More

    ಕಾರ್ಯಕರ್ತರಿಗೆ ಅಧಿಕಾರ ನೀಡಲು ಪ್ರಯತ್ನ

    ರಾಯಚೂರು: ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ರಾಜಕೀಯ ಪ್ರಾತಿನಿಧ್ಯ ನೀಡಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಹೇಳಿದರು.

    ಸ್ಥಳೀಯ ಎಪಿಎಂಸಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ರಾಜಕೀಯ ಅಧಿಕಾರ ನೀಡಬೇಕಾಗಿದೆ ಎಂದರು.

    ವಾರದೊಳಗೆ ನಿಗಮ ಮಂಡಳಿಗೆ ನಾಮನಿರ್ದೇಶನ ಪೂರ್ಣಗೊಳಿಸಲಾಗುತ್ತಿದ್ದು, ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷ ಕಾರ್ಯಕರ್ತರು ಪಕ್ಷವನ್ನು ಗೆಲ್ಲಿಸುವ ಮೂಲಕ ಅಧಿಕಾರ ಹಿಡಿಯಲು ಶ್ರಮವಹಿಸಿ ಕೆಲಸ ಮಾಡಬೇಕು. ಕಾಂಗ್ರೆಸ್ ಸರ್ಕಾರ ಚುನಾವಣೆ ಮುಂಚೆ ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದು, ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಪ್ರತಿ ಬೂತ್‌ಗೆ ಇಬ್ಬರು ಕಾರ್ಯಕರ್ತರನ್ನು ನೇಮಕ ಮಾಡಲಾಗುವುದು ಎಂದು ತಿಳಿಸಿದರು.

    ಇದನ್ನೂ ಓದಿ: ಪಂಚಾಯತ್​ ಚುನಾವಣೆ; ಪಕ್ಷೇತರ ಅಭ್ಯರ್ಥಿಯ ಪುತ್ರಿ ಹಣೆಗೆ ಗುಂಡು

    ರಾಯಚೂರು ಎಪಿಎಂಸಿ ದೇಶದಲ್ಲಿಯೇ ಹೆಸರು ಪಡೆದಿದ್ದು, ರೈತರಿಗೆ ಮಾರುಕಟ್ಟೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಹಾಗೂ ಅನ್ಯಾಯವಾಗದಂತೆ ಆಡಳಿತ ಮಂಡಳಿ ನೋಡಿಕೊಳ್ಳಬೇಕು. ಕೃಷಿಕರು ತಾವು ಬೆಳೆದ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುತ್ತದೆ ಎಂದು ಮಾರುಕಟ್ಟೆಗೆ ತರುತ್ತಿದ್ದು, ಅವರಿಗೆ ಅನುಕೂಲ ಕಲ್ಪಿಸುವ ಕೆಲಸವಾಗಬೇಕು. ಸಮಿತಿ ಸದಸ್ಯರು ಕೇವಲ ಸಭೆಗಳಿಗೆ ಸಿಮೀತವಾಗದೆ ಮಾರುಕಟ್ಟೆಯಲ್ಲಿ ರೈತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸಲು ಹಾಗೂ ಮಾರುಕಟ್ಟೆ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.

    ಕೆಪಿಸಿಸಿ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿ, ರಾಜ್ಯದಲ್ಲಿ ಪ್ರಥಮವಾಗಿ ರಾಯಚೂರು ಎಪಿಎಂಸಿ ಆಡಳಿತ ಮಂಡಳಿಗೆ ನಾಮ ನಿರ್ದೇಶನ ಮಾಡುವಲ್ಲಿ ಶಾಸಕ ಬಸನಗೌಡ ದದ್ದಲ್ ಕಾರಣರಾಗಿದ್ದಾರೆ. ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರನ್ನು ಗುರುತಿಸಿ ಅವರಿಗೆ ಸ್ಥಾನಮಾನ ನೀಡುವ ಶಾಸಕರ ಕಾರ್ಯ ಶ್ಲಾಘನೀಯ ಎಂದರು.

    ಈ ಸಂದರ್ಭದಲ್ಲಿ ನೂತನವಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಂಡ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಸದಸ್ಯರಾದ ನಾರಾಯಣ, ಗೋವಿಂದಪ್ಪ, ರಾಜಶೇಖರ ರಂಗಾ, ನರಸಮ್ಮ, ತಿಮ್ಮಪ್ಪ, ರಾಮುಲು, ಮಹಾದೇವಮ್ಮ, ಹನುಮಂತು, ಸತ್ಯಮ್ಮ ಪ್ರತಿಜ್ಞಾವಿಧಿ ಸ್ವೀಕರಿಸಿದರು.
    ಕಾರ್ಯಕ್ರಮದಲ್ಲಿ ಎಪಿಎಂಸಿ ಕಾರ್ಯದರ್ಶಿ ಆದಪ್ಪಗೌಡ, ಕಾಂಗ್ರೆಸ್ ಮುಖಂಡರಾದ ಕೆ.ಪಂಪಾಪತಿ, ಸಿದ್ದನಗೌಡ ಗಾರಲದಿನ್ನಿ, ಕೆ.ಶರಣಪ್ಪ, ತಾಯಣ್ಣ ನಾಯಕ, ಜಯವಂತರಾವ ಪತಂಗೆ, ಬೂದೆಪ್ಪ ಬೇವಿನ್, ಡಿ.ಜಿ.ಕೇಶವ, ಬಸನಗೌಡ ತುರಕನಡೋಣಿ, ನಾಗೇಂದ್ರಪ್ಪ ಮಟಮಾರಿ ಉಪಸ್ಥಿತರಿದ್ದರು.

    ಬದಲಾದ ಸದಸ್ಯರ ಪಟ್ಟಿ:

    ಎಪಿಎಂಸಿ ಆಡಳಿತ ಮಂಡಳಿ ನಾಮನಿರ್ದೇಶನಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ನಡುವೆ ಜಟಾಪಟಿ ನಡೆದಿದ್ದರಿಂದ ಒಂದೇ ದಿನದಲ್ಲಿ ಸಹಕಾರ ಇಲಾಖೆ ಅಧೀನ ಕಾರ್ಯದರ್ಶಿ ಪಿ.ಎನ್.ನಾಗರಾಜ, ಎರಡು ಆದೇಶ ಹೊರಡಿಸುವಂತಾಗಿದೆ. ಜೂ.4ರಂದು ನಾಮನಿರ್ದೇಶನಗೊಂಡ ಸದಸ್ಯರ ಪಟ್ಟಿ ಬಿಡುಗಡೆಗೊಂಡರೆ ಶುಕ್ರವಾರ ಮಧ್ಯಾಹ್ನ ಪಟ್ಟಿ ತಡೆಹಿಡಿದು ಪಿ.ಎನ್.ನಾಗರಾಜ ಆದೇಶ ಹೊರಡಿಸಿದ್ದರು. ರಾತ್ರಿ ಪುನಃ ಪಟ್ಟಿಯಲ್ಲಿನ ಮೂವರ ಹೆಸರನ್ನು ಬಿಟ್ಟು ಸಮಿತಿಯನ್ನು ಯಥಾವತ್ ಮುಂದುವರಿಸಲು ಆದೇಶ ಹೊರಡಿದ್ದರು. ಶಾಸಕ ಬಸನಗೌಡ ದದ್ದಲ್ ಕೊನೆಗೂ ನಾಮನಿರ್ದೇಶನ ಮುಂದುವರಿಯುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ರಾಜಕೀಯ ವೇದಿಕೆ

    ಎಪಿಎಂಸಿ ಆಡಳಿತ ಮಂಡಳಿ ಸದಸ್ಯರ ಪದಗ್ರಹಣ ಸರ್ಕಾರಿ ಕಾರ್ಯಕ್ರಮವಾಗಿದ್ದರೂ ಕಾಂಗ್ರೆಸ್ ಮುಖಂಡರು ವೇದಿಕೆ ಮೇಲೆ ಆಸೀನರಾಗುವ ಮೂಲಕ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿದ್ದರು. ಆಡಳಿತ ಮಂಡಳಿಗೆ ನಾಮನಿರ್ದೇಶನಗೊಂಡ ಸದಸ್ಯರಿಗೆ ಕುಳಿತುಕೊಳ್ಳಲು ಆಸನವಿಲ್ಲದಂತೆ ಪಕ್ಷದ ಮುಖಂಡರು ವೇದಿಕೆಯಲ್ಲಿ ಕುಳಿತುಕೊಂಡಿದ್ದರು. ಎಪಿಎಂಸಿ ಸಿಬ್ಬಂದಿ ಸದಸ್ಯರಿಗೆ ಆಸನಗಳನ್ನು ತಂದು ನೀಡುವಂತಾಯಿತು. ಅದರಲ್ಲೂ ಪಕ್ಷದ ಮುಖಂಡರು ಮುಂಭಾಗದಲ್ಲಿ ಕುಳಿತುಕೊಂಡಿರುವುದು ಅಧಿಕಾರಿಗಳಿಗೆ ಇರಿಸುಮರುಸು ಉಂಟಾಗುವಂತೆ ಮಾಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts