More

    ಬಂಕೇನಹಳ್ಳಿಯಲ್ಲಿ ದಿಬ್ಬ ಕುಸಿತದ ಆತಂಕ

    ಬಣಕಲ್ (ಮೂಡಿಗೆರೆ ತಾ.): ಕಳೆದ ವರ್ಷದ ಪ್ರವಾಹದ ಪರಿಣಾಮ ಇನ್ನೂ ಬಂಕೇನಹಳ್ಳಿ ಜನ ಎದುರಿಸುತ್ತಲೇ ಇದ್ದಾರೆ. ಈ ವರ್ಷ ಮತ್ತೆ ಪ್ರವಾಹ ಬಂದರೆ ಮನೆಯೇ ನದಿಯಲ್ಲಿ ಕೊಚ್ಚಿ ಹೋಗುವುದು ಖಚಿತ.

    ಫಲ್ಗುಣಿ ಗ್ರಾಪಂ ವ್ಯಾಪ್ತಿಯ ಬಂಕೇನಹಳ್ಳಿಯ ಹೇಮಾವತಿ ನದಿ ತೀರದ ದಿಬ್ಬದ ಮೇಲೆ 40 ಕ್ಕೂ ಹೆಚ್ಚು ಮನೆಗಳಿವೆ. ದಿಬ್ಬ ಕಳೆದ ಮಳೆಗಾಲದಲ್ಲಿ ಕುಸಿಯಿತು. ಇನ್ನೂ ಕುಸಿಯಲಿರುವುದರಿಂದ ಜನ ಸ್ಥಳಾಂತರಗೊಳ್ಳಲು ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರೂ ಪರ್ಯಾಯ ಜಾಗ ನೀಡದಿರುವುದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.

    ಕಳೆದ ವರ್ಷದ ಮಳೆಗಾಲದಲ್ಲಿ ಭೋರ್ಗರೆದು ಹರಿದ ಹೇಮಾವತಿ ನದಿ ಇಬ್ಬದಿಯ ತೀರಗಳನ್ನು ಕೊರೆದಿದ್ದರಿಂದ ದಿಬ್ಬದ ಮನೆಗಳ ಸಮೀಪದವರೆಗೂ ಮಣ್ಣು ಕುಸಿದಿದೆ. ಸೇತುವೆಯೂ ಕೊಚ್ಚಿ ಹೋಗಿದೆ.

    ಸೇತುವೆ ಕೊಚ್ಚಿ ಹೋಗಿದ್ದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಪರ್ಯಾಯ ಜಾಗ ನೀಡುವಂತೆ ಮನವಿ ಮಾಡಿದ್ದರು. ಆದರೆ ಈವರೆಗೆ ಗ್ರಾಮಸ್ಥರಿಗೆ ಪರ್ಯಾಯ ಜಾಗದ ವ್ಯವಸ್ಥೆ ಕಲ್ಪಿಸಿಲ್ಲ.

    ಮಳೆಗಾಲ ಪ್ರಾರಂಭವಾಗುವುದರೊಳಗೆ ಪರ್ಯಾಯ ಜಾಗ ಗುರುತಿಸಿ ಬಂಕೇನಹಳ್ಳಿ ಗ್ರಾಮಸ್ಥರನ್ನು ಅಲ್ಲಿಗೆ ಸ್ಥಳಾಂತರಿಸದಿದ್ದರೆ ಈ ಮಳೆಗಾಲದಲ್ಲಿ ಮನೆಗಳು ಕುಸಿದು ಅನಾಹುತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

    ನಿಲ್ಲದ ತಡೆಗೋಡೆ: ನದಿ ತೀರದ ದಿಬ್ಬ ಕುಸಿಯದಂತೆ ಈ ಹಿಂದೆ ಹಲವು ಬಾರಿ ತಡೆಗೋಡೆ ನಿರ್ವಿುಸಲಾಗಿತ್ತು. ಆದರೆ ಅವೈಜ್ಞಾನಿಕವಾಗಿ ತಡೆಗೋಡೆ ನಿರ್ವಿುಸಿರುವುದರಿಂದ ಮತ್ತು ಸೇತುವೆಯ ಎತ್ತರಕ್ಕೆ ತಡೆಗೋಡೆ ನಿರ್ವಿುಸಿದ್ದರಿಂದ ತಡೆಗೋಡೆಯ ಎರಡೂ ಬದಿಗೆ ನೀರು ನುಗ್ಗಿ ದಿಬ್ಬ ಕೊರೆದು ತಡೆಗೋಡೆ ಕುಸಿದಿದೆ. ನೀರು ರಭಸವಾಗಿ ಹರಿಯುವುದರಿಂದ ಮತ್ತು ದಿಬ್ಬದ ಎತ್ತರದವರೆಗೆ ತಡೆಗೋಡೆ ನಿರ್ವಿುಸುವ ಅಗತ್ಯವಿದೆ. ಆದರೆ ಮೇನಲ್ಲಿ ಮಳೆ ಪ್ರಾರಂಭವಾಗುವುದರಿಂದ ಅಷ್ಟರೊಳಗೆ ತಡೆಗೋಡೆ ನಿರ್ವಿುಸುವುದು ಕಷ್ಟಸಾಧ್ಯ. ಹೀಗಾಗಿ ಗ್ರಾಮಸ್ಥರಿಗೆ ಪರ್ಯಾಯ ಜಾಗ ನೀಡುವುದೇ ಇದಕ್ಕೆ ಸೂಕ್ತ ಪರಿಹಾರ.

    ಪ್ರಾರಂಭವಾಗದ ನೂತನ ಸೇತುವೆ ಕಾಮಗಾರಿ: ಕಳೆದ ಮಳೆಗಾಲದಲ್ಲಿ ಸೇತುವೆ ಕೊಚ್ಚಿ ಹೋಗಿದ್ದರಿಂದ ಗ್ರಾಮಸ್ಥರು ತಾತ್ಕಾಲಿಕವಾಗಿ ಅಡಕೆ ಮರದಿಂದ ಕಾಲುಸಂಕ ನಿರ್ವಿುಸಿಕೊಂಡಿದ್ದರು. ನೀರಿನ ಹರಿವಿನ ತೀವ್ರತೆಗೆ ಕಾಲುಸಂಕವೂ ಕೊಚ್ಚಿ ಹೋಗಿದ್ದು ನಂತರ ಸರ್ಕಾರದಿಂದ ಮೋರಿಗಳನ್ನು ಹಾಕಿ ತಾತ್ಕಾಲಿಕ ಸೇತುವೆ ನಿರ್ವಿುಸಲಾಗಿತ್ತು. ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೂತನ ಸೇತುವೆ ನಿರ್ವಿುಸುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ನೂತನ ಸೇತುವೆ ಕಾಮಗಾರಿ ಪ್ರಾರಂಭವಾಗಿಲ್ಲ. ನೂತನ ಸೇತುವೆ ನಿರ್ಮಾಣ ಮಾಡದಿದ್ದರೆ ನದಿ ನೀರು ತೀರಗಳನ್ನು ಕೊರೆಯುವುದರಿಂದ ದಿಬ್ಬ ಕುಸಿತ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಫಲ್ಗುಣಿ ಗ್ರಾಪಂ ವ್ಯಾಪ್ತಿಯಲ್ಲಿ ಪರ್ಯಾಯ ಜಾಗವಿದ್ದರೆ ಸಂತ್ರಸ್ತರಿಗೆ ಜಾಗ ನೀಡಲು ಗ್ರಾಪಂ ಅಧಿಕಾರಿಗಳೊಂದಿಗೆ ಮಾತನಾಡಲಾಗುವುದು. ಬಂಕೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ದಿಬ್ಬ ಕುಸಿಯುತ್ತಿರುವ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎನ್ನುತ್ತಾರೆ ತಹಸೀಲ್ದಾರ್ ರಮೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts