More

    ದೇಶಕ್ಕಾಗಿ ನಾವೆಲ್ಲ ಒಂದಾಗಿರೋಣ

    ಬೆಳಗಾವಿ: ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಮಹಾರಾಜರು ವೀರ ಪುರುಷರು. ಇಂದು ಅವರಿಬ್ಬರೂ ಒಂದೇ ಕಡೆ ಇದ್ದಾರೆ. ಅದಕ್ಕಾಗಿ ನಾವೆಲ್ಲ ಒಂದಾಗಿರಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

    ಬೆಳಗಾವಿ ತಾಲೂಕಿನ ಪೀರನವಾಡಿ ಗ್ರಾಮದಲ್ಲಿ ಪ್ರತಿಷ್ಠಾನೆಗೊಂಡಿರುವ ಸಂಗೊಳ್ಳಿ ರಾಯಣ್ಣ ಮತ್ತು ಈ ಮೊದಲೇ ಇದ್ದ ಶಿವಾಜಿ ಮಹಾರಾಜರ ಮೂರ್ತಿಗೆ ಅಬಕಾರಿ ಸಚಿವ ಎಚ್.ನಾಗೇಶ, ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

    ಮಾದರಿ ಗ್ರಾಮವಾಗಲಿ: ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಸಂಗೊಳ್ಳಿ ರಾಯಣ್ಣ ತನ್ನ ಪ್ರಾಣವನ್ನೇ ಒತ್ತೆ ಇಟ್ಟು ತಾಯಿ ಚನ್ನಮ್ಮಳ ಮಾರ್ಗದರ್ಶನದಂತೆ ಹೋರಾಟ ಮಾಡಿದ ವೀರ. ಮತ್ತೊಂದೆಡೆ, ಹಿಂದು ಸ್ವರಾಜ್ಯ ಮಾಡಬೇಕು ಎಂದು ಸಂಕಲ್ಪ ತೊಟ್ಟು ಹೋರಾಡಿದ ವೀರ ಛತ್ರಪತಿ ಶಿವಾಜಿ ಮಹಾರಾಜರು. ಇಬ್ಬರೂ ವೀರ ಪುರುಷರು. ಇವತ್ತು ಅವರಿಬ್ಬರೂ ಒಂದೇ ಕಡೆ ಇದ್ದಾರೆ. ಹಾಗಾಗಿ ನಾವೂ ಕೂಡ ಇಲ್ಲಿ ಭಾಷೆ, ಜಾತಿ, ಪ್ರಾಂತ ನೋಡಬಾರದು. ನಾವೆಲ್ಲ ದೇಶಕ್ಕಾಗಿ ಒಂದಾಗಿರಬೇಕು. ಪೀರನವಾಡಿ ಗ್ರಾಮ ದೇಶಕ್ಕೆ ಮಾದರಿಯಾಗಿರಬೇಕು. ಆ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಶ್ರಮಿಸಬೇಕು ಎಂದು ಹೇಳಿದರು.

    ಒಳ್ಳೆಯ ಬೆಳವಣಿಗೆ: ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಪೀರನವಾಡಿಯಲ್ಲಿ ಪ್ರತಿಷ್ಠಾನಗೊಂಡಿರುವ ಸಂಗೊಳ್ಳಿ ರಾಯಣ್ಣ ಪ್ರತಿಮೆ ಕುರಿತು ಗೆಜೆಟ್ ನೋಟಿಫಿಕೇಶನ್ ಹೊರಡಿಸಲು ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿವಾದ ಶುಕ್ರವಾರವೇ ಸುಖಾಂತ್ಯವಾಗಿರುವುದು ಒಳ್ಳೆಯ ಬೆಳವಣಿಗೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಇಬ್ಬರೂ ದೇಶದ ಮಹಾಪುರುಷರು.

    ಅವರಿಬ್ಬರೂ ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಇಬ್ಬರೂ ನಮ್ಮ ಸಮಾಜದ, ದೇಶದ ಆಸ್ತಿಯಾಗಿದ್ದಾರೆ ಎಂದು ಹೇಳಿದರು. ವಿಧಾನಸಭೆಯ ಉಪಸಭಾಧ್ಯಕ್ಷ ಆನಂದ ಮಾಮನಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಇತರರು ಇದ್ದರು.

    ಕಾನೂನಾತ್ಮಕ ಸಮಸ್ಯೆ ಪರಿಹರಿಸುವ ಭರವಸೆ

    ಪೀರನವಾಡಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ನಿರಂತರ ಹೋರಾಟ ನಡೆಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ರಾಯಣ್ಣನ ಅಭಿಮಾನಿಗಳು ಹಾಗೂ ಅದಕ್ಕೆ ಸಂಪೂರ್ಣ ಪ್ರಯತ್ನ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಾಜ್ಯದ ಜನತೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಯಣ್ಣ ಮೂರ್ತಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇರುವುದರಿಂದ ಕಾನೂನಾತ್ಮಕವಾಗಿ ಸಮಸ್ಯೆ ಬಂದಾಗ ಅದನ್ನು ಪರಿಹರಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಅವರು ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts