More

    ಕಿರುಸೇತುವೆ ಸಂಪರ್ಕ ಕೊಂಡಿ ಕಣ್ಮರೆ

    ಶ್ರೀಪತಿ ಹೆಗಡೆ ಹಕ್ಲಾಡಿ ಮಡಾಮಕ್ಕಿ
    ಸೋಮೇಶ್ವರ, ಸೀತಾನದಿ, ಮಡಾಮಕ್ಕಿ, ಆರ್ಡಿ, ಬೆಳ್ವೆ ನಕ್ಸಲೈಟ್ ಸಂಚಾರ ಮೂಲಕ ಕುಖ್ಯಾತಿಗೆ ಬಂದಿದ್ದು ಹಳ್ಳಿಗರ ಮನಸ್ಸಿಂದ ಗಟ್ಟಿಯಾಗಿ ಕೂತಿದೆ. ನಕ್ಸಲೈಟ್ ಪ್ಯಾಕೇಜ್ ಮೂಲಕ ನಕ್ಸಲ್ ಪ್ರಭಾವಿತ ಪರಿಸರಗಳ ಉದ್ಧಾರದ ಮೂಲಕ ನಕ್ಸಲೈಟ್ ಪ್ರಭಾವ ತಗ್ಗಿಸುವ ಘೋಷಣೆ ಸರ್ಕಾರ ಮರೆತಿದ್ದರಿಂದ ಈ ಪ್ರದೇಶಗಳಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ.

    ಹೆಬ್ರಿ ತಾಲೂಕು ಪಶ್ಚಿಮ ಘಟ್ಟದ ಮಗ್ಗಲಲ್ಲಿರುವ ಮಡಾಮಕ್ಕಿ ಗ್ರಾಮ ಎಡ್ಮಲೆ ಎಂಬ ಪುಟ್ಟಹಳ್ಳಿಯೂ ಇಂತಹ ಸಮಸ್ಯೆ ಎದುರಿಸುತ್ತಿದೆ. ದಶಕದ ಹಿಂದೆ ನಿರ್ಮಿಸಿದ ಕಿರು ಸೇತುವೆ ಇಲ್ಲಿದ್ದು, ಆದರೆ ಕಿರುಸೇತುವೆ ಎರಡು ಬದಿಗಳಲ್ಲಿ ಸಂಪರ್ಕಕ್ಕೆ ಸೂಕ್ತ ವ್ಯವಸ್ಥೆ ಇಲ್ಲ. ಒಂದು ಕಡೆ ಅಡಕೆ ಮರದ ತುಂಡುಗಳನ್ನು ಹಾಸಿದ್ದರೆ, ಇನ್ನೊಂದು ಬದಿಗೆ ಕಲ್ಲುಗಳ ರಾಶಿ ಹಾಕಿ ಸಂಪರ್ಕ ಕಲ್ಪಿಸಲಾಗಿದೆ. ಮಳೆಗಾಲದಲ್ಲಿ ಇದರ ಮೇಲೆ ಸಾಗುವುದು ಸಾಹಸವೇ ಸರಿ. ಪ್ರತೀ ಚುನಾವಣೆ ಬಂದಾಗಲೂ ಓಟಿಗಾಗಿ ಬಂದವರು ಈಬಾರಿ ಸಮಸ್ಯೆ ಪರಿಹಾರ ಮಾಡುತ್ತೇವೆ ಎಂದು ಹೋದವರು ಮತ್ತೆ ಮರಳಲಿಲ್ಲ. ಅಧಿಕಾರಿಗಳು ಬಂದರೆ ಸಂಚಾರ ಸಮಸ್ಯೆಗೆ ಮುಕ್ತಿಕೊಡಿ ಎಂದು ಕಾಡಿ ಬೇಡಿದರೂ ಸಮಸ್ಯೆ ಇನ್ನೂ ಹಾಗೇ ಇದೆ.

    ಒಂದೂವರೆ ದಶಕದ ಹಿಂದೆ ಎಡ್ಮಲೆ ಹೊಳೆಗೆ ವಿಶೇಷ ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲಾಗಿತ್ತು. ಕಿರು ಸೇತುವೆ ಆಗಿ 15 ವರ್ಷ ಕಳೆದರೂ, ತಂತಿಮೇಲಿನ ಸರ್ಕಸ್‌ನಂತೆ ಹೊಳೆ ದಾಟುವುದು ತಪ್ಪಿಲ್ಲ. ಮಳೆಗಾಲದಲ್ಲಿ ಹೊಳೆ ಉಕ್ಕಿ ಹರಿಯುವ ವೇಳೆ ಕಾಲುಸಂಕ, ಕಿರು ಸೇತುವೆ ದಾಟುವುದಕ್ಕೆ ಎಂಟೆದೆ ಬೇಕು. ಶಾಲಾ ಮಕ್ಕಳು, ಪರಿಸರದ ನಿವಾಸಿಗಳು ಅಂಗೈಯಲ್ಲಿ ಜೀವಹಿಡಿದು ಬದುಕು ಸಾಗಿಸುತ್ತಿದ್ದಾರೆ.
    ಊರವರೇ ಪ್ರತಿ ವರ್ಷ ಕಿರು ಸೇತುವೆಯಲ್ಲಿ ಸಂಚರಿಸಲು ತಾತ್ಕಾಲಿಕವಾಗಿ ಅಡಕೆ ಮರದ ಕಾಲು ಸಂಕ ನಿರ್ಮಿಸಿಕೊಳ್ಳುತ್ತಾರೆ. ತಾತ್ಕಾಲಿಕ ಕಾಲುಸಂಕ ಒಂದು ಮಳೆಗಾಲಕ್ಕೆ ಸೀಮಿತ! ಮತ್ತೊಂದು ಮಳೆಗಾಲಕ್ಕೆ ಬೇರೆಯೇ ನಿರ್ಮಿಸಬೇಕಾಗುತ್ತದೆ. ಒಟ್ಟಾರೆ ಎಡ್ಮರೆ ವಾಸಿಗಳು ಸಂಚಾರ ಸಂಕಷ್ಟಕ್ಕೆ ಮುಕ್ತಿಗಾಗಿ ಕಾಯುತ್ತಿದ್ದಾರೆ.

    15ವರ್ಷ ಹಿಂದಿನ ಕಿರು ಸೇತುವೆ
    ಮಡಾಮಕ್ಕಿ ಕಡೆಯಿಂದ ಎಡ್ಮಲೆ ಕಡೆಗೆ ಸಂಚರಿಸಲು ಅನುಕೂಲವಾಗುವಂತೆ ಪಶ್ಚಿಮ ವಾಹಿನಿ ಯೋಜನೆಯಡಿ 15ವರ್ಷ ಹಿಂದೆ 1.50 ಲಕ್ಷ ರೂ. ಅನುದಾನದಲ್ಲಿ ಕಿರು ಸೇತುವೆ ನಿರ್ಮಿಸಲಾಗಿದೆ. ಸೇತುವೆ ಒಂದುಕಡೆ ಇರುವುದು 5 ಮನೆಗಳು ಮಾತ್ರ. ಆದರೆ ಈ ಕಿರು ಸೇತುವೆಯಿಲ್ಲದಿದ್ದಲ್ಲಿ ಮಳೆಗಾಲದಲ್ಲಿ 5 ಮನೆಗಳಿಗೆ ಸಂಪರ್ಕವೇ ಇಲ್ಲದಂತಾಗುತ್ತದೆ. ಕಿರು ಸೇತುವೆ ಮತ್ತೊಂದು ಕಡೆ 10 ಮನೆಗಳಿದ್ದು, ಅವರು ಕೃಷಿ ಭೂಮಿ, ಮತ್ತಿತರರ ಕೆಲಸಕ್ಕೆ ಹೋಗಲು ಇದೇ ಕಿರು ಸೇತುವೆ ಬಳಸಬೇಕು. ಕೃಷಿ ಪರಿಕರ, ಉಳುಮೆ ಮಾಡಲು ಹೋರಿ ಹೊಳೆ ದಾಟಿಯೇ ಹೋಗಬೇಕು.

    ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ
    ಕಿರು ಸೇತುವೆ ಸಂಪರ್ಕ ಕಾಮಗಾರಿಗಾಗಿ 14 ಹಣಕಾಸು ಯೋಜನೆಯಡಿ 90 ಸಾವಿರ ರೂ.ವಿಶೇಷ ಅನುದಾನ ಮೀಸಲಿಡಲಾಗಿತ್ತು. ಅನುದಾನ ಸಾಕಾಗದ ಕಾರಣ ಕಾಮಗಾರಿ ಆರಂಭಗೊಂಡಿಲ್ಲ. ಈ ಕಿರು ಸೇತುವೆಗೆ ಸಂಪರ್ಕ ಕಲ್ಪಿಸುವ ಕುರಿತಂತೆ ಮಡಾಮಕ್ಕಿ ಗ್ರಾಮಸಭೆಯಲ್ಲಿಯೂ ಹಲವು ಬಾರಿ ಪ್ರಸ್ತಾಪವಾಗಿದ್ದು, ಪಂಚಾಯಿತಿ 2-3 ಸಲ ಜಿಪಂ ಗೆ ಹೆಚ್ಚುವರಿ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಿತ್ತು.

    ಮಡಾಮಕ್ಕಿ ಗ್ರಾಮದ ಎಡ್ಮಲೆಯಲ್ಲಿರುವ ಕಿರು ಸೇತುವೆಯಲ್ಲಿ ಇನ್ನೂ ಸಂಪರ್ಕ ಕಲ್ಪಿಸದಿರುವ ಬಗ್ಗೆ ಮಾಹಿತಿಯಿಲ್ಲ. ಈ ಬಗ್ಗೆ ಶೀಘ್ರ ಪರಿಶೀಲನೆ ನಡೆಸಿ, ಪಂಚಾಯಿತಿಯಿಂದ ಈ ಹಿಂದೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುವುದರ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು.
    ಪ್ರಭಾಶಂಕರ್ ಪುರಾಣಿಕ್, ಗ್ರಾಪಂ ಅಭಿವೃದ್ಧಿ ಅಧಿಕಾರಿ (ಪ್ರಭಾರ) ಮಡಾಮಕ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts