More

    2ನೇ ಟೆಸ್ಟ್‌ಗೆ ಅಕ್ಷರ್ ಪಟೇಲ್ ಫಿಟ್, ಶಾಬಾಜ್ ನದೀಂಗೆ ಕೊಕ್ ನಿರೀಕ್ಷೆ

    ಚೆನ್ನೈ: ಅಭ್ಯಾಸದ ವೇಳೆ ಆದ ಗಾಯದಿಂದಾಗಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಪದಾರ್ಪಣೆಯ ಅವಕಾಶವನ್ನು ಕೊನೇಕ್ಷಣದಲ್ಲಿ ತಪ್ಪಿಸಿಕೊಂಡಿದ್ದ ಗುಜರಾತ್‌ನ ಸ್ಪಿನ್ ಬೌಲಿಂಗ್ ಆಲ್ರೌಂಡರ್ ಅಕ್ಷರ್ ಪಟೇಲ್ 2ನೇ ಟೆಸ್ಟ್ ಪಂದ್ಯಕ್ಕೆ ಫಿಟ್ ಆಗಿದ್ದಾರೆ. ಮೊದಲ ಟೆಸ್ಟ್‌ನಲ್ಲಿ ನೀರಸ ನಿರ್ವಹಣೆ ತೋರಿದ ಜಾರ್ಖಂಡ್‌ನ ಎಡಗೈ ಸ್ಪಿನ್ನರ್ ಶಾಬಾಜ್ ನದೀಂ ಸ್ಥಾನವನ್ನು ಅಕ್ಷರ್ ತುಂಬುವ ನಿರೀಕ್ಷೆ ಇದೆ.

    2ನೇ ಟೆಸ್ಟ್ ಎಂಎ ಚಿದಂಬರಂ ಕ್ರೀಡಾಂಗಣದಲ್ಲೇ ಶನಿವಾರದಿಂದ ನಡೆಯಲಿದ್ದು, ಶುಕ್ರವಾರದ ವೇಳೆಗೆ ನದೀಂ ಸ್ಥಾನ ತುಂಬುವ ಆಟಗಾರನ ಹೆಸರು ಅಂತಿಮವಾಗಲಿದೆ. ‘ಅಕ್ಷರ್ ಮೊಣಕಾಲಿನಲ್ಲಿ ಸಣ್ಣ ಮಟ್ಟಿನ ನೋವು ಇತ್ತು. ಅವರು ನೆಟ್ಸ್‌ನಲ್ಲಿ ಈಗಾಗಲೆ ಬ್ಯಾಟಿಂಗ್ ಅಭ್ಯಾಸ ಆರಂಭಿಸಿದ್ದು, ಒಂದೆರಡು ದಿನದಲ್ಲಿ ಬೌಲಿಂಗ್ ಕೂಡ ಆರಂಭಿಸುವ ನಿರೀಕ್ಷೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ಭಾರತ ತಂಡ 2ನೇ ಟೆಸ್ಟ್‌ನಲ್ಲೂ ಸೋತರೆ ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ!?

    ಪ್ರಮುಖ ಸ್ಪಿನ್ನರ್ ಆರ್. ಅಶ್ವಿನ್‌ಗೆ ಮೊದಲ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಮೇಲೆ ಒತ್ತಡ ಹೇರಲು ಸಹ-ಸ್ಪಿನ್ನರ್‌ಗಳಾದ ಶಾಬಾಜ್ ನದೀಂ ಮತ್ತು ವಾಷಿಂಗ್ಟನ್ ಸುಂದರ್ ಅವರಿಂದ ಸಮರ್ಥ ಬೆಂಬಲ ಲಭಿಸಿರಲಿಲ್ಲ ಎಂಬುದನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೋಲಿನ ಬಳಿಕ ಒಪ್ಪಿಕೊಂಡಿದ್ದರು. ನದೀಂ ಪಂದ್ಯದ ಎರಡೂ ಇನಿಂಗ್ಸ್‌ಗಳಿಂದ ಒಟ್ಟು 59 ಓವರ್‌ಗಳಲ್ಲಿ ಸುಮಾರು 4ರ ಸರಾಸರಿಯಲ್ಲಿ 233 ರನ್ ಬಿಟ್ಟುಕೊಟ್ಟಿದ್ದರೆ, ವಾಷಿಂಗ್ಟನ್ ಮೊದಲ ಓವರ್‌ನಲ್ಲಿ 26 ಓವರ್‌ಗಳಲ್ಲಿ ವಿಕೆಟ್ ರಹಿತವಾಗಿ 98 ರನ್ ಬಿಟ್ಟುಕೊಟ್ಟಿದ್ದರು. ಆದರೆ ವಾಷಿಂಗ್ಟನ್ ಬ್ಯಾಟಿಂಗ್‌ನಲ್ಲಿ ಮಿಂಚಿರುವುದರಿಂದ ಮತ್ತು ಚೆನ್ನೈ ಅವರಿಗೆ ತವರು ಮೈದಾನವಾಗಿರುವುದರಿಂದ 2ನೇ ಟೆಸ್ಟ್‌ಗೂ ಸ್ಥಾನ ಉಳಿಸಿಕೊಳ್ಳುವ ಸಾಧ್ಯತೆ ಇದೆ. ಒಟ್ಟಾರೆಯಾಗಿ, 2ನೇ ಟೆಸ್ಟ್‌ಗೆ ಸ್ಪಿನ್ ವಿಭಾಗವನ್ನು ಬಲ ಪಡಿಸಲು ಭಾರತ ತಂಡ ಹೆಚ್ಚಿನ ಒತ್ತು ನೀಡಲಿದೆ.

    2ನೇ ಟೆಸ್ಟ್‌ಗೆ ಸ್ಪಿನ್ ಸ್ನೇಹಿ ಪಿಚ್
    ಚೆನ್ನೈನಲ್ಲಿ ಮೊದಲ ಟೆಸ್ಟ್ ಆಡಿದ ಪಿಚ್ ಫ್ಲ್ಯಾಟ್ ಆಗಿದ್ದ ಕಾರಣ ಭಾರತ ತಂಡ ಟಾಸ್ ಸೋತು ಭಾರಿ ಹಿನ್ನಡೆ ಎದುರಿಸಿತ್ತು. ಹೀಗಾಗಿ 2ನೇ ಟೆಸ್ಟ್ ಪಂದ್ಯವನ್ನು ಟಾಸ್ ನಿರ್ಣಾಯಕ ಎನಿಸದ ಪಿಚ್‌ನಲ್ಲಿ ಆಡಿಸಲು ತಮಿಳುನಾಡು ಕ್ರಿಕೆಟ್ ಸಂಸ್ಥೆ (ಟಿಎನ್‌ಸಿಎ) ಮುಂದಾಗಿದ್ದು, ಮೊದಲ ದಿನದಿಂದಲೇ ಸ್ಪಿನ್ ಸ್ನೇಹಿಯಾಗಿರುವ ನಿರೀಕ್ಷೆ ಇದೆ. ಸದ್ಯ ಪಿಚ್ ಹಸಿರು ಹುಲ್ಲಿನಿಂದ ಮುಚ್ಚಲ್ಪಟ್ಟಿದೆ. ಆದರೆ, ಬಿಸಿಸಿಐ ಗ್ರೌಂಡ್ ಸಮಿತಿ ಮುಖ್ಯಸ್ಥ ತಪೋಶ್ ಚಟರ್ಜಿ ಮತ್ತು ಟಿಎನ್‌ಸಿಎ ಕ್ಯುರೇಟರ್ ವಿ. ರಮೇಶ್ ಕುಮಾರ್ ಮುಂದಿನ 3 ದಿನಗಳ ಕಾಲ ಪಿಚ್‌ಗೆ ನೀರು ಹಾಯಿಸುವುದನ್ನು ನಿಲ್ಲಿಸುವ ಸಾಧ್ಯತೆ ಇದೆ. ಇದರಿಂದ ಪಿಚ್ ಸಂಪೂರ್ಣವಾಗಿ ಒಣಗಲಿದ್ದು, ಪಂದ್ಯದ ಮೊದಲ ದಿನವೇ ಪಿಚ್‌ನಲ್ಲಿ ಬಿರುಕು ಕಾಣಿಸಿಕೊಳ್ಳಲಿದೆ.

    5ಕ್ಕಿಳಿದ ವಿರಾಟ್, 3ಕ್ಕೇರಿದ ರೂಟ್
    ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‌್ಯಾಂಕಿಂಗ್‌ನಲ್ಲಿ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಮಿಂಚಿದ ಇಂಗ್ಲೆಂಡ್ ನಾಯಕ ಜೋ ರೂಟ್ 5ರಿಂದ 3ನೇ ಸ್ಥಾನಕ್ಕೇರಿದ್ದಾರೆ. ಇದರಿಂದಾಗಿ ಕೊಹ್ಲಿ 2ನೇ ಇನಿಂಗ್ಸ್‌ನಲ್ಲಿ 72 ರನ್ ಗಳಿಸಿದ ನಡುವೆಯೂ ಕುಸಿತ ಕಂಡಿದ್ದಾರೆ. 2017ರ ಸೆಪ್ಟೆಂಬರ್ ಬಳಿಕ ಇದೇ ಮೊದಲ ಬಾರಿಗೆ ರೂಟ್ 3ನೇ ಸ್ಥಾನಕ್ಕೇರಿದ್ದಾರೆ. ಕೇನ್ ವಿಲಿಯಮ್ಸನ್ ಮತ್ತು ಸ್ಟೀವನ್ ಸ್ಮಿತ್ ಮೊದಲೆರಡು ಸ್ಥಾನದಲ್ಲಿದ್ದರೆ, ಮಾರ್ನಸ್ ಲಬುಶೇನ್ 4ನೇ ಸ್ಥಾನದಲ್ಲಿದ್ದಾರೆ. ಚೇತೇಶ್ವರ ಪೂಜಾರ 7ನೇ ಸ್ಥಾನಕ್ಕೇರಿದ್ದರೆ, ಅಜಿಂಕ್ಯ ರಹಾನೆ ಅಗ್ರ 10ರಿಂದ ಹೊರಬಿದ್ದು 11ನೇ ಸ್ಥಾನಕ್ಕಿಳಿದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 91 ರನ್ ಸಿಡಿಸಿದ್ದ ರಿಷಭ್ ಪಂತ್, 13ನೇ ಸ್ಥಾನ ಉಳಿಸಿಕೊಂಡಿದ್ದು, 700 ರೇಟಿಂಗ್ಸ್ ಪಾಯಿಂಟ್ಸ್ ಗಳಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎನಿಸಿಕೊಂಡಿದ್ದಾರೆ. ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಆರ್.ಅಶ್ವಿನ್ ಹಾಗೂ ಜಸ್‌ಪ್ರೀತ್ ಬುಮ್ರಾ ಕ್ರಮವಾಗಿ 7ನೇ ಹಾಗೂ 8ನೇ ಸ್ಥಾನಕ್ಕೇರಿದ್ದಾರೆ. ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್‌ಸನ್ 6ರಿಂದ 3ನೇ ಸ್ಥಾನಕ್ಕೇರಿದ್ದಾರೆ.

    ಕೋಮು ಆಧಾರದಲ್ಲಿ ತಂಡ ಆಯ್ಕೆ, ನಿರ್ಗಮನ ಕೋಚ್​ ವಾಸಿಂ ಜಾಫರ್ ವಿರುದ್ಧ ಉತ್ತರಾಖಂಡ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts