More

    ಹಿಮಾಚ್ಛಾದಿತ ಬೆಟ್ಟದಲ್ಲಿ ಐವರು ಉಗ್ರರನ್ನು ಹೊಡೆದುರುಳಿಸಿದ ವಿಶೇಷ ಪಡೆ ಯೋಧರು, ಐವರು ಹುತಾತ್ಮ

    ನವದೆಹಲಿ: ಗಡಿ ನಿಯಂತ್ರಣ ರೇಖೆ ಬಳಿಯ ಕುಪ್ವಾರ ಬಳಿಯ ಹಿಮಾಚ್ಛಾದಿತ ಪರ್ವತ ಪ್ರದೇಶದಲ್ಲಿ ನಡೆದ ಭಾರಿ ಕಾರ್ಯಾಚರಣೆಯಲ್ಲಿ ಭಾರತೀಯ ಸೇನಾಪಡೆಯ ಐವರು ಯೋಧರು, ಐವರು ಉಗ್ರರನ್ನು ಕೊಂದು ಹುತಾತ್ಮರಾಗಿದ್ದಾರೆ.

    ಹಿಮಾಚಲಪ್ರದೇಶದ ಸುಬೇದಾರ್​ ಸಂಜೀವ್​ ಕುಮಾರ್​, ಉತ್ತರಾಖಂಡದ ಹವಲ್ದಾರ್​ ದಾವೇಂದ್ರ ಸಿಂಗ್​, ಹಿಮಾಚಲ ಪ್ರದೇಶದ ಸಿಪಾಯಿ ಬಾಲ ಕೃಷ್ಣನ್​, ಉತ್ತರಾಖಂಡದ ಸಿಪಾಯಿ ಅಮಿತ್​ ಕುಮಾರ್​ ಮತ್ತು ಜಾಜಸ್ಥಾನದ ಸಿಪಾಯಿ ಚತ್ರಪಾಲ್​ ಸಿಂಗ್​ ಹುತಾತ್ಮರಾದವರು.

    ಹತ ಉಗ್ರರ ಬಳಿಯಿಂದ ಭಾರಿ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

    ಏಪ್ರಿಲ್​ 1ರಂದು ಪಹರೆಯಲ್ಲಿದ್ದ ಯೋಧರು ಹಿಮಚ್ಛಾದಿತ ಪರ್ವತಶ್ರೇಣಿಯಲ್ಲಿ ಅಪರಿಚಿತರ ಹೆಜ್ಜೆಗುರುತುಗಳನ್ನು ಗಮನಿಸಿದ್ದರು. ಈ ಪ್ರದೇಶ ಅತ್ಯಂದ ಕಡಿದಾಗಿದ್ದು, ಬೆಟ್ಟದ ತುದಿ ತುಂಬಾ ಮೊನಚಾಗಿದೆ. ಆದರೂ, ಒಳನುಸುಳದಂತೆ ತಡೆಯಲು ಅಳವಡಿಸಿದ್ದ ಬೇಲಿಯನ್ನು ಹಾದ ಉಗ್ರರು ಭಾರತದ ಗಡಿಯೊಳಗೆ ಪ್ರವೇಶಿಸಿದ್ದರು ಎನ್ನಲಾಗಿದೆ.

    ತಕ್ಷಣವೇ ಇಡೀ ಪ್ರದೇಶದಲ್ಲಿ ಯೋಧರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಏಪ್ರಿಲ್​ 1ರ ಮಧ್ಯಾಹ್ನ 1 ಗಂಟೆಗೆ ಐವರು ಉಗ್ರರ ಗುಂಪು ಕಣ್ಣಿಗೆ ಬಿದ್ದಿತ್ತು. ಆದರೆ ತಮ್ಮೊಂದಿಗೆ ತಂದಿದ್ದ ಭಾರಿ ಪ್ರಮಾಣದ ಮದ್ದುಗುಂಡುಗಳ ಪೈಕಿ ತಲಾ ಒಂದೆರಡು ಚೀಲಗಳನ್ನು ಬಿಟ್ಟ ಉಗ್ರರು ಅಲ್ಲಿಂದ ತಪ್ಪಿಸಿಕೊಂಡು ಹೋಗಿದ್ದರು.

    ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಯೋಧರ ಪಡೆಯನ್ನು ಕರೆಯಿಸಿಕೊಂಡ ಗಡಿಭಾಗದ ಯೋಧರು, ಮತ್ತೆ ಶೋಧ ಕಾರ್ಯಾಚರಣೆ ಮುಂದುವರಿಸಿದ್ದರು. ಏಪ್ರಿಲ್​ 3ರ ಸಂಜೆ 4.30ಕ್ಕೆ ಮತ್ತು ಏಪ್ರಿಲ್​ 4ರ ಸಂಜೆ 6.30ಕ್ಕೆ ಉಗ್ರರು ಕಾಣಿಸಿಕೊಂಡರಾದರೂ, ಮತ್ತೆ ತಪ್ಪಿಸಿಕೊಂಡಿದ್ದರು. ಪರ್ವತ ಪ್ರದೇಶ ತುಂಬಾ ಕಡಿದಾಗಿ ಇದ್ದುದರಿಂದ, ಇಂಥ ಪ್ರದೇಶದಲ್ಲಿನ ಯುದ್ಧದ ತರಬೇತಿ ಪಡೆದಿರುವ ಪ್ಯಾರಾ ವಿಶೇಷ ಯೋಧರ ಪಡೆಯನ್ನು ಕರೆಯಿಸಿಕೊಂಡು, ಕಾರ್ಯಾಚರಣೆ ಮುಂದುವರಿಸಲು ಸೇನಾಪಡೆ ಮೂಲಗಳು ನಿರ್ಧರಿಸಿದವು. ಜತೆಗೆ ಮಾನವರಹಿತ ವಿಮಾನ ಬಳಸಿ ಯೋಧರನ್ನು ಪತ್ತೆ ಮಾಡುವ ಕೆಲಸವನ್ನೂ ಮಾಡಲಾಯಿತು.

    ಅಂತೆಯೇ ಸ್ಥಳಕ್ಕೆ ಬಂದ ಪ್ಯಾರಾ ವಿಶೇಷ ಪಡೆ ಯೋಧರನ್ನು ಹೆಲಿಕಾಪ್ಟರ್​ನಲ್ಲಿ ಉಗ್ರರು ಅಡಗಿಕೊಂಡಿರಬಹುದಾದ ಪ್ರದೇಶಕ್ಕೆ ಸಮೀಪದ ಬೆಟಾಲಿಯನ್​ನಲ್ಲಿ ಇಳಿಸಲಾಯಿತು. ಏಪ್ರಿಲ್​ 5ರಂದು ಬೆಳಗಾಗುತ್ತಲೇ ವಿಶೇಷ ಪಡೆ ಯೋಧರು ರಂಧೋರಿ ಬೆಹಕ್​ ಕಾರ್ಯಾಚರಣೆ ಎಂದು ಹೆಸರಿಸಲಾಗಿದ್ದ ಕಾರ್ಯಾಚರಣೆಯ ಭಾಗವಾಗಿ ಹೆಜ್ಜೆಯ ಗುರುತನ್ನು ಹಿಂಬಾಲಿಸಿಕೊಂಡು ಉಗ್ರರನ್ನು ಬೆನ್ನಟ್ಟಿದ್ದರು.

    ಆದರೆ ಯೋಧರು ನಿಂತಿದ್ದ ಚಾಚು ಹಿಮಗಡ್ಡೆ (ಕಾರ್ನಿಸ್​) ಮುರಿದು ಬಿದ್ದಿದ್ದರಿಂದ, ಕೆಳಗೆ ಹರಿಯುತ್ತಿದ್ದ ನೀರಿನ ಝರಿಯಲ್ಲಿ ಬಿದ್ದರು ಎನ್ನಲಾಗಿದೆ. ಅದೃಷ್ಟವಶಾತ್​ ಅವರು ಬಿದ್ಧ ನೀರಿನ ಝರಿಯ ಬಳಿಯಲ್ಲೇ ಉಗ್ರರು ಅಡಗಿ ಕುಳಿತಿದ್ದರು. ತಕ್ಷಣವೇ ಅವರ ಮೇಲೆ ಗುಂಡಿನ ದಾಳಿ ನಡೆಸಿದರು. ಆದರೆ ಅವರು ಸ್ವಲ್ಪ ಮೇಲ್ಭಾಗದಲ್ಲಿ ಇದ್ದುದರಿಂದ, ಹೋರಾಟ ತೀವ್ರಗತಿಯಲ್ಲಿ ಸಾಗಿತು. ತಮಗೆ ಗುಂಡು ತಾಗಿದರೂ ಯೋಧರು ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾದರು ಎಂದು ಸೇನಾಪಡೆ ಮೂಲಗಳು ತಿಳಿಸಿವೆ.

    ಪ್ರಧಾನಮಂತ್ರಿ ಸೇರಿ ಎಲ್ಲ ಸಚಿವರು, ಸಂಸದರ ವೇತನ 30 ಪರ್ಸೆಂಟ್​ ಕಟ್​: ಇನ್ನೊಂದು ವರ್ಷ ಪೂರ್ತಿ ವೇತನವಿಲ್ಲ; ಕೇಂದ್ರ ಸಂಪುಟ ನಿರ್ಣಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts