More

    ಮೀನುಗಾರಿಕಾ ಋತುವಲ್ಲೇ ಮತ್ಸ್ಯಕ್ಷಾಮ, ಎರಡು ತಿಂಗಳಿಂದ ಕಡಲಿಗಿಳಿಯದ ಬೋಟುಗಳು

    ಭಟ್ಕಳ/ಗಂಗೊಳ್ಳಿ: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಕಳೆದ ಎರಡು ತಿಂಗಳಿನಿಂದ ಬರದ ಛಾಯೆ ಆವರಿಸಿದ್ದು, ಮತ್ಸ್ಯಕ್ಷಾಮದಿಂದ ಮೀನುಗಾರರು ಕಂಗಾಲಾಗಿದ್ದಾರೆ.

    ಕಡಳಿಗಿಳಿದ ಬೋಟುಗಳು ಸಮುದ್ರದಲ್ಲಿ ಮತ್ಸ್ಯಸಂಪತ್ತು ಇಲ್ಲದೆ ಬರಿಗೈಯಲ್ಲಿ ವಾಪಾಸಾಗುತ್ತಿದ್ದು, ಸ್ಥಳೀಯ ಮೀನುಗಾರರಿಗೆ ಆರ್ಥಿಕ ಹೊಡೆತ ನೀಡಿದೆ. ಮೀನುಗಾರಿಕಾ ಋತುವಿನ ಆರಂಭದಲ್ಲಿ ಉತ್ತಮ ಮೀನುಗಾರಿಕೆ ನಡೆಸುತ್ತಿದ್ದ ಈ ಭಾಗದ ಮೀನುಗಾರರು ಈ ಬಾರಿ ಸಂಕಷ್ಟಕ್ಕೀಡಾಗಿದ್ದಾರೆ. ಸಮುದ್ರದಲ್ಲಿ ಮತ್ಸ್ಯಸಂಪತ್ತು ಯಥೇಚ್ಛ ಪ್ರಮಾಣದಲ್ಲಿ ದೊರೆಯದಿರುವುದರಿಂದ ಫಿಶಿಂಗ್, ಪರ್ಸಿನ್ ಬೋಟುಗಳು ಬಂದರಿನಲ್ಲೇ ಲಂಗರು ಹಾಕಿವೆ. ಕೆಲವೊಂದು ಟ್ರಾಲ್‌ಬೋಟ್, ಫಿಶಿಂಗ್ ಬೋಟ್ ಮತ್ತು ದೋಣಿಗಳು ಕಡಲಿಗಿಳಿದರೂ ಮೀನು ದೊರೆಯುತ್ತಿಲ್ಲ. ಮೀನುಗಾರಿಕೆ ಇಲ್ಲದೆ ಗಂಗೊಳ್ಳಿ ಬಂದರು ಬಿಕೋ ಎನ್ನುತ್ತಿದ್ದು, ಮೀನುಗಾರ ಕಾರ್ಮಿಕರು, ಮಹಿಳೆಯರು ಕೆಲಸ ಇಲ್ಲದೆ ಕಷ್ಟದಲ್ಲಿ ಜೀವನ ಸಾಗಿಸುವಂತಾಗಿದೆ.

    ಕಳೆದ ಮೂರು ತಿಂಗಳಿನಿಂದ ಇಲ್ಲಿ ಬಹುತೇಕ ಬೋಟುಗಳು ಕಡಲಿಗಿಳಿದಿಲ್ಲ. ಮೀನುಗಾರಿಕೆಗೆ ತೆರಳಿದ ಬೋಟುಗಳೂ ಖಾಲಿಯಾಗಿ ದಡ ಸೇರುತ್ತಿವೆ. ಬೆಳಕು ಮೀನುಗಾರಿಕೆ ನಡೆಸುವ ಬೋಟುಗಳಿಗೆ ಕೂಡ ನಿರೀಕ್ಷೆಗೆ ತಕ್ಕಂತೆ ಮೀನು ದೊರೆಯದಿರುವುದರಿಂದ ಬೋಟ್ ಮಾಲೀಕರು ಚಿಂತಿತರಾಗಿದ್ದಾರೆ. ವೆಚ್ಚಕ್ಕೆ ತಕ್ಕ ಲಾಭ ಸಿಗುತ್ತಿಲ್ಲ. ಇದರ ಜತೆಗೆ ಡೀಸೆಲ್ ಬೆಲೆ ಹೆಚ್ಚಳವೂ ಮೀನುಗಾರರಿಗೆ ಹೊರೆಯಾಗುತ್ತಿದೆ. ಹೀಗಾಗಿ ಆರ್ಥಿಕ ನಷ್ಟ ಸಂಭವಿಸದಂತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಬೋಟುಗಳನ್ನು ಬಂದರಿನಲ್ಲಿ ಲಂಗರು ಹಾಕಲಾಗಿದೆ ಎಂದು ಸ್ಥಳೀಯ ಮೀನುಗಾರರು ವಿಜಯವಾಣಿಗೆ ತಿಳಿಸಿದ್ದಾರೆ.

    ಗಂಗೊಳ್ಳಿಯಲ್ಲಿ ಕಳೆದ ಎರಡು ತಿಂಗಳಿನಿಂದ ಮತ್ಸ್ಯಕ್ಷಾಮ ತಲೆದೋರಿದ್ದು, ಬಹುತೇಕ ಬೋಟುಗಳು ಗಂಗೊಳ್ಳಿಯಲ್ಲಿ ಲಂಗರು ಹಾಕಿವೆ. ಮತ್ಸ್ಯಕ್ಷಾಮದಿಂದ ಈ ಭಾಗದ ಮೀನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ತಮ್ಮ ದೈನಂದಿನ ಖರ್ಚುಗಳನ್ನು ಸರಿತೂಗಿಸಲು ಮೀನುಗಾರರು ಕಷ್ಟಪಡುತ್ತಿದ್ದಾರೆ. ಸರ್ಕಾರ ಮೀನುಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು.
    ರಾಮಪ್ಪ ಖಾರ್ವಿ, ಮೀನುಗಾರ ಮುಖಂಡ, ಗಂಗೊಳ್ಳಿ.

    ಕಳೆದ ಎರಡು ತಿಂಗಳಿನಿಂದ ಗಂಗೊಳ್ಳಿ ಬಂದರಿನಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ಸ್ತಬ್ಧಗೊಂಡಿದೆ. ಮೀನುಗಾರಿಕೆ ಇಲ್ಲದಿರುವುದರಿಂದ ದೈನಂದಿನ ಜೀವನ ನಡೆಸಲು ಕಷ್ಟವಾಗುತ್ತಿದೆ. ಮೀನುಗಾರಿಕೆಗೆ ತೆರಳಿದ ಬೋಟುಗಳು ಖಾಲಿಯಾಗಿ ವಾಪಾಸು ದಡಕ್ಕೆ ಬರುತ್ತಿರುವುದರಿಂದ ಕಾರ್ಮಿಕರಿಗೆ ಕೆಲಸ ಇಲ್ಲದಂತಾಗಿದೆ. ಪ್ರತಿನಿತ್ಯ ಕಾದು ಕಾದು ಸುಸ್ತಾಗಿದ್ದು ಜೀವನ ನಡೆಸಲು ಬಹಳ ತೊಂದರೆಯಾಗಿದೆ.
    ಅಶೋಕ ಎನ್.ಡಿ., ಮೀನುಗಾರ ಕಾರ್ಮಿಕ.

    ಭಟ್ಕಳದಲ್ಲೂ ನೀರಿಗಿಳಿಯದ ಬೋಟ್‌ಗಳು
    ಭಟ್ಕಳ:ಮೀತಿ ಮೀರಿ ಏರುತ್ತಿರುವ ಡೀಸೆಲ್ ಬೆಲೆಯಿಂದ ಮೀನುಗಾರರ ಬದುಕು ದುಸ್ತರವಾಗಿದೆ.ಭಟ್ಕಳ ತಾಲೂಕೊಂದರಲ್ಲೇ ನೂರಾರು ಬೋಟ್‌ಗಳು ದಡದಲ್ಲೇ ಲಂಗರು ಹಾಕಿದ್ದು, ಇದರಿಂದ ಮೀನುಗಾರರು ಒಪ್ಪೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
    ಮೀನುಗಾರಿಕೆ ಇಲಾಖೆಪ್ರಕಾರ 132 ಫಿಶಿಂಗ್ ಬೋಟ್‌ಗಳು, 16 ಪರ್ಸೀನ್ ಬೋಟ್‌ಗಳು, ಡೀಪ್ ಸೀ ಬೋಟ್ ಸೇರಿ ಒಟ್ಟು 227 ಬೋಟ್‌ಗಳು ಭಟ್ಕಳದಲ್ಲೇ ಇವೆ. ಇತ್ತೀಚಿನ ದಿನಗಳಲ್ಲಿ ಡೀಸೆಲ್ ಬೆಲೆ ಮೀತಿ ಮೀರಿ ಏರುತ್ತಿದ್ದು ಡೀಸೆಲ್ ಹಾಕಿ ಮೀನುಗಾರಿಕೆಗೆ ತೆರಳಿದರೆ ದಿನದ ಖರ್ಚು ಹೊಂದಿಸಲು ಕಷ್ಟವಾಗುತ್ತಿರುವುದರಿಂದ ಬೋಟ್ ಮಾಲೀಕರು ಮೀನುಗಾರಿಕೆಗೆ ಹಿಂದೇಟು ಹಾಕುತ್ತಿದ್ದಾರೆ. ಪರಿಸ್ಥಿತಿ ಹೀಗೆ ಸಾಗಿದರೆ ಮೀನುಗಾರರ ಬದುಕು ಮೂರಾಬಟ್ಟೆಯಾಗಲಿದ್ದು, ಕೂಡಲೇ ಸರ್ಕಾರ ನೆರವಿಗೆ ಧಾವಿಸಿ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎನ್ನುವುದು ಮೀನುಗಾರರ ಬೇಡಿಕೆ

    ಸಮಯಕ್ಕೆ ಬಾರದ ಸಬ್ಸಿಡಿ..!
    ಮೀನುಗಾರರಿಗೆಂದೇ ಸರ್ಕಾರ ಡೀಸೆಲ್ ಸಬ್ಸಿಡಿ ನೀಡುತ್ತಿದೆ. ಅದು ಡೀಸೆಲ್ ಬೆಲೆಗನುಗುಣವಾಗಿ ಪ್ರತಿದಿನ ವ್ಯತ್ಯಾಸವಾಗುತ್ತದೆ. ಅದನ್ನು ಕೂಡ ಸರ್ಕಾರ ಸಮಯಕ್ಕೆ ಸರಿಯಾಗಿ ಪಾವತಿಸುತ್ತಿಲ್ಲ. ಜನವರಿಯ ಸಬ್ಸಿಡಿಯೂ ಪಾವತಿಯಾಗಿಲ್ಲ ಎನ್ನುವುದು ಮೀನುಗಾರರ ಆರೋಪ. ಇವೆಲ್ಲಾ ರಗಳೆಗಳಿಂದ ಮುಕ್ತಮಾಡಿ ಡೀಸೆಲ್ ಕೊಳ್ಳುವಾಗಲೇ ಸಬ್ಸಿಡಿ ಕಟ್ ಮಾಡಿ ಪಾವತಿಸಲು ಅನುಮತಿ ನೀಡಿ ಎಂದು ಕರಾವಳಿಯ ಮೀನುಗಾರರ ಒಕ್ಕೂಟ ಇತ್ತೀಚಿಗೆ ಬೆಂಗಳೂರಿಗ ತೆರಳಿ ಮುಖ್ಯಮಂತ್ರಿಗೆ ಮನವಿ ಮಾಡಿದೆ.

    ತಾಲೂಕಿನಲ್ಲಿ 227ಬೋಟ್‌ಗಳು ಇದ್ದು ಅದರಲ್ಲಿ 193 ಬೋಟ್‌ಗಳು ಡೀಸೆಲ್ ಪಾಸ್‌ಬುಕ್ ಹೊಂದಿದ್ದಾರೆ. ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಮೀನುಗಾರರಿಗೆ ನೀಡುವ ಡೀಸೆಲ್ ಮಾರಾಟದಲ್ಲಿ ಇಳಿಕೆ ಕಂಡು ಬಂದಿದೆ. ಅರ್ಧದಷ್ಟು ಬೋಟ್‌ಗಳು ದಡದಲ್ಲೇ ಲಂಗರು ಹಾಕಿರುವುದು ನಿಜ. ಮೀನುಗಳ ಲಭ್ಯತೆಯೂ ಹಿಂದಿನಂತೆ ಇಲ್ಲ. ಎನ್ನುವುದು ಕೂಡ ಇದಕ್ಕೆ ಒಂದು ಕಾರಣ.
    ರವಿ.ಎಂ, ಮೀನುಗಾರಿಕೆ ಸಹಾಯಕ ನಿರ್ದೇಶಕ ಭಟ್ಕಳ

    ಒಂದೇ ಸಮನೆ ಏರುತ್ತಿರುವ ಡೀಸೆಲ್ ಬೆಲೆಯಿಂದ ಮೀನುಗಾರಿಕೆ ನಡೆಸುವುದೇ ದುಸ್ತರವಾಗಿದೆ. ಮೀನುಗಾರಿಕೆಗೆ ತೆರಳಿ ಖಾಲಿ ಕೈಯಿಂದ ಮರಳಿದರೆ ಒಂದು ತರಹದ ನಷ್ಟ. ಬೋಟ್‌ಗಳನ್ನು ಮೀನುಗಾರಿಕೆಗೆ ಕಳುಹಿಸದೆ ಇದ್ದರೆ ಮೀನುಗಾರರು ಕೆಲಸ ಬಿಡುವ ಸಂಕಷ್ಟ. ಸಾಲ ಮಾಡಿ ಕಂತು ಕಟ್ಟಲು ಹರಸಾಹಸ ಇನ್ನೊಂದೆಡೆ. ಆದಷ್ಟು ಬೇಗ ಸರ್ಕಾರ ಮೀನುಗಾರರ ಸಹಾಯಕ್ಕೆ ಬರದಿದ್ದರೆ ಮುಂದಿನ ದಿನಗಳಲ್ಲಿ ಮೀನುಗಾರಿಕೆ ನಡೆಸುವುದು ಹೇಗೆ ಎಂದು ಊಹಿಸುವುದು ಕಷ್ಟ.
    ವೆಂಕಟ್ರಮಣ ಮೊಗೇರ, ಪರ್ಸೀನ್ ಬೋಟ್ ಮಾಲೀಕ, ಭಟ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts