More

    ಐದು ವರ್ಷಕ್ಕೆ ಐದು ಮಂದಿ ಅಧ್ಯಕ್ಷರಾಗುವ ಯೋಗ

    ಗದಗ: ಗದಗ ಜಿಲ್ಲಾ ಪಂಚಾಯಿತಿ ಐದು ವರ್ಷಗಳ ಅವಧಿಗೆ ಐದು ಮಂದಿ ಅಧ್ಯಕ್ಷರಾಗುವ ಯೋಗ ಬಂದಿದೆ. ಬಹುಶಃ ರಾಜ್ಯದ ಯಾವುದೇ ಜಿಲ್ಲಾ ಪಂಚಾಯಿತಿಯಲ್ಲೂ ಒಂದೇ ಅವಧಿಯಲ್ಲಿ ಐದು ಜನರು ಅಧ್ಯಕ್ಷ ಸ್ಥಾನ ಅಲಂಕರಿಸಿದ ಉದಾಹರಣೆಗಳಿಲ್ಲ.

    ನಾಲ್ಕು ಜನ ಜಿಪಂ ಸದಸ್ಯರು ಈಗಾಗಲೇ ಅಧ್ಯಕ್ಷರಾಗಿ ಅಧಿಕಾರ ಅನುಭವಿಸಿ ಮಾಜಿ ಆಗಿದ್ದಾರೆ. ಇದೀಗ ಮತ್ತೊಬ್ಬ ಸದಸ್ಯ ಅಧ್ಯಕ್ಷರಾಗಲು ತುದಿಗಾಲ ಮೇಲೆ ನಿಂತಿದ್ದಾರೆ. ಉಳಿದ ನಾಲ್ಕೈದು ತಿಂಗಳ ಅವಧಿಗೆ ಹೊಸ ಅಧ್ಯಕ್ಷರ ನೇಮಕ ಮಾಡಲಾಗುತ್ತಿದೆ. ಇದರಿಂದ ಯಾರಿಗೆ ಉಪಯೋಗ ಎಂಬುದು ಗೊತ್ತಿಲ್ಲ. ಆದರೆ, ರಾಜ್ಯ ಸಚಿವ ಸ್ಥಾನಮಾನಕ್ಕೆ ಸಮನಾಗಿರುವ ಜಿಪಂ ಅಧ್ಯಕ್ಷ ಹುದ್ದೆಯಲ್ಲಿ ಕುಳಿತಿರುವವರು ಸರ್ಕಾರ ನೀಡುವ ಗೌರವಧನ, ವಿಶೇಷ ಭತ್ಯೆಗಳನ್ನು ಪಡೆದುಕೊಳ್ಳಬಹುದು.

    ಸರ್ಕಾರಿ ಕಾರು ಬಳಕೆ ಮಾಡುವುದರ ಜತೆಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರದ ಪ್ರಕಾರ ಆಮಂತ್ರಣ ಪತ್ರಿಕೆಯಲ್ಲಿ ಹೆಸರು ಕೂಡ ರಾರಾಜಿಸಲಿದೆ. ಅಷ್ಟು ಬಿಟ್ಟರೆ ಕಡಿಮೆ ಅವಧಿಯಲ್ಲಿ ಹೊಸ ಅಧ್ಯಕ್ಷರು ಮತ್ತೇನು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

    ಕಾಂಗ್ರೆಸ್ ಮುಖಂಡರು ಎಲ್ಲ ಸದಸ್ಯರನ್ನು ಸಮಾಧಾನಪಡಿಸುವ ಸಲುವಾಗಿ ಆರೆಂಟು ತಿಂಗಳಿಗೆ ಒಬ್ಬೊಬ್ಬ ಜಿಪಂ ಸದಸ್ಯರನ್ನು ಅಧ್ಯಕ್ಷ ಸ್ಥಾನದಲ್ಲಿ ಕೂರಿಸಿ ಖುಷಿ ಪಡಿಸುತ್ತಿದ್ದಾರೆ. ಇದರಿಂದ ಜನಸಾಮಾನ್ಯರಿಗಂತೂ ಎಳ್ಳಷ್ಟು ಲಾಭವಾಗಲಿಲ್ಲ. ಆದರೆ, ಅಧ್ಯಕ್ಷ ಗಾದಿಯೇರಿದ ಸದಸ್ಯರು ಅಧಿಕಾರದ ರುಚಿ ಅನುಭವಿಸಿದರು. ಮೂರನೇ ಅವಧಿಗೆ ಅಧ್ಯಕ್ಷರಾಗಿದ್ದ ಲಕ್ಕುಂಡಿ ಜಿಪಂ ಕ್ಷೇತ್ರದ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ ಕೆಲ ಅಭಿವೃದ್ಧಿ ಕಾರ್ಯಮಾಡಿದರು. ಉಳಿದ ಮೂವರು ತಮ್ಮ ಅವಧಿ (ಮುಖಂಡರು ನಿಗದಿಪಡಿಸಿದ ಅವಧಿ) ಪೂರ್ಣಗೊಳಿಸಿ ಹುದ್ದೆಗೆ ರಾಜೀನಾಮೆ ನೀಡಿದರು.

    ಕಾಂಗ್ರೆಸ್ ವಶ: 2016 ರ ಫೆಬ್ರವರಿಯಲ್ಲಿ ಜರುಗಿದ ಜಿಪಂ ಚುನಾವಣೆಯಲ್ಲಿ ಜಿಪಂ 19 ಸ್ಥಾನಗಳ ಪೈಕಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಗಳಿಸಿ ಮೇಲುಗೈ ಸಾಧಿಸಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ಮತ್ತು ಉಪಾಧ್ಯಕ್ಷ ಸಾಮಾನ್ಯ ವರ್ಗ ಮಹಿಳೆಗೆ ಮೀಸಲಾಗಿದೆ.

    2016ರ ಮೇ 4ರಂದು ಸೊರಟೂರು ಕ್ಷೇತ್ರದ ಸದಸ್ಯ ವಾಸಣ್ಣ ಕುರಡಗಿ ಪ್ರಥಮ ಅಧ್ಯಕ್ಷರಾಗಿ, ರೂಪಾ ಅಂಗಡಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. 2018 ಜ. 4ಕ್ಕೆ ಒಪ್ಪಂದದ ಅವಧಿ ಪೂರ್ಣಗೊಂಡಿತ್ತು. ಆದರೆ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯ ಕಾರಣದಿಂದ ವಾಸಣ್ಣ ಅವರನ್ನು ಮುಂದುವರಿಸಲಾಗಿತ್ತು. 2018ರ ಆಗಸ್ಟ್ ತಿಂಗಳು ವಾಸಣ್ಣ ಕುರಡಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಶಿಗ್ಲಿ ಜಿಪಂ ಸದಸ್ಯ ಎಸ್.ಪಿ. ಬಳಿಗಾರ (11 ತಿಂಗಳು), ಲಕ್ಕುಂಡಿ ಜಿಪಂ ಸದಸ್ಯ ಸಿದ್ಧಲಿಂಗೇಶ್ವರ ಪಾಟೀಲ (9 ತಿಂಗಳು), ಕೊಣ್ಣೂರು ಜಿಪಂ ಸದಸ್ಯ ರಾಜೂಗೌಡ ಕೆಂಚನಗೌಡ್ರ (7 ತಿಂಗಳು) ಅಧ್ಯಕ್ಷರಾಗಿದ್ದರು.

    18ಕ್ಕೆ ಚುನಾವಣೆ

    ಗದಗ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಡಿ. 18ರಂದು ಚುನಾವಣೆ ನಡೆಯಲಿದ್ದು, ಮತ್ತೊಬ್ಬ ಸದಸ್ಯ ಅಧ್ಯಕ್ಷರಾಗಲಿದ್ದಾರೆ. ಕಳೆದ 19 ವರ್ಷಗಳಿಂದ ಮುಂಡರಗಿ ತಾಲೂಕಿಗೆ ಜಿಪಂ ಅಧ್ಯಕ್ಷರಾಗುವ ಅವಕಾಶ ಲಭಿಸಿಲ್ಲ. ಈ ಸಲವಾದರೂ ಅವಕಾಶ ಸಿಗಬಹುದು ಎಂಬುದು ಆಶಾವಾದ ಮುಂಡರಗಿ ತಾಲೂಕಿನ ಜನರಲ್ಲಿ ಮೂಡಿದೆ.

    ನಾಲ್ಕು ಜನ ಉಪಾಧ್ಯಕ್ಷರು!

    ಜಿಪಂ ಸದಸ್ಯರಾದ ರೂಪಾ ಅಂಗಡಿ, ಶಕುಂತಲಾ ಮೂಲಿಮನಿ, ಮಲ್ಲವ್ವ ಬಿಚ್ಚೂರ ಈಗಾಗಲೇ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು, ಸದ್ಯ ಮುಂಡರಗಿ ತಾಲೂಕು ಹಮ್ಮಿಗಿ ಜಿಪಂ ಸದಸ್ಯ ಶೋಭಾ ಮೇಟಿ ಉಪಾಧ್ಯಕ್ಷರಾಗಿದ್ದಾರೆ. ಪ್ರಭಾರ ಅಧ್ಯಕ್ಷರಾಗಿ ಕೂಡ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಒಂದೆರಡು ತಿಂಗಳಲ್ಲಿ ಇವರಿಂದಲೂ ರಾಜೀನಾಮೆ ಪಡೆದು ಮತ್ತೊಬ್ಬ ಉಪಾಧ್ಯಕ್ಷರನ್ನು ನೇಮಕ ಮಾಡಬಹುದು.

    ನಗರಸಭೆಯಲ್ಲೂ ನಡೆದಿತ್ತು

    ಗದಗ-ಬೆಟಗೇರಿ ನಗರಸಭೆಯಲ್ಲಿ 2013ರಿಂದ 2018ವರೆಗೆ ಕಾಂಗ್ರೆಸ್ ಆಡಳಿತವಿತ್ತು. ಇಲ್ಲೂ ಕೂಡ ಐದು ವರ್ಷದ ಅವಧಿಯಲ್ಲಿ ಐದು ಮಂದಿ ಅಧ್ಯಕ್ಷರಾಗಿ ಆಡಳಿತ ನಡೆಸಿದರು. ಎಲ್ಲರನ್ನೂ ಸಮಾಧಾನಪಡಿಸುವ ಕಾಂಗ್ರೆಸ್ ಮುಖಂಡರ ಯೋಚನೆ, ಯೋಜನೆ ಫಲ ನೀಡಿಲ್ಲವಾದರೂ ಅದೇ ಸಂಪ್ರದಾಯ ಮತ್ತೆ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts