More

    ಬರಬೈಲ್ ಕಿರುಸೇತುವೆಗಿಲ್ಲ ಮುಕ್ತಿ

    ಬೆಳ್ಮಣ್: ಕೆದಿಂಜೆಯಿಂದ ಕಾಂತಾವರ ಸಾಗುವ ಪ್ರಮುಖ ಹೆದ್ದಾರಿಯಲ್ಲಿರುವ ಬರಬೈಲ್ ಕಿರು ಸೇತುವೆ ವಾಹನ ಸವಾರರಿಗೆ ನಿತ್ಯ ಸಮಸ್ಯೆ ಸೃಷ್ಟಿಸುತ್ತಿದ್ದು, ಸೇತುವೆ ವಿಸ್ತರಣೆಯಾಗಬೇಕೆಂಬ ಬಹುವರ್ಷದ ಬೇಡಿಕೆ ಇನ್ನೂ ಈಡೇರಿಲ್ಲ.

    ಕಾರ್ಕಳ ತಾಲೂಕಿನ ಬೋಳ ಗ್ರಾಪಂ ವ್ಯಾಪ್ತಿಯ ಈ ಬರಬೈಲ್ ಕಿರು ಸೇತುವೆ ನಿರ್ಮಾಣಗೊಂಡು ಹಲವು ವರ್ಷಗಳೇ ಕಳೆದಿವೆ. ಆದರೆ ಕಿರು ಸೇತುವೆ ನಿರ್ಮಾಣಗೊಂಡ ಬಳಿಕ ಯಾವುದೇ ನಿರ್ವಹಣೆ ನಡೆದಿಲ್ಲ. ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ.
    ಕಿರು ಸೇತುವೆ ಈಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ. ಸೇತುವೆಯ ಎರಡೂ ಬದಿಯಲ್ಲಿ ತಿರುವು ಹಾಗೂ ತಗ್ಗು ಪ್ರದೇಶವಿರುವುದರಿಂದ, ರಸ್ತೆಯೂ ಸುಸ್ಥಿತಿಯಲ್ಲಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ ಚಲಿಸುತ್ತವೆ. ಇದರಿಂದ ಸೇತುವೆಯ ಸಮೀಪ ಹಲವು ಅಪಘಾತಗಳು ಸಂಭವಿಸಿವೆ. ರಸ್ತೆ ವಿಸ್ತಾರವಾಗಿದ್ದು, ಸೇತುವೆಯ ಭಾಗ ಮಾತ್ರ ಕಿರಿದಾಗಿದೆ. ಪಕ್ಕದಲ್ಲೇ ಪ್ರಾಥಮಿಕ ಶಾಲೆಯಿರುವುದರಿಂದ ಇಲ್ಲಿನ ಮಕ್ಕಳು ನಿತ್ಯ ಸೇತುವೆ ದಾಟುವುದು ತುಂಬಾ ಅಪಾಯಕಾರಿಯಾಗಿದೆ.

    ಕಿರು ಸೇತುವೆಯ ವಿಸ್ತರಣೆಗೆ ಬೇಡಿಕೆಯಿದ್ದರೂ ಪ್ರತೀ ಬಾರಿ ಕಿರು ಸೇತುವೆಗೆ ಸುಣ್ಣ ಬಣ್ಣ ಬಳಿಯುವುದು ಬಿಟ್ಟರೆ ಇಲಾಖೆ ಅಥವಾ ಅಧಿಕಾರಿಗಳು ವಿಸ್ತರಣೆ ಬಗ್ಗೆ ಮನಸ್ಸು ಮಾಡುತ್ತಿಲ್ಲ. ಪದೇ ಪದೆ ಅಪಘಾತವಾಗುತ್ತಿರುವ ಈ ಸೇತುವೆ ವಿಸ್ತರಿಸಲು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಹಾಗೂ ಲೋಕೋಪಯೋಗಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ಈಗಾಗಲೇ ಶಾಸಕರ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಇದರ ಕಾಮಗಾರಿ ನಡೆಯಲಿದೆ ಎಂದು ಬೋಳ ಗ್ರಾಪಂ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ತಿಳಿಸಿದ್ದಾರೆ.

    ಕಿರು ಸೇತುವೆ ವಿಸ್ತರಣೆ ಅಗತ್ಯವಿದೆ. ಇಲ್ಲಿ ನಿತ್ಯ ವಾಹನ ಸವಾರರು ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ. 1959ರಲ್ಲಿ ನಿರ್ಮಾಣಗೊಂಡ ಸೇತುವೆ ದುರಸ್ತಿ ಕಾರ್ಯ ಇಲ್ಲೀವರೆಗೂ ನಡೆದಿಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತು ಕಿರು ಸೇತುವೆ ವಿಸ್ತರಿಸುವತ್ತ ಮನಸ್ಸು ಮಾಡಬೇಕಾಗಿದೆ.
    ಚಂದ್ರಹಾಸ್ ಪುತ್ರನ್ ಸ್ಥಳೀಯರು

    ಕಿರು ಸೇತುವೆಯಲ್ಲಿ ನಿತ್ಯ ಅಪಘಾತಗಳು ನಡೆಯುತ್ತಿದೆ. ವಿಸ್ತರಿಸಬೇಕೆಂಬುವುದು ನಮ್ಮೆಲ್ಲರ ಬಹು ವರ್ಷದ ಬೇಡಿಕೆ. ಅಲ್ಲದೆ ಸಮೀಪದಲ್ಲಿರುವ ಶಾಲೆಯ ಮಕ್ಕಳು ಇದೇ ಸೇತುವೆಯಲ್ಲಿ ಸಂಚರಿಸಬೇಕಾಗಿದ್ದು ತುಂಬಾ ಅಪಾಯಕಾರಿಯಾಗಿದೆ.
    ತಾರನಾಥ್ ಬೋಳ ಗ್ರಾಮಸ್ಥ

    ಕಿರುಸೇತುವೆ ವಿಸ್ತರಣೆ ಸಂಬಂಧ ಈ ಹಿಂದಿನ ಆಡಳಿತ ಮಂಡಳಿ ಅಧ್ಯಕ್ಷರು ಈಗಾಗಲೇಪ್ರಸ್ತಾವನೆ ಸಲ್ಲಿಸಿದ್ದಾರೆ.ಶೀಘ್ರದಲ್ಲೇ ಈ ಸಮಸ್ಯೆಗೆ ಮುಕ್ತಿ ದೊರಕಲಿದೆ.
    ಸುಧಾ ಎಸ್ ಪೂಜಾರಿ, ಬೋಳ ಗ್ರಾಪಂ ಅಧ್ಯಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts