More

    ಜಾನಪದ ಜಗತ್ತು ಜೀವದಾಯಿನಿ

    ಶಿಕಾರಿಪುರ: ಇಡೀ ವಿಶ್ವ ಹಿಂಸೆ ಮತ್ತು ಕ್ರೌರ್ಯದಿಂದ ಮೆರೆಯುತ್ತಿರುವ ಮತ್ತು ಜಾಗತೀಕರಣ, ಯಾಂತ್ರೀಕರಣವನ್ನುಬೆಂಬಲಿಸುತ್ತಿರುವ ಸಂದರ್ಭದಲ್ಲಿ ಮನುಷ್ಯನ ಒಳಗಿನ ಸಮುದಾಯದ ಜಾನಪದ ಜಗತ್ತು ಜೀವದಾಯಿನಿಯಾಗಿ ಕೆಲಸ ಮಾಡುತ್ತಿದೆ. ವಿಕಾರತೆ, ಕ್ರೌರ್ಯತೆಯ ವಿರುದ್ಧ ಜೀವ ಪರವಾದ ನಿಲುವನ್ನು ತಡೆಯಲು ಶಕ್ತಿ ತುಂಬುತ್ತಿದೆ ಎಂದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಮೋಹನ್ ಚಂದ್ರಗುತ್ತಿ ಹೇಳಿದರು.
    ಪಟ್ಟಣದ ಶಿವಗಿರಿ ಕಲ್ಯಾಣಮಂಟಪದಲ್ಲಿ ಭಾನುವಾರ ಜಾನಪದ ಪರಿಷತ್ತು, ಬಿ.ಪಾಪಯ್ಯ ಅಭಿಮಾನಿ ಬಳಗ, ಬಾಪೂಜಿ ವಿದ್ಯಾಸಂಸ್ಥೆ ಆಯೋಜಿಸಿದ್ದ ಮುಂಗಾರು ಜನಪದ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯನ ದುರಾಸೆ, ಯಾಂತ್ರೀಕರಣಕ್ಕೆ ಒಳಗಾಗಿ ಭೂಮಿ ಬಿಸಿಯಾಗಿ ಮಳೆ ಕಡಿಮೆಯಾಗುತ್ತಿದೆ. ಪ್ರಕೃತಿ ವ್ಯತ್ಯಯಗಳಿಂದ ನಾವು ತತ್ತರಿಸುತ್ತಿದ್ದೇವೆ ಎಂದರು.
    ಈಗ ಬರುತ್ತಿರುವ ಮುಂಗಾರು ಮಳೆ ಬರೀ ಭೂಮಿಗೆ ತಂಪನ್ನು ಮಾತ್ರ ನೀಡುತ್ತಿಲ್ಲ. ಜೀವಜಾಲ ಕಾಪಾಡುವ ಶಕ್ತಿಯಾಗಿ, ಜೀವದಾಯಿನಿಯಾಗಿ, ಜೀವದ್ರವ್ಯವಾಗಿ ಕೆಲಸ ಮಾಡುತ್ತದೆ ಎಂದ ಅವರು, ಇದೊಂದು ಮರೆಯಲಾರದ ಸಂಭ್ರಮ, ಸಂತಸದ ಕಾಲ. ಒಬ್ಬ ಸಾಮಾಜಿಕ ಕಳಕಳಿಯ ವ್ಯಕ್ತಿಯ ಜನ್ಮದಿನ ಜನಪದ ಮತ್ತು ಮುಂಗಾರನ್ನು ಒಳಗೊಂಡಿರುವುದು ಅತ್ಯಂತ ಸಂತಸ ತರುವ ವಿಚಾರಎಂದು ಹೇಳಿದರು
    ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿಕ್ಷಕ ಬಿ.ಪಾಪಯ್ಯ ನನ್ನ ಜೀವನದಲ್ಲಿ ಈ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸುದಿನ. ಆಗುತ್ತಿದೆ. ಜನ, ಅಭಿಮಾನಿಗಳ ಪ್ರೀತಿ, ವಿಶ್ವಾಸ ನನ್ನನ್ನು ದಿಗ್ಮೂಢನನ್ನಾಗಿಸಿದೆ. ಪ್ರತಿ ಸನ್ಮಾನ, ಅಭಿನಂದನೆ, ಗೌರವಗಳು ನಮಗೆ ಹೆಚ್ಚಿನ ಜವಾಬ್ದಾರಿ ತಂದುಕೊಡುತ್ತವೆ. ಸಮಾಜಕ್ಕಾಗಿ ಇನ್ನೂ ಏನನ್ನಾದರೂ ಮಾಡಬೇಕೆಂಬ ತುಡಿತ ಜಾಸ್ತಿಯಾಗುತ್ತದೆ. ಸ್ನೇಹಿತರ ಬಳಗವನ್ನು ಕಂಡು ನನ್ನ ಹೃದಯ ತುಂಬಿ ಬಂದಿದೆ. ಇದೊಂದು ಸುದಿನ ಎಂದರು.
    ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ವಿದೇಶಿ ಪ್ರಭಾವ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಆರ್ಭಟದ ನಡುವೆಯೂ ನಮ್ಮ ಜನಪದ ಕಲೆಗಳು ಜೀವಂತವಾಗಿವೆ ಎಂದರೆ ಅದರ ಸತ್ವ ದ ಅರಿವು ನಮಗಿರಬೇಕು. ಜಾನಪದ ನಮ್ಮ ಸಂಸ್ಕೃತಿಯ ಪ್ರತಿಬಿಂಬ. ಈ ಮಣ್ಣಿನಲ್ಲಿರುವ ಸಾಕಷ್ಟು ಜನಪದ ಕಲೆಗಳು ಜನಮನ ತಲುಪಿಲ್ಲ. ಎಷ್ಟೋ ಕಲೆಗಳು ನಶಿಸಿಹೋಗಿವೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸ ಇಂತಹ ಕಾರ್ಯಕ್ರಮಗಳಿಂದ ಆಗುತ್ತಿವೆ ಎಂದು ಹೇಳಿದರು.

    ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್, ಮಾಜಿ ಕಾಡಾ ಅಧ್ಯಕ್ಷ ನಗರದ ಮಹದೇವಪ್ಪ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಮಧುಕೇಶ್ವರ್, ಪ್ರಕಾಶಕ ಸುನೀಲ್ಕುಮಾರ್, ತಾಲೂಕು ಅಧಕ್ಷ ಎಚ್.ಎಸ್.ರಘು, ಪತ್ರಕರ್ತರಾದ ಬಿ.ಎಲ್.ರಾಜು, ನವೀನ್‌ಕುಮಾರ್, ಸತ್ಯನಾರಾಯಣ, ಎ.ಕೆ.ಹಾಲಪ್ಪ, ಲೋಕೇಶ್, ತಾಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ.ಪ್ರಕಾಶ್, ಮತ್ತು ನಾಗರಾಜ ನಾಯ್ಕ, ಬಸವನ ಗೌಡ, ರಾಘವೇಂದ್ರ ಕುಲಕರ್ಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts