More

    ಮೀನುಗಾರಿಕೆಗೆ ಕೇರಳ ಮಾದರಿ

    – ಪ್ರಕಾಶ್ ಮಂಜೇಶ್ವರ ಮಂಗಳೂರು
    ಕರ್ನಾಟಕ ಸಮಗ್ರ ಮೀನುಗಾರಿಕೆ ನೀತಿಯ ಕರಡು ಸಿದ್ಧಗೊಂಡಿದ್ದು, ಮಾರ್ಚ್ 3ರ ರಾಜ್ಯ ಬಜೆಟ್‌ನಲ್ಲಿ ಅಂತಿಮ ಆದೇಶ ಘೋಷಣೆಯಾಗಲಿದೆ.
    ನೀತಿ ರೂಪಿಸುವ ಸಂದರ್ಭ ಕೇರಳ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ ಸಹಿತ ದೇಶದ ಕರಾವಳಿ ತೀರವನ್ನು ಹೊಂದಿರುವ ಎಲ್ಲ ರಾಜ್ಯಗಳ ನೀತಿಗಳ ಅಧ್ಯಯನ ನಡೆಸಲಾಗಿದೆ. ಕರ್ನಾಟಕಕ್ಕೆ ಹತ್ತಿರವಿರುವ ಕೇರಳದ ನೀತಿಯಿಂದ ಹೊಸ ನೀತಿ ಹೆಚ್ಚು ಪ್ರಭಾವಿತವಾಗಿದೆ ಎನ್ನುತ್ತದೆ ಇಲಾಖೆ ಮೂಲ.

    ಕರ್ನಾಟಕದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಒಟ್ಟು 320 ಕಿ.ಮೀ.ಉದ್ದದ ಕಡಲ ತೀರವನ್ನು ಹೊಂದಿವೆ. ಕಳೆದ ಕೆಲವು ವರ್ಷಗಳಿಂದ ಕರ್ನಾಟಕ ಕರಾವಳಿಯಲ್ಲಿ ಮತ್ಸೃ ಕ್ಷಾಮ ತಲೆದೋರಿದ್ದು ಈ ವರ್ಷ ಇದು ತೀವ್ರ ಸ್ವರೂಪ ತಲುಪಿದೆ. ಕಡಲಿಗೆ ಇಳಿಯುವ ಬೋಟುಗಳಿಗೆ ವ್ಯಯಮಾಡುವ ಇಂಧನದ ವೆಚ್ಚದಷ್ಟು ಸಂಪಾದನೆಯೂ ಇಲ್ಲದ ಸ್ಥಿತಿ ಇದೆ. ಬೂತಾಯಿ, ಬಂಗುಡೆಯಂತಹ ಸಾಮಾನ್ಯ ಮೀನುಗಳು ಕೂಡ ಅಪರೂಪವಾಗಿವೆ. ಈ ಹಿನ್ನೆಲೆಯಲ್ಲಿ ನೂತನ 1986 ಕರ್ನಾಟಕ ಸಮುದ್ರ ಮೀನುಗಾರಿಕೆ ಕಾಯ್ದೆ (ನಿಯಂತ್ರಣ) ಕುರಿತು ಮೀನುಗಾರರು ಹಾಗೂ ಪೂರಕ ಉದ್ಯಮಶೀಲರ ಕುತೂಹಲ ಹೆಚ್ಚಿದೆ.

    ಹೊಸ ಕಾಯ್ದೆಯಲ್ಲಿ ಏನಿದೆ?
    ಮೀನುಗಾರಿಕೆ ಚಟುವಟಿಕೆ ಮತ್ತು ಪೂರಕ ಬೋಟ್ ನಿರ್ಮಾಣ ಯಾರ್ಡ್, ಮೀನಿನ ಬಲೆಗಳ ಗಾತ್ರ ಉತ್ಪಾದನೆ ಘಟಕಗಳ ಬಗ್ಗೆ ನಿಖರ ನಿಯಮ ಇರಲಿದೆ. ಸಮುದ್ರದಲ್ಲಿ ಮೀನು ಹಿಡಿಯಲು ಬಳಸುವ ಬಲೆಯ ಕಣ್ಣು ಗಾತ್ರ ಕನಿಷ್ಠ 35 ಎಂ.ಎಂ.ಕಡ್ಡಾಯಗೊಳಿಸಿ ಮೀನುಗಾರಿಕಾ ಇಲಾಖೆ ಆದೇಶ ಹೊರಡಿಸಿದ್ದರೂ, ಸಮರ್ಪಕ ಅನುಷ್ಠಾನ ಆಗಿಲ್ಲ. ಇನ್ನು ಮುಂದೆ ಎಲ್ಲ ಬಲೆ ಹಾಗೂ ಬೋಟ್ ಉತ್ಪಾದನೆ ಘಟಕಗಳು ಇಲಾಖೆ ವ್ಯಾಪ್ತಿಯಲ್ಲೇ ಕಾರ್ಯನಿರ್ವಹಿಸಬೇಕು. ಪರವಾನಗಿ ಇಲ್ಲದೆ ಮೀನುಗಾರಿಕೆ ನಡೆಸುವಂತಿಲ್ಲ. ಮೀನುಗಾರಿಕೆಗೆ ತೆರಳುವ ಎಲ್ಲ ಬೋಟ್‌ಗಳ ನೋಂದಣಿ ಕಡ್ಡಾಯ. ಮೀನುಗಾರಿಕೆ ವ್ಯವಸ್ಥೆಯನ್ನು ತಾಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಸಮಿತಿಗಳು ನಿಯಂತ್ರಿಸುತ್ತವೆ. ದಂಡ ವಿಧಿಸುವ ಪ್ರಕ್ರಿಯೆಯಲ್ಲಿ ಪೂರ್ಣ ಬದಲಾವಣೆಯಾಗಲಿದೆ. ತಪಾಸಣೆ, ಮೀನುಗಾರಿಕೆ ಬೋಟ್‌ಗಳ ನಿರ್ಮಾಣ ಯಾರ್ಡ್ ಮತ್ತು ಬಲೆ ನೇಯುವ ಘಟಕಗಳ ಮಾಹಿತಿ ಪಡೆಯುವ ಮತ್ತು ವರದಿ ಸಲ್ಲಿಸುವ ಹೆಚ್ಚುವರಿ ಹೊಣೆಗಾರಿಕೆ ಮಧ್ಯಸ್ಥನಿಗೆ ನೀಡಲಾಗುವುದು.

    ಚರ್ಚೆ ಬಳಿಕವೇ ನಿರ್ಧಾರ
    ತಿದ್ದುಪಡಿಗೊಂಡ ಕಾಯ್ದೆ ಜಾರಿಗೂ ಮೊದಲು ಮೀನುಗಾರರು ಹಾಗೂ ಇತರ ಸಾರ್ವಜನಿಕರ ಮಟ್ಟದಲ್ಲಿ ಅಹವಾಲು ಸಲ್ಲಿಸಲು ಅವಕಾಶವಿದೆ. ಎಲ್ಲ ಹಂತಗಳಲ್ಲಿ ಚರ್ಚೆ ನಡೆದ ಬಳಿಕವಷ್ಟೇ ನೂತನ ಕಾಯ್ದೆ ಜಾರಿಯಾಗಲಿದೆ ಎಂದು ಮೀನುಗಾರಿಕೆ ಇಲಾಖೆ ದಕ್ಷಿಣ ಕನ್ನಡ ಉಪ ನಿರ್ದೇಶಕ ತಿಪ್ಪೇಸ್ವಾಮಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ. ಮೀನುಗಾರಿಕೆ ನಿರೀಕ್ಷಿತ ಮಟ್ಟದಲ್ಲಿ ಲಾಭದಾಯಕವಾಗದ ಹಿನ್ನೆಲೆಯಲ್ಲಿ ಕನಿಷ್ಠ ಮುಂದಿನ ಮೂರು ವರ್ಷಗಳ ಅವಧಿಗೆ ಹೊಸ ಬೋಟ್‌ಗಳಿಗೆ ಪರವಾನಗಿ ಒದಗಿಸದಂತೆ ಮೀನುಗಾರಿಕೆ ಇಲಾಖೆಯ ಜಿಲ್ಲಾ ಕಚೇರಿ ವರ್ಷದ ಹಿಂದೆಯೇ ಸರ್ಕಾರಕ್ಕೆ ಅಭಿಪ್ರಾಯ ತಿಳಿಸಿತ್ತು.

    ಮುಂದಿನ ಬಜೆಟ್‌ನಲ್ಲಿ ಹೊಸ ಮೀನುಗಾರಿಕೆ ನೀತಿ ಪ್ರಕಟಿಸಲು ಉದ್ದೇಶಿಸಲಾಗಿದೆ. ಮೀನುಗಾರಿಕೆಯನ್ನು ವೈಜ್ಞಾನಿಕ ಮತ್ತು ಲಾಭ ದಾಯಕವಾಗಿ ಮುಂದುವರಿಸಲು ಪೂರಕ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಹೊಸ ನೀತಿ ರೂಪಿಸಲಾಗಿದೆ. ಒಳನಾಡು ಮೀನುಗಾರಿಕೆ ಬೆಂಬಲಿಸುವ ಉದ್ದೇಶವಿದೆ. ಸಮುದ್ರ ತೀರ ಹೊಂದಿರುವ ದೇಶದ ಇತರ ರಾಜ್ಯಗಳ ನೀತಿಯನ್ನು ಅಧ್ಯಯನ ಮಾಡಿ ನೂತನ ನೀತಿ ರೂಪಿಸಲಾಗಿದೆ.
    – ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವ

    ಕರ್ನಾಟಕ ಸಮಗ್ರ ಮೀನುಗಾರಿಕೆ ನೀತಿಯ ಕರಡು ಸಿದ್ಧಗೊಂಡಿದೆ. ಕೇರಳದಲ್ಲಿ ಯಶಸ್ವಿಯಾಗಿರುವ ಹಲವು ಒಳ್ಳೆಯ ಅಂಶಗಳನ್ನು ಕರ್ನಾಟಕದ ಹೊಸ ನೀತಿಯಲ್ಲಿ ಪರಿಗಣಿಸಲಾಗಿದೆ.
    – ತಿಪ್ಪೇಸ್ವಾಮಿ, ಉಪನಿರ್ದೇಶಕರು, ಮೀನುಗಾರಿಕಾ ಇಲಾಖೆ, ದಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts