಥವಾ ಸಮುದಾಯ ಆರೋಗ್ಯ ಕೇಂದ್ರದಲ್ಲಿರುವ ಒಬ್ಬ ವೈದ್ಯಾಧಿಕಾರಿ, ಒಬ್ಬ ಆರೋಗ್ಯ ಸಿಬ್ಬಂದಿಯನ್ನು ಚಿಕಿತ್ಸೆಗೆ ನಿಯೋಜಿಸಲಾಗುತ್ತಿದೆ. ಈ ಸಿಬ್ಬಂದಿ ನಿರಂತರವಾಗಿ ರೋಗಿಯ ಪರ್ಕದಲ್ಲಿದ್ದುಕೊಂಡು ಮಾಹಿತಿ ಪಡೆಯುತ್ತಿರುತ್ತಾರೆ. ಅಗತ್ಯವಿದ್ದಾಗ ಮಾತ್ರ ಸಾಮಾನ್ಯ ಔಷಧಗಳನ್ನು (ಜ್ವರ, ಶೀತ ನಿವಾರಣೆಗೆ) ನೀಡಲಾಗುತ್ತದೆ.

    ಸರ್ಕಾರದ ಮಾರ್ಗಸೂಚಿ ಪ್ರಕಾರ 17 ದಿನ ಮನೆ ಆರೈಕೆ ಮಾಡಬೇಕು. ಆದರೆ, 10 ದಿನಗಳವರೆಗೆ ಜ್ವರ ಇಲ್ಲದಿದ್ದರೆ ಆರೈಕೆ ಅವಧಿ ಮುಗಿಯುತ್ತದೆ. ಜಿಲ್ಲೆಯಲ್ಲಿ ಪತ್ತೆಯಾಗಿರುವ ಒಟ್ಟು ಸೋಂಕಿತರಲ್ಲಿ ಶೇ. 60ಕ್ಕೂ ಅಧಿಕ ಮಂದಿ ಲಕ್ಷಣರಹಿತವಾಗಿದ್ದಾರೆ. ಬಹುತೇಕ ಯುವಜನರಲ್ಲಿ ಹಾಗೂ ಮಕ್ಕಳಲ್ಲಿ ಲಕ್ಷಣ ಕಂಡು ಬರುವುದಿಲ್ಲ. ಅಥವಾ ಅತೀ ಕಡಿಮೆ ಲಕ್ಷಣಗಳಿರುತ್ತವೆ ಎಂದು ಕೋವಿಡ್-19 ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

    ತಕ್ಷಣ ಆಸ್ಪತ್ರೆಗೆ ದಾಖಲು: ಸದ್ಯ ಜಿಲ್ಲೆಯಲ್ಲಿ 664ಕ್ಕೂ ಅಧಿಕ ಸೋಂಕಿತರಿಗೆ ಹೋಂ ಐಸೋಲೇಷನ್ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ರೋಗಿಗೆ ಉಸಿರಾಟದ ತೊಂದರೆ, ಎದೆನೋವು, ತುಟಿ, ಮುಖ, ಚರ್ಮ ನೀಲಿ ಬಣ್ಣಕ್ಕೆ ತಿರುಗುವುದು ಮತ್ತಿತರ ಲಕ್ಷಣ ಕಂಡು ಬಂದರೆ ಕೂಡಲೇ ಸಿಬ್ಬಂದಿ ಚಿಕಿತ್ಸೆ ಒದಗಿಸುತ್ತಾರೆ ಅಥವಾ ಆಸ್ಪತ್ರೆಗೆ ದಾಖಲಿಸುತ್ತಾರೆ. ಈ ಕುರಿತು ಅವರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಲಾಗಿದೆ. 40 ಮತ್ತು 30 ವರ್ಷ ಆಸುಪಾಸಿನಲ್ಲಿರುವ ಸೋಂಕಿತರಿಗೆ ಮಾತ್ರ ಹೋಂ ಐಸೋಲೇಷನ್ ವ್ಯವಸ್ಥೆ ಮಾಡಲಾಗುತ್ತಿದೆ. ಹಿರಿಯ ನಾಗರಿಕರು, ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವ ಸೋಂಕಿತರನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎಸ್.ವಿ.ಮುನ್ನೊಳಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ 200 ಬೆಡ್‌ಗಳ ಸೌಲಭ್ಯ ಕಲ್ಪಿಸಲಾಗುತ್ತಿದೆ. ಅಗತ್ಯ ಸೌಲಭ್ಯಗಳನ್ನು ಹೊಂದಿರುವವರಿಗೆ ಹೋಂ ಐಸೋಲೇಷನ್ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಹೆದರುವ ಅವಶ್ಯಕತೆಯಿಲ್ಲ.
    | ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

    | ಮಂಜುನಾಥ ಕೋಳಿಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts