More

    22.79 ಕೋಟಿ ರೂ. ಅತಿವೃಷ್ಟಿ ಪರಿಹಾರ ಬಿಡುಗಡೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಳೆದ ಆಗಸ್ಟ್​ನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿ ಸಂಬಂಧ ಪರಿಹಾರ ಕೊಡಲು ಒಟ್ಟು 22.79 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

    ಆಗಸ್ಟ್​ನಲ್ಲಿ ಮಳೆಯಿಂದ ನಷ್ಟಕ್ಕೆ ಒಳಗಾಗಿರುವ 19,395 ರೈತರನ್ನು ಗುರುತಿಸಲಾಗಿದೆ. ಅವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್​ನಲ್ಲಿ ಒಟ್ಟು 501 ಮನೆಗಳು ಕುಸಿದಿದ್ದು, ಅವುಗಳಿಗೆ 94 ಲಕ್ಷ ರೂ. ವಿತರಿಸಲಾಗಿದೆ. ಒಟ್ಟಾರೆ ಪ್ರವಾಹಪೀಡಿತ ಪ್ರದೇಶದ ಮನೆಗಳ ಹಾನಿಗೆ 2.79 ಕೋಟಿ ರೂ. ನೀಡಲಾಗಿದೆ ಎಂದು ನಗರದಲ್ಲಿ ಭಾನುವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.

    ಮಳೆ ಹಾನಿಗೆ ಪರಿಹಾರ ದೊರೆಯದಿದ್ದಲ್ಲಿ ಅಂಥವರನ್ನು ಗುರುತಿಸಲು ಸಮೀಕ್ಷೆ ನಡೆಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅತಿವೃಷ್ಟಿ, ಪ್ರವಾಹದಂಥ ಪರಿಸ್ಥಿತಿ ಎದುರಿಸಲು ಜಿಲ್ಲಾಧಿಕಾರಿಗೆ ಆಗಸ್ಟ್​ನಲ್ಲಿ 5 ಕೋಟಿ ರೂ. ಬಿಡುಗಡೆ ಮಾಡಿದ್ದು, ಜಿಲ್ಲಾಧಿಕಾರಿ ಖಾತೆಯಲ್ಲಿ ಒಟ್ಟು 11.28 ಕೋಟಿ ರೂ. ಲಭ್ಯವಿದೆ. ಜಿಲ್ಲೆಯಲ್ಲಿ ಸರ್ಕಾರಿ ಶಾಲೆ ಹಾಗೂ ಸ್ಮಶಾನಕ್ಕಾಗಿ 29 ಎಕರೆ ಜಮೀನು ಗುರುತಿಸಲಾಗಿದೆ ಎಂದು ತಿಳಿಸಿದರು.

    ಸ್ಪೋಟಕ ಸಾಮಗ್ರಿ ಬಗ್ಗೆ ತೀವ್ರ ನಿಗಾ: ಸ್ಪೋಟಕ ಸಾಮಗ್ರಿಗಳ ಪರವಾನಗಿ, ಸಾಗಣೆ ಹಾಗೂ ದಾಸ್ತಾನು ಹೀಗೆ ಎಲ್ಲವನ್ನೂ ಇನ್ನು ಮುಂದೆ ಸಮಗ್ರವಾಗಿ ಪರಿಶೀಲಿಸಲಾಗುವುದು. ಗಣಿಗಾರಿಕೆ ಸಲುವಾಗಿಯೇ ಈ ಬಾರಿ ಸ್ಪೋಟಕ ಸಾಮಗ್ರಿ ತಂದಿರಬಹುದು. ಆದರೆ ಬೇರೆ ಉದ್ದೇಶಕ್ಕೆ ತರುವುದಾದಲ್ಲಿ ದೊಡ್ಡ ಅನಾಹುತಕ್ಕೆ ಕಾರಣವಾಗುತ್ತದೆ. ಈ ಹಿನ್ನೆಲೆಯಲ್ಲಿ ನಿಯಮ ಕಠಿಣಗೊಳಿಸಲಾಗುವುದು ಎಂದರು.

    ಶಿವಮೊಗ್ಗ ಜಿಲ್ಲೆ ಹುಣಸೋಡು ಗ್ರಾಮದ ಕ್ರಷರ್​ನಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ತಂಡ ಕಳಿಸಲಾಗಿದ್ದು, ಘಟನೆಗೆ ಬೇರೇನಾದರೂ ಕಾರಣವಿದೆಯೇ ಎಂದು ತಿಳಿದುಕೊಳ್ಳಲು ಆ ತಂಡ ನೀಡುವ ವರದಿಗೆ ಕಾಯಲಾಗುತ್ತಿದೆ ಎಂದು ಹೇಳಿದರು.

    ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ವಿಪತ್ತು ನಿರ್ವಹಣಾ ತಂಡಕ್ಕೆ ಸೂಚಿಸಲಾಗಿದೆ. ಪ್ರಕರಣವನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ರಾಜ್ಯದ ಪೊಲೀಸರೇ ಇದನ್ನು ತನಿಖೆ ನೀಡಲು ಸಮರ್ಥರಿದ್ದಾರೆ ಎಂದರು.

    ದೇಶದಲ್ಲೇ ಪ್ರಥಮ ಪ್ರಯೋಗ: ವೃದ್ಧಾಪ್ಯ ವೇತನಕ್ಕೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮಲೆಕ್ಕಿಗರು ಗ್ರಾಮಗಳಿಗೆ ತೆರಳುವ ಬಗ್ಗೆ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಜ.26ರಂದು ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಕಟಿಸಲಾಗುವುದು. ಇದು ದೇಶದಲ್ಲೇ ಪ್ರಥಮ ಪ್ರಯೋಗ ಎಂದು ಆರ್.ಅಶೋಕ್ ಹೇಳಿದರು.

    ಪಿಂಚಣಿ ಹಣ ನೇರ ಖಾತೆಗೆ: ಆಧಾರ್ ಕಾರ್ಡ್​ನಲ್ಲಿ 60 ವರ್ಷ ಮೇಲ್ಪಟ್ಟಿರುವುದನ್ನು ಗುರುತಿಸಿ, ಬಿಪಿಎಲ್ ಕಾರ್ಡ್ ಆಧರಿಸಿ ವೃದ್ಧಾಪ್ಯ ವೇತನ ನೀಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಮುಂದೆ ಯಾವುದೇ ಅಂಚೆ ಕಚೇರಿಗಳ ಮೂಲಕ ಈ ವೇತನಗಳು ಬಟವಾಡೆಯಾಗುವುದಿಲ್ಲ. ಆರ್​ಐಗಳು ಹಾಗೂ ಗ್ರಾಮಲೆಕ್ಕಿಗರೇ ಈ ಹಣ ತಲುಪಿಸಲಿದ್ದಾರೆ. ಅಂಚೆ ಪೇದೆಗಳು ವಿಳಂಬ ಮಾಡುವುದು, 500 ಹಾಗೂ 1000 ರೂ. ಕಡಿತಗೊಳಿಸುವುದನ್ನು ತಡೆಯಲು ಅಂಚೆ ಇಲಾಖೆ ಮೂಲಕ ಪಿಂಚಣಿ ನೀಡುವುದನ್ನು ಸಂಪೂರ್ಣವಾಗಿ ರದ್ದುಪಡಿಸಲಾಗಿದೆ. ಪಿಂಚಣಿ ಹಣವನ್ನು ಆರ್​ಟಿಜಿಎಸ್ ಮೂಲಕ ನೇರವಾಗಿ ಫಲಾನುಭವಿಗಳ ಖಾತೆಗೆ ಹಾಕಲಾಗುವುದು ಎಂದು ಆರ್.ಅಶೋಕ್ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts