More

    ಫುಟ್‌ಪಾತ್ ಅವ್ಯವಸ್ಥೆ

    ಪ್ರಕಾಶ್ ಮಂಜೇಶ್ವರ
    ಮಂಗಳೂರು: ದೇಶದ ಪ್ರಮುಖ ಸ್ಮಾರ್ಟ್ ಸಿಟಿಗಳಲ್ಲಿ ಒಂದಾದ ಮಂಗಳೂರು ನಗರದ ಹಲವೆಡೆ ಉಳಿದುಕೊಂಡಿರುವ ಕಾಲುದಾರಿಗಳು(ಫುಟ್‌ಪಾತ್) ನಡೆಯಲು ಅಯೋಗ್ಯವಾಗಿರುವುದು ಮಾತ್ರವಲ್ಲ, ಜೀವಕ್ಕೆ ಸಂಚಕಾರ ತರುವ ಸ್ಥಿತಿಯಲ್ಲಿವೆ.
    ನಗರದ ಕೊಟ್ಟಾರದಲ್ಲಿ ಇನ್ಫೋಸಿಸ್ ಕಟ್ಟಡ ಸಮೀಪ ಕೂಳೂರು ಕಡೆಗೆ ಸಾಗುವ ಮಾರ್ಗದಲ್ಲಿ ಸ್ವಲ್ಪ ದೂರದಲ್ಲೇ ಇಳಿಜಾರು ಪ್ರದೇಶದಲ್ಲಿರುವ ಫುಟ್‌ಪಾತ್‌ನಲ್ಲಿ ಒಬ್ಬರು ನಡೆಯಲೂ ಕಷ್ಟ ಪಡಬೇಕಿದೆ.

    ಜೀವಭಯ: ಮಳೆಗಾಲದಲ್ಲಿ ಈ ಭಾಗದಲ್ಲಿ ಮುಖ್ಯ ರಸ್ತೆಯಲ್ಲೇ ಮಳೆ ನೀರು ಸಂಗ್ರಹವಾಗುತ್ತಿದ್ದು, ಪಾದಚಾರಿಗಳು ಜೀವಭಯದಿಂದ ಈ ಪ್ರದೇಶ ದಾಟಿ ಹೋಗುವ ಸ್ಥಿತಿ ಇದೆ ಎನ್ನುತ್ತಾರೆ ಸ್ಥಳೀಯ ನಿವೃತ್ತ ಬ್ಯಾಂಕ್ ಅಧಿಕಾರಿ ಪಿ.ರಘುನಾಥ್ ಕಾಮತ್.
    ಇಲ್ಲಿ ಕಾಲುದಾರಿಗೆ ಆವಶ್ಯ ಜಾಗ ಸ್ವಾಧೀನಪಡಿಸಿಕೊಳ್ಳಲು ಮಹಾನಗರ ಪಾಲಿಕೆ ಹಿಂಜರಿಯುತ್ತಿರುವುದೇ ಸಮಸ್ಯೆ ಮೂಲ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪ. ಈ ಭಾಗದಲ್ಲಿ ರಸ್ತೆಯಲ್ಲಿ ಸಂಚರಿಸುವ ವಾಹನ ಸ್ವಲ್ಪ ರಸ್ತೆ ಬದಿಗೆ ಸರಿದರೂ ಪಾದಚಾರಿ ಹತ್ತಿರದ ತಗ್ಗು ಪ್ರದೇಶಕ್ಕೆ ಹಾರಬೇಕು ಎನ್ನುವ ಸ್ಥಿತಿ ಇದೆ.

    ಪಾದಚಾರಿಗಳಿಗೆ ಹೇಳಿದ್ದಲ್ಲ!: ನಗರದ ಅನೇಕ ರಸ್ತೆಗಳು ಪಾದಚಾರಿಗಳಿಗೆ ಸೂಕ್ತ ಸ್ಥಳಾವಕಾಶ ಒದಗಿಸಿಲ್ಲ. ನಿರ್ದಿಷ್ಟ ಕೆಲ ರಸ್ತೆಗಳಲ್ಲಿ ಸುಗಮವಾಗಿ ಸಂಚರಿಸುವವರಿಗೆ ಕನಿಷ್ಠ ಸೈಕಲ್ ಆದರೂ ಬೇಕು. ಪಾದಚಾರಿಗಳು ಸುರಕ್ಷಿತವಾಗಿ ನಡೆಯಲು ಕೆಲವೆಡೆ ಜಾಗವೇ ಇಲ್ಲ.
    ನಗರದ ಕೇಂದ್ರ ಭಾಗದ ಫುಟ್‌ಪಾತ್ ವ್ಯವಸ್ಥೆ ಕಳೆದ ಕೆಲವು ವರ್ಷಗಳಲ್ಲಿ ಸ್ವಲ್ಪ ಸುಧಾರಣೆಯಾಗಿದ್ದರೂ, ಅನೇಕ ಕಡೆ ಜನಸ್ನೇಹಿಯಾಗಿಲ್ಲ. ನವಭಾರತ್ ವೃತ್ತದಿಂದ ಪಿವಿಎಸ್ ವೃತ್ತ ತನಕ ಮತ್ತು ಅಲ್ಲಿಂದ ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಶನಲ್ ಸಭಾಂಗಣ ತನಕ, ಫಾದರ್ ಮುಲ್ಲರ್ಸ್‌ನಿಂದ ಫಳ್ನೀರ್ ತನಕ ಇರುವ ಕಾಲುದಾರಿ ಅಪಾಯಕಾರಿಯಾಗಿದೆ. ಈ ಮಾರ್ಗದಲ್ಲಿ ಕೆಲವು ಕಡೆ ವ್ಯಾಪಾರ ಕೇಂದ್ರಗಳು, ಪಾರ್ಕಿಂಗ್ ಪ್ರದೇಶ ಮತ್ತು ಅಲ್ಲಿಯ ಚಟುವಟಿಕೆ ಕಾಲುದಾರಿಯನ್ನು ಆಕ್ರಮಿಸಿಕೊಂಡಿದೆ.
    ಡಾ.ಬಿ.ಆರ್.ಅಂಬೇಡ್ಕರ್(ಜ್ಯೋತಿ) ವೃತ್ತದಿಂದ ಬಂಟ್ಸ್ ಹಾಸ್ಟೆಲ್ ತನಕ ಇಳಿದು ಬರುವ ಮಾರ್ಗ ಕೂಡ ಸಮರ್ಪಕವಾದ ಕಾಲುದಾರಿ ಹೊಂದಿಲ್ಲ.

    ನಗರದ ನಡುವೆಯೇ ಕೆಲವು ಕಡೆ ಸುಸಜ್ಜಿತ ಫುಟ್‌ಪಾತ್ ಸಂಪರ್ಕ ಕಡಿದುಹೋಗಿದೆ. ಸ್ಥಳಾವಕಾಶ ಇರುವ ಕಡೆಗಳಲ್ಲಿ ಫುಟ್‌ಪಾತ್ ನಿರ್ಮಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಟಿಡಿಆರ್ ಮೂಲಕ ಜಾಗ ಪಡೆದು ಫುಟ್‌ಪಾತ್ ನಿರ್ಮಿಸಲು ಇರುವ ಅವಕಾಶವನ್ನೂ ಬಳಸಿಕೊಳ್ಳಲಾಗುವುದು. ಎರಡೂ ಸಾಧ್ಯವಾಗದ ಕಡೆ ರಸ್ತೆ ಬದಿಯಲ್ಲೇ ರೈಲಿಂಗ್ ಅಳವಡಿಸಿ ಪಾದಚಾರಿಗಳು ಸುರಕ್ಷಿತವಾಗಿ ನಡೆದುಕೊಂಡು ಹೋಗುವ ವ್ಯವಸ್ಥೆ ಮಾಡುವ ಚಿಂತನೆ ಇದೆ.
    ಪ್ರೇಮಾನಂದ ಶೆಟ್ಟಿ, ಮೇಯರ್, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts