More

    ಸುಗಮ ಸಂಚಾರಕ್ಕೆ ಬೇಕು ಸೂಕ್ತ ನಿರ್ಧಾರ

    ಹೇಮನಾಥ ಪಡುಬಿದ್ರಿ

    ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಹಿತ ಸರ್ವೀಸ್ ರಸ್ತೆ ಕಾಮಗಾರಿ ಪೂರ್ಣಗೊಳ್ಳುವತ್ತ ಸಾಗಿದೆ. ಈಗ ಸುಗಮ ಸಂಚಾರಕ್ಕೆ ಸೂಕ್ತ ಮಾರ್ಗೋಪಾಯ ಕಂಡುಕೊಳ್ಳುವ ಅನಿವಾರ್ಯತೆ ಗ್ರಾಮ ಪಂಚಾಯಿತಿ ಹಾಗೂ ಪೊಲೀಸರಿಗೆ ಎದುರಾಗಿದೆ.

    ಮಂಗಳೂರು, ಉಡುಪಿ, ಕಾರ್ಕಳ ಸಹಿತ ಗ್ರಾಮೀಣ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ಪಟ್ಟಣವಾಗಿರುವ ಪಡುಬಿದ್ರಿ ಪೇಟೆಯಲ್ಲಿ ಬಸ್, ಟ್ಯಾಕ್ಸಿ, ಟೆಂಪೋ ಸಹಿತ ಆಟೋ ನಿಲ್ದಾಣ ಎಲ್ಲಿ ನಿರ್ಮಾಣವಾಗಬೇಕೆಂಬ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವಲ್ಲಿ ಗ್ರಾಪಂ ವಿಫಲವಾಗಿದೆ. ಬಸ್ ನಿಲ್ದಾಣಕ್ಕಾಗಿ ಈಗಾಗಲೇ ಕೆಲವು ಜಾಗ ಗುರುತಿಸಿದರೂ, ಅದು ಅಂತಿಮವಾಗದೆ ಹಿನ್ನಡೆಯಾಗಿದೆ. ಇದರಿಂದ ಬಸ್ ಪ್ರಯಾಣಿಕರಿಗೆ ಪರದಾಡುವ ಕಷ್ಟ ತಪ್ಪಿಲ್ಲ. ಟ್ಯಾಕ್ಸಿ ಸಹಿತ ಆಟೋರಿಕ್ಷಾ ನಿಲ್ದಾಣಗಳಿಗೂ ಸ್ಥಳಾವಕಾಶ ಇಲ್ಲದೆ ಅವರ ಬೇಡಿಕೆಯೂ ಈಡೇರಿಲ್ಲ. ಪ್ರಸ್ತುತ ಸರ್ವೀಸ್ ರಸ್ತೆಯಲ್ಲೇ ಆಟೋ ಹಾಗೂ ಕಾರು ನಿಲ್ಲುತ್ತಿದ್ದು, ಇದರಿಂದ ಪಾದಚಾರಿಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಬಸ್‌ಗಳಂತೂ ಸರ್ವೀಸ್ ರಸ್ತೆಗಿಳಿಯದೆ ಹೆದ್ದಾರಿಯಲ್ಲೇ ಪ್ರಯಾಣಿಕರನ್ನು ಹತ್ತಿ ಇಳಿಸುತ್ತಿರುವುದು ಅನಾಹುತಕ್ಕೆ ಆಹ್ವಾನ ನೀಡಿದಂತೆಯೇ.

    ಪಾದಚಾರಿಗಳಿಗೆ ಜೀವ ಭಯ: ಚತುಷ್ಪಥ ಸಹಿತ ಸರ್ವೀಸ್ ರಸ್ತೆ ದಾಟಿ ಅಗತ್ಯ ವಸ್ತುಗಳ ಖರೀದಿ ಮತ್ತು ಬಸ್‌ಗೆ ಜನ ಅತ್ತಿಂದಿತ್ತ ಅಡ್ಡಾಡಬೇಕಾದರೆ ಜೀವ ಕೈಯಲ್ಲಿ ಹಿಡಿದು ಸಾಗಬೇಕು. ರಸ್ತೆ ನಿರ್ಮಾಣಕ್ಕಾಗಿ ಪರಿಹಾರ ನೀಡಿ ಕಟ್ಟಡಗಳನ್ನು ತೆರವು ಮಾಡಿದ್ದರೂ, ಸರ್ವೀಸ್ ರಸ್ತೆಗೆ ಹೊಂದಿಕೊಂಡೇ ಗ್ರಾಹಕರ ವಾಹನ ನಿಲುಗಡೆಗೂ ಅವಕಾಶವಿಲ್ಲದೆ ಮತ್ತೆ ವಾಣಿಜ್ಯ ಮಳಿಗೆಗಳನ್ನು ಮರು ನಿರ್ಮಾಣ ಮಾಡಲಾಗಿದೆ. ಪರಿಣಾಮ ಪಾದಚಾರಿ ಮಾರ್ಗಕ್ಕೇ ಕಂಟಕ ಎದುರಾಗಿದೆ. ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಗ್ರಾಹಕರು ಸರ್ವೀಸ್ ರಸ್ತೆಯಲ್ಲೇ ವಾಹನಗಳನ್ನು ನಿಲುಗಡೆ ಮಾಡುತ್ತಿದ್ದಾರೆ. ಪಟ್ಟಣದ ಬೆಳವಣಿಗೆ ದೃಷ್ಟಿಯಿಂದ ಗ್ರಾಪಂ ಆಡಳಿತ ಸೂಕ್ತ ವ್ಯವಸ್ಥೆಗೆ ದೃಢ ನಿರ್ಧಾರ ಕೈಗೊಳ್ಳಬೇಕೆಂಬುವುದು ಸಾರ್ವಜನಿಕರ ಆಶಯ.


    ಸರ್ವೀಸ್ ರಸ್ತೆ ಕೆಲಸ ಶೀಘ್ರ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಸುಗಮ ಸಂಚಾರ ದೃಷ್ಟಿಯಿಂದ ಗ್ರಾಪಂ ಮುಂಭಾಗದಲ್ಲೇ ಬಸ್ ನಿಲ್ದಾಣ ನಿರ್ಮಿಸುವಂತೆ ಗ್ರಾಪಂಗೆ ಸೂಚಿಸಲಾಗುವುದು. ಆಟೋ ಚಾಲಕರು ಬಸ್ ನಿಲ್ದಾಣಕ್ಕೆ ಹೊಂದಿಕೊಂಡೇ ನಿಲ್ದಾಣ ನಿರ್ಮಿಸಿಕೊಡುವಂತೆ ಪಟ್ಟು ಹಿಡಿದಿದ್ದಾರೆ. ಸರ್ವೀಸ್ ರಸ್ತೆಯಲ್ಲಿ ಯಾವುದೇ ವಾಹನಗಳ ನಿಲುಗಡೆಗೆ ಅವಕಾಶ ನೀಡಲಾಗದು. ಹೆದ್ದಾರಿ ವಿಭಜಕದಿಂದ ಪಡುಬಿದ್ರಿ ದೇವಸ್ಥಾನಕ್ಕೆ ಸಂಪರ್ಕಿಸಲು ಡೌನ್‌ಟೌನ್ ಬಳಿ ಕಲ್ಪಿಸಿರುವ ಅವೈಜ್ಞಾನಿಕ ಹಾಗೂ ಅಪಾಯಕಾರಿ ತಿರುವನ್ನು ಶಾಶ್ವತವಾಗಿ ಮುಚ್ಚಲಾಗುವುದು. ಪಶ್ಚಿಮ ಭಾಗದ ಹೆದ್ದಾರಿಯಿಂದ ಹಾಗೂ ಸರ್ವೀಸ್ ರಸ್ತೆಯಿಂದಲೇ ದೇವಳಕ್ಕೆ ಸಾಗಲು ಅವಕಾಶ ಕಲ್ಪಿಸಲಾಗುವುದು.
    ದಿಲೀಪ್ ಜಿ.ಆರ್.
    ಪಡುಬಿದ್ರಿ ಠಾಣಾಧಿಕಾರಿ

    ಸುಗಮ ಸಂಚಾರ ದೃಷ್ಟಿಯಿಂದ ಉಡುಪಿ ಹಾಗೂ ಕಾರ್ಕಳ ಕಡೆ ಸಂಚರಿಸುವ ಬಸ್‌ಗಳಿಗೆ ಅನುಕೂಲವಾಗುವಂತೆ ಗ್ರಾಪಂ ಮುಂಭಾಗದಲ್ಲೇ ಮೂಲಸೌಕರ್ಯ ಕಲ್ಪಿಸಿ ಬಸ್ ನಿಲ್ದಾಣ ನಿರ್ಮಿಸುವುದು ಸೂಕ್ತ. ಪೇಟೆಯಲ್ಲಿ ಸಮರ್ಪಕ ಬಸ್ ನಿಲ್ದಾಣವಿಲ್ಲದೆ ಪ್ರಯಾಣಿಕರು ಸಂಕಷ್ಟಪಡುತ್ತಿದ್ದಾರೆ. ಗ್ರಾಮೀಣ ಭಾಗಕ್ಕೆ ತೆರಳುವ ಬೆರಳೆಣಿಕೆ ಸರ್ವೀಸ್ ಬಸ್‌ಗಳು ಕಾಲಾವಕಾಶವಿರುವುದರಿಂದ ಸಾಯಂಕಾಲ ನಿಲ್ದಾಣದಲ್ಲಿ ಹೆಚ್ಚು ಹೊತ್ತು ನಿಲ್ಲುತ್ತಿವೆ. ಸಂಚಾರ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಪೊಲೀಸರು ಸೂಕ್ತವಾಗಿ ಪ್ರಕಟಿಸಿದಲ್ಲಿ ಪ್ರಯಾಣಿಕರು ಹಾಗೂ ಬಸ್‌ನವರಿಗೂ ಅನುಕೂಲವಾಗಲಿದೆ.
    ಲೋಕೇಶ್, ಪಡುಬಿದ್ರಿ

    ಪಡುಬಿದ್ರಿ ಪೇಟೆ ಭಾಗದಲ್ಲಿಯೇ ಮಂಗಳೂರು ಹಾಗೂ ಉಡುಪಿ ಕಡೆ ಸಂಚರಿಸುವ ಭಾಗದಲ್ಲಿ ಬಸ್ ನಿಲ್ದಾಣ ಮಾಡುವ ಬಗ್ಗೆ ತೀರ್ಮಾನಿಸಿ ಒಂದೂವರೆ ವರ್ಷದ ಹಿಂದೆ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿತ್ತು. ಟ್ಯಾಕ್ಸಿ ಸಹಿತ ಆಟೋ ನಿಲ್ದಾಣದ ಬಗ್ಗೆ ಸರ್ವೀಸ್ ರಸ್ತೆ ಪೂರ್ಣಗೊಂಡ ಬಳಿಕ ನಿರ್ಧರಿಸಲಾಗುವುದು.
    ಪಂಚಾಕ್ಷರಿ ಸ್ವಾಮಿ ಕೆರಿಮಠ
    ಪಡುಬಿದ್ರಿ ಗ್ರಾಪಂ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts