More

    ಆರ್ಯ ವೈಶ್ಯ ನಿಗಮದಿಂದ 5 ಕೋಟಿ ಡಿಬಿಟಿ ; ಹೊಸ ಉದ್ಯಮಿಗಳಿಗೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಸಾಲ

    ಬೆಂಗಳೂರು: ಹೊಸ ಉದ್ಯಮಿಗಳಿಗೆ ಹಾಗೂ ಬಡವರಿಗೆ ಆರ್ಯ ವೈಶ್ಯ ನಿಗಮ 1 ಲಕ್ಷದ ವರೆಗೆ ವಾರ್ಷಿಕ ಶೇ.4ರ ಬಡ್ಡಿ ದರದಲ್ಲಿ ಹಣ ನೀಡುತ್ತಿದ್ದು, ಎಲ್ಲರೂ ಈ ಸೌಲಭ್ಯ ಬಳಸಿಕೊಳ್ಳಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಮನವಿ ಮಾಡಿದರು.

    ವಿಕಾಸಸೌಧದ ಕಚೇರಿಯಲ್ಲಿ ಆರ್ಯ ವೈಶ್ಯ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ.ದೀಪಾಶ್ರೀ ಅವರೊಂದಿಗೆ ಆರ್ಯ ವೈಶ್ಯ ನಿಗಮದ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆಯಡಿಯಲ್ಲಿ 500 ಫಲಾನುಭವಿಗಳಿಗೆ 5 ಕೋಟಿ ರೂ. ಸಾಲ-ಸಹಾಯಧನವನ್ನು ನೇರ ನಗದು ವರ್ಗಾವಣೆ ಮಾಡಿ ಮಾತನಾಡಿದರು.

    2023-24ನೇ ಸಾಲಿನಲ್ಲಿ ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮಕ್ಕೆ ಬಿಡುಗಡೆಯಾದ 10 ಕೋಟಿ ರೂ. ಅನುದಾನದಲ್ಲಿ ಸ್ವಯಂ-ಉದ್ಯೋಗ ನೇರ ಸಾಲ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ ಹಾಗೂ ವಾಸವಿ ಜಲಶಕ್ತಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸಿಇಒ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಸಮಿತಿ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಈ ಮೂಲಕ ನವ ಉದ್ಯಮಿಗಳಿಗೆ ಸಹಾಯ ಹಸ್ತ ಚಾಚುವ ಗಮನಾರ್ಹ ಕೆಲಸಕ್ಕೆ ನಿಗಮವು ಮುಂದಾಗಿದೆ ಎಂದು ಸಂಸತ ವ್ಯಕ್ತಪಡಿಸಿದರು.

    ಈ ಯೋಜನೆಯಲ್ಲಿ ಫಲಾನುಭವಿಗಳಿಗೆ ತಲಾ 20 ಸಾವಿರ ರೂ. ಸಹಾಯಧನ ಹಾಗೂ 80 ಸಾವಿರ ರೂ. ಸಾಲ ಬಿಡುಗಡೆ ಮಾಡಿದ್ದು, ಫಲಾನುಭವಿಯು ಸಾಲವನ್ನು ಶೇ.4ರಷ್ಟು ಬಡ್ಡಿ ದರದಲ್ಲಿ ಮರುಪಾವತಿಯನ್ನು ಕೆಎಸಿಡಿಸಿ ಆಪ್ ಮೂಲಕ ಮರುಪಾವತಿಸಲು ಅವಕಾಶವಿರುತ್ತದೆ. ಆರ್ಯ ವೈಶ್ಯ ಈ ಸೌಲಭ್ಯವನ್ನು ನೀಡುತ್ತಿರುವ ಏಕೈಕ ನಿಗಮವಾಗಿದ್ದು, ಎಲ್ಲಾ ಫಲಾನುಭವಿಗಳು ತಮ್ಮ ಈ-ಮೇಲ್ ನಲ್ಲಿ ಸ್ವಯಂ ಚಾಲಿತ ಸಾಲ ಮಂಜೂರಾತಿ ಆದೇಶ ಪತ್ರ ಪಡೆಯಬಹುದಾಗಿದೆ ಎಂದರು.

    ಈವರೆಗೆ ನಿಗಮಕ್ಕೆ .4.57ಕೋಟಿ ರೂ. ಮರುಪಾವತಿ ಮೊತ್ತ ಸ್ವೀಕೃತಿಯಾಗಿದೆ. ಸಾಲ ಪಡೆದ ಫಲಾನುಭವಿಗಳು ಸಾಲವನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕೆಂದು ಮನವಿ ಮಾಡಿದರು.

    ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮಾತನಾಡಿ, ನಿಗಮವು ಸಂಪೂರ್ಣವಾಗಿ ಗಣಕೀಕರಣಗೊಂಡಿರುವುದರಿಂದ ಸಕಾಲದಲ್ಲಿ ಎಲ್ಲ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಾಧ್ಯವಾಗಿರುವುದು ಪ್ರಶಂಸನೀಯ ಎಂದು ಮೆಚ್ಚುಗೆ ಸೂಚಿಸಿದರು.

    ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಕೆ. ದೀಪಶ್ರೀ ಅವರು, ಆಹಾರ ವಾಹಿನಿ ಯೋಜನೆಯಡಿಯಲ್ಲಿ ಆಯ್ಕೆಯಾದ 40 ಫಲಾನುಭವಿಗಳಿಗೆ ಹಾಗೂ ವಾಸವಿ ಜಲಶಕ್ತಿ ಯೋಜನೆಯಡಿಯಲ್ಲಿ ಆಯ್ಕೆಯಾದ 36 ಫಲಾನುಭವಿಗಳಿಗೆ ಶೀಘ್ರದಲ್ಲಿ ಸಾಲ-ಸಹಾಯಧನದ ಮೊತ್ತವನ್ನು ಬಿಡುಗಡೆ ಮಾಡಲಾಗುವುದೆಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts