More

    ಆಲಡ್ಕದಲ್ಲಿ ತೈಲಸಾಗಾಟ ಪೈಪ್‌ಲೈನ್‌ಗೆ ಕನ್ನ ಪ್ರಕರಣ: ಐವರು ಆರೋಪಿಗಳ ಬಂಧನ

    ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

    ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಇಂಧನ ಸರಬರಾಜು ಪೈಪ್ ಲೈನ್‌ಗೆ ಕನ್ನ ಕೊರೆದು ವ್ಯವಸ್ಥಿತ ರೀತಿಯಲ್ಲಿ ಇಂಧನ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಐವರು ಆರೋಪಿಗಳನ್ನು ಧರ್ಮಸ್ಥಳ ಪೊಲೀಸರು ಬಂಧಿಸಿದ್ದಾರೆ.

    ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ದಿನೇಶ್ ಗೌಡ(40), ಪುದುವೆಟ್ಟು ಗ್ರಾಮದ ಮೋಹನ್(28), ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ನೆಲ್ಯಾಡಿ ನಿವಾಸಿ ಜಯ ಸುವರ್ಣ(39), ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹರೆಹಳ್ಳಿಯ ನಿವಾಸಿ ದಿನೇಶ್ (40) ಮತ್ತು ಕಡಬ ತಾಲೂಕಿನ ಕಾರ್ತಿಕ್(28) ಬಂಧಿತರು.

    ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ-800 ಕಾರು, 100 ಲೀಟರ್ ಡೀಸೆಲ್, ಪೈಪುಗಳು, ಡ್ರಿಲ್ಲಿಂಗ್ ಮಷಿನ್, ವೆಲ್ಡಿಂಗ್ ಮಷಿನ್, ಪರಸ್ಪರ ಸಂಪರ್ಕ ಸಾಧಿಸುತ್ತಿದ್ದ ಮೊಬೈಲ್ ಫೋನ್‌ಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

    ಘಟನೆಯ ಬಳಿಕ ತನಿಖಾ ತಂಡ ರಚಿಸಿಕೊಂಡ ಪೊಲೀಸರು ವಿವಿಧ ಆಯಾಮಗಳಿಂದ ತನಿಖೆ ಕೈಗೊಂಡಿದ್ದರು. ಅದರಂತೆ ಆರೋಪಿಗಳನ್ನು ಒಬ್ಬೊಬ್ಬೊರನ್ನಾಗಿಯೇ ಏ.1ರಂದು ಬಂಧಿಸಿದ್ದರು. ತನಿಖೆಯ ವಿಶಾಲತೆಗಾಗಿ ಮಾಹಿತಿ ಗೌಪ್ಯವಾಗಿಡಲಾಗಿತ್ತು ಎನ್ನಲಾಗಿದೆ. ನೆಲ್ಯಾಡಿಯಲ್ಲಿ ಆರೋಪಿಗಳು ಇರುವ ಬಗ್ಗೆ ಜಾಡು ಹಿಡಿದು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಮೊದಲ ಹಂತದಲ್ಲಿ ತನಿಖೆ ಕೈಗೊಂಡು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೇಳಲಾಗಿತ್ತು. ಅಂತೆಯೇ ನ್ಯಾಯಾಲಯ ಸಮ್ಮತಿಸಿ ಆರೋಪಿಗಳನ್ನು ಕಸ್ಟಡಿಗೆ ಒಪ್ಪಿಸಿದ್ದರು. ಈ ವೇಳೆ ಸ್ಥಳ ಮಹಜರು, ಸೊತ್ತುಗಳ ವಶಕ್ಕೆ ಪಡೆಯುವಿಕೆ ಮುಂತಾದ ಪ್ರಕ್ರಿಯೆ ನಡೆಸಿ ನ್ಯಾಯಾಲಯದ ವಾಯಿದೆಯಂತೆ ಮತ್ತೆ ಅವರನ್ನು ಏ.4.ರಂದು ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ವೇಳೆ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

    ಡೀಸೆಲ್ ಕಳ್ಳತನ

    ಮಂಗಳೂರು, ಹಾಸನ ಮತ್ತು ಬೆಂಗಳೂರಿಗೆ ಪೆಟ್ರೋನೆಟ್ ಪೈಪ್ ಮೂಲಕ ಡೀಸೆಲ್ ಸರಬರಾಜು ಆಗುತ್ತಿದ್ದು ಮಾ.16ರ ರಾತ್ರಿಯಿಂದ ಮಾ.19ರ ರಾತ್ರಿಯ ನಡುವೆ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಆಲಡ್ಕದಲ್ಲಿ ಯಾರೋ ಕಳ್ಳರು ಡಿಸೇಲ್ ಪೈಪ್ ಲೈನ್‌ನಲ್ಲಿ ರಂಧ್ರ ಕೊರೆದು 2.5 ಇಂಚು ಎಚ್‌ಡಿಪಿಇ ಪೈಪ್ ಮೂಲಕ ಅಂದಾಜು 12,000 ಲೀ. ಡಿಸೇಲ್ ಕಳವು ಮಾಡಿದ್ದರು. ಕಳವಾದ ಡಿಸೇಲ್‌ನ ಮೌಲ್ಯ 9,60,000 ರೂ. ಎಂದು ಅಂದಾಜಿಸಲಾಗಿತ್ತು. ಘಟನೆ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts