More

    ತೀಸ್ತಾ ಕಣಿವೆ ತತ್ತರ

    ನವದೆಹಲಿ: ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಘಸ್ಪೋಟದಿಂದಾಗಿ ತೀಸ್ತಾ ನದಿಯ ಜಲಾನಯನ ಪ್ರದೇಶದಲ್ಲಿ ಉಂಟಾಗಿದ್ದ ಹಠಾತ್ ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿದ್ದು, 22 ಸೇನಾ ಸಿಬ್ಬಂದಿ ಸೇರಿ 102 ಮಂದಿ ನಾಪತ್ತೆಯಾಗಿದ್ದಾರೆ. ಇದುವರೆಗೆ 2,011 ಜನರನ್ನು ರಕ್ಷಿಸಲಾಗಿದೆ. ಬುಧವಾರ ಸಂಭವಿಸಿದ ಮೇಘಸ್ಪೋಟಕ್ಕೆ 22,034 ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಸಿಕ್ಕಿಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ. ರಾಜ್ಯ ಸರ್ಕಾರ ನಾಲ್ಕು ಪೀಡಿತ ಜಿಲ್ಲೆಗಳಲ್ಲಿ 26 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ ಎಂದು ಮಾಹಿತಿ ನೀಡಿದೆ.

    ಗ್ಯಾಂಗ್ಟಾಕ್ ಜಿಲ್ಲೆಯ ಎಂಟು ಪರಿಹಾರ ಶಿಬಿರಗಳಲ್ಲಿ ಒಟ್ಟು 1,025 ಜನರು ಆಶ್ರಯ ಪಡೆಯುತ್ತಿದ್ದಾರೆ. ಆದರೆ, 18 ಇತರೆ ಪರಿಹಾರ ಶಿಬಿರಗಳಲ್ಲಿ ಸಂತ್ರಸ್ತರ ಸಂಖ್ಯೆ ತಕ್ಷಣಕ್ಕೆ ಲಭ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅತಿ ಹೆಚ್ಚು ಹಾನಿಗೊಳಗಾದ ಪ್ರದೇಶಗಳಲ್ಲಿ ಒಂದಾದ ಸಿಂಗ್ಟಾಮ್ೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಸಂತ್ರಸ್ತರ ಪುನರ್ವಸತಿಗೆ ಸರ್ಕಾರ ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡುತ್ತಿದೆ ಎಂದು ಭರವಸೆ ನೀಡಿದ್ದಾರೆ. ಪ್ರವಾಹದಿಂದಾಗಿ ರಾಜ್ಯದಲ್ಲಿ 11 ಸೇತುವೆಗಳು ನಾಶವಾಗಿದ್ದು, ಮಂಗನ್ ಜಿಲ್ಲೆಯೊಂದರಲ್ಲೇ ಎಂಟು ಸೇತುವೆಗಳು ಕೊಚ್ಚಿ ಹೋಗಿವೆ. ನಾಮ್ಚಿಯಲ್ಲಿ ಎರಡು ಸೇತುವೆ ಮತ್ತು ಗ್ಯಾಂಗ್​ಟಾಕ್​ನಲ್ಲಿ 1 ಸೇತುವೆ ನಾಶವಾಗಿದೆ. 4 ಪೀಡಿತ ಜಿಲ್ಲೆಗಳಲ್ಲಿ ನೀರಿನ ಪೈಪ್​ಲೈನ್​ಗಳು, ಒಳಚರಂಡಿ ಮಾರ್ಗಗಳು ಮತ್ತು 277 ಮನೆಗಳು ಸೇರಿ ಹಲವು ಸಾರ್ವಜನಿಕ ಆಸ್ತಿಗಳು ನಾಶವಾಗಿವೆ.

    Floods

    ಎಚ್ಚರಿಸಿದ್ದ ವರದಿ

    ದಕ್ಷಿಣ ಲೊನಾಕ್ ಸರೋ ವರವು ಮುಂದೊಂದು ದಿನ ಒಡೆದು, ಕೆಳಭಾಗದ ಪ್ರದೇಶದ ಮೇಲೆ ಭಾರೀ ಪರಿಣಾಮ ಬೀರಲಿದೆ ಎಂದು ಅಂತಾರಾಷ್ಟ್ರೀಯ ಸಂಶೋಧಕರ ತಂಡವು ಎರಡು ವರ್ಷಗಳ ಹಿಂದೆ ಎಚ್ಚರಿಸಿತ್ತು. ಜಿಯೋಮಾರ್ಫಾಲಜಿ ಜರ್ನಲ್​ನಲ್ಲಿ ಪ್ರಕಟವಾದ 2021ರ ಅಧ್ಯಯನ, ಕಳೆದ ದಶಕಗಳಲ್ಲಿ ಗ್ಲೇಶಿಯಲ್ ಹಿಮ್ಮೆಟ್ಟುವಿಕೆಯಿಂದಾಗಿ ದಕ್ಷಿಣ ಲೊನಾಕ್ ಸರೋವರವು ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ ಎಂದು ಹೈಲೈಟ್ ಮಾಡಿದೆ, ಇದರಿಂದಾಗಿ ಲೊನಾಕ್ ಸರೋವರದ ವಿಸ್ತರಣೆಯಾಗಿದ್ದು, ಇದು ಪ್ರಕೋಪ ಪ್ರವಾಹದ ಸಾಧ್ಯತೆ ಹೆಚ್ಚಿಸಲಿದೆ ಎಂದು ವರದಿ ಹೇಳಿತ್ತು. ಕರಗುವ ಹಿಮನದಿಗಳಿಂದ ರೂಪುಗೊಂಡ ಸರೋವರಗಳು ಇದ್ದಕ್ಕಿದ್ದಂತೆ ಒಡೆದಾಗ ಮೇಘಸ್ಪೋಟ ಸಂಭವಿಸುತ್ತವೆ. ಹಲವಾರು ಕಾರಣಗಳಿಂದ ಇದು ಸಂಭವಿಸಬಹುದು. ಉದಾಹರಣೆಗೆ ಸರೋವರದಲ್ಲಿ ನೀರಿನ ಹೆಚ್ಚಿನ ಸಂಗ್ರಹವೂ ಒಂದು ಕಾರಣ. ಸಿಕ್ಕಿಂನ ಹಿಮಾಲಯ ಪ್ರದೇಶದಲ್ಲಿರುವ ತೀಸ್ತಾ ಜಲಾನಯನ ಪ್ರದೇಶದಲ್ಲಿ ಹಲವಾರು ಹಿಮ ಸರೋವರಗಳನ್ನು ಹೊಂದಿದೆ. ಇದರಲ್ಲಿ ದಕ್ಷಿಣ ಲೊನಾಕ್ ಸರೋವರ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿದೆ ಎಂದು ಅಧ್ಯಯನ ಹೇಳಿತ್ತು.

    ರಾಷ್ಟ್ರೀಯ ವಿಪತ್ತೆಂದು ಘೋಷಿಸಿ

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಿಕ್ಕಿಂ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಹಠಾತ್ ಪ್ರವಾಹ ಮತ್ತು ಹಿಮಾಚಲ ಪ್ರದೇಶ ಪ್ರವಾಹ ಎರಡನ್ನೂ ರಾಷ್ಟ್ರೀಯ ವಿಪತ್ತುಗಳೆಂದು ಘೊಷಿಸುವಂತೆ ಕೇಂದ್ರಕ್ಕೆ ಒತ್ತಾಯಿಸಿದ್ದಾರೆ. ಸಿಕ್ಕಿಂ ಪ್ರವಾಹದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಅವರು ಸಂತಾಪ ಸೂಚಿಸಿದ್ದಾರೆ. ಕೈ ನಾಯಕ ರಾಹುಲ್, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳಿಗೆ ಸಹಾಯ ಮಾಡಲು ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts