More

    ಆರಂಭದಲ್ಲೇ ಭರ್ಜರಿ ಮೀನುಗಾರಿಕೆ

    ಹರೀಶ್ ಮೋಟುಕಾನ, ಮಂಗಳೂರು
    ಕರಾವಳಿಯಲ್ಲಿ ಈ ವರ್ಷದ ಮೀನುಗಾರಿಕಾ ಋತು ಆರಂಭದಲ್ಲೇ ವಿದೇಶಕ್ಕೆ ರಫ್ತಾಗುವ ಮೀನುಗಳು ವಿಪುಲವಾಗಿ ಸಿಗುವ ಮೂಲಕ ಸಂಕಷ್ಟದಲ್ಲಿದ್ದ ಮೀನುಗಾರರ ಮುಖದಲ್ಲಿ ಮಂದಹಾಸ ಮೂಡಿದೆ.

    ಕಳೆದ ವರ್ಷ ಹಲವು ಕಾರಣಗಳಿಂದ ಮೀನುಗಾರಿಕೆ ಉದ್ಯಮ ತತ್ತರಿಸಿತ್ತು. ಟ್ರಾಲ್‌ಬೋಟ್‌ನವರಿಗೆ ಕಪ್ಪೆ ಬೊಂಡಾಸ್, ಕೋಲು ಬೊಂಡಾಸ್, ರಾಣಿ ಫಿಶ್ ಮೊದಲಾದ ವಿದೇಶಕ್ಕೆ ರಫ್ತಾಗುವ ಮೀನುಗಳು ಹೇರಳವಾಗಿ ಲಭಿಸಿವೆ. ಪರ್ಶಿಯನ್ ಬೋಟ್‌ಗಳಿಗೂ ಇಳುವರಿ ಉತ್ತಮವಾಗಿದೆ. ಮೀನು ಪ್ರಿಯರಿಗೆ ಸ್ಥಳೀಯವಾಗಿ ಅಗ್ಗದ ದರದಲ್ಲಿ ಹಲವು ಬಗೆಯ ಮೀನುಗಳು ಸಿಗಲಾರಂಭಿಸಿವೆ.

    ಜೂನ್-ಜುಲೈ ತಿಂಗಳ ರಜೆ ಬಳಿಕ ಆ.1ರಂದು ಮೀನುಗಾರಿಕೆ ಋತು ಆರಂಭಗೊಳ್ಳಬೇಕಿತ್ತು. ಬೋಟ್ ಮಾಲೀಕರಿಗೆ ಡೀಸೆಲ್ ಸಬ್ಸಿಡಿಯ ಪಾಸ್ ಬುಕ್ ಸಿಗುವಾಗ ವಿಳಂಬವಾಗಿ ಹೆಚ್ಚಿನ ಬೋಟ್‌ಗಳು ಆ.15ರ ಬಳಿಕ ಡೀಸೆಲ್ ಡೆಲಿವರಿ ಪಾಯಿಂಟ್‌ನಲ್ಲಿ ಕರ ರಹಿತ ದರದಲ್ಲಿ ಡೀಸೆಲ್ ಪಡೆದು ಪೂರ್ಣಪ್ರಮಾಣದಲ್ಲಿ ಮೀನುಗಾರಿಕೆಗೆ ತೆರಳಿವೆ.

    ವಿದೇಶಗಳಿಗೆ ರಫ್ತಾಗಲು ಕೊಚ್ಚಿನ್, ಗೋವಾ ಮತ್ತು ಗುಜರಾತ್‌ಗಳಿಗೆ ಮೀನು ಸಾಗಾಟವಾಗುತ್ತಿದೆ. ಡೀಸೆಲ್ ಸಮಸ್ಯೆ ಬಗೆಹರಿದ ಬಳಿಕ ಶೇ.90ರಷ್ಟು ಬೋಟ್‌ಗಳು ಆಳ ಸಮುದ್ರ ಮೀನುಗಾರಿಕೆಗೆ ತೆರಳಿವೆ. ಎರಡು ವರ್ಷಗಳಿಂದ ಮೀನುಗಾರರು ಸಂಕಷ್ಟದಲ್ಲಿದ್ದರು. ಕಳೆದ ವರ್ಷ ಈ ಅವಧಿಯಲ್ಲಿ ಕೋವಿಡ್ ಮತ್ತು ಕಾರ್ಮಿಕರು ಬಾರದೆ ಮೀನುಗಾರಿಕೆ ನಡೆದಿರಲಿಲ್ಲ. ನಂತರ ಚಂಡ ಮಾರುತಗಳಿಂದ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿತ್ತು. ಇದೇ ಸಂದರ್ಭ ಡೀಸೆಲ್ ದರವೂ ಗಗನಕ್ಕೇರಿದರಿಂದ ಬೋಟುಗಳನ್ನು ದಡಕ್ಕೆ ತಂದು ಲಂಗರು ಹಾಕಲಾಗಿತ್ತು.

    ಈ ವರ್ಷದ ಮೀನುಗಾರಿಕೆಯಲ್ಲಿ ಅಂಜಲ್, ಬೊಂಡಾಸ್, ಕಪ್ಪೆ ಬೊಂಡಾಸ್, ಮದ್ಮಲ್, ಫಿಶ್ ಮೀಲ್‌ಗೆ ಹೋಗುವ ಮುರಿ ಮೀನ್ ಸಹಿತ ಉತ್ತಮ ಮೀನುಗಾರಿಕೆ ನಡೆಯುತ್ತಿದೆ. ಮೀನು ಹೊರ ರಾಜ್ಯಗಳಿಗೆ ಹೋಗುತ್ತಿದೆ ಎಂದು ಮತ್ಸೊೃೀದ್ಯಮಿ ಮಜೀದ್ ಬಂದರು ತಿಳಿಸಿದ್ದಾರೆ.

    ಆಳ ಮೀನುಗಾರಿಕೆಗೆ ಪೂರಕ ವಾತಾವರಣ: ಸಮುದ್ರ ಪ್ರಶಾಂತವಾಗಿರುವುದರಿಂದ ಆಳ ಸಮುದ್ರದಲ್ಲಿ ಉತ್ತಮ ರೀತಿಯಲ್ಲಿ ಮೀನುಗಾರಿಕೆ ನಡೆಯುತ್ತಿದೆ. ಇದೇ ರೀತಿಯಲ್ಲಿ ಕೊನೆಯ ತನಕ ಮುಂದುವರಿದರೆ ಈ ವರ್ಷ ಲಾಭದಾಯಕವಾಗಲಿದೆ. ಸರ್ಕಾರದಿಂದಲೂ ಮೀನುಗಾರರಿಗೆ ಒಳ್ಳೆಯ ರೀತಿಯಲ್ಲಿ ಸ್ಪಂದನೆ ಸಿಗುತ್ತಿದೆ ಎಂದು ಬಂದರಿನ ಉದ್ಯಮಿ ಮಜೀದ್ ತಿಳಿಸಿದ್ದಾರೆ. ಮೀನುಗಾರಿಕೆ ಉದ್ಯಮದ ಜತೆಗೆ ಬಂದರಿನಲ್ಲಿ ಮಂಜುಗಡ್ಡೆ ಅಂಗಡಿ, ಹೊಟೇಲ್, ಫಿಶ್ ಕಟ್ಟಿಂಗ್, ಟ್ರಾನ್ಸ್‌ಪೋರ್ಟ್ ಸಹಿತ ಎಲ್ಲ ಉದ್ಯಮಗಳೂ ಯಶಸ್ವಿಯಾಗಿ ನಡೆಯುತ್ತಿವೆ. ಕಾರ್ಮಿಕರಿಗೂ ಉತ್ತಮ ಸಂಬಳ ಸಿಗುತ್ತಿದೆ. ಟೆಂಪೋ, ಬೈಕ್‌ಗಳಲ್ಲಿ ಮನೆ ಮನೆಗೆ ಕೊಂಡೊಯ್ದು ಮೀನು ಮಾರುವವರಿಗೆ ಹಾಗೂ ಮಾರುಕಟ್ಟೆಗಳಲ್ಲಿ ಮೀನು ಮಾರುವ ಮಹಿಳೆಯರಿಗೆ ಉತ್ತಮ ವ್ಯಾಪಾರವಾಗುತ್ತಿದೆ.

    ಈ ವರ್ಷದ ಮೀನುಗಾರಿಕಾ ಋತುವಿನಲ್ಲಿ ಆ.15ರಿಂದ ಪೂರ್ಣಪ್ರಮಾಣದಲ್ಲಿ ಮೀನುಗಾರಿಕೆ ಆರಂಭವಾಗಿದೆ. ಆಳ ಸಮುದ್ರ ಮೀನುಗಾರರಿಗೆ ವಿಪುಲವಾಗಿ ಮೀನು ಲಭಿಸಿದೆ. ಡೀಸೆಲ್ ಸಮಸ್ಯೆಯೂ ಬಗೆಹರಿದಿದೆ. ವಿದೇಶಗಳಿಗೆ ಮೀನು ರಫ್ತಾಗಲು ಆರಂಭಿಸಿದೆ.
    – ಮೋಹನ್ ಬೆಂಗ್ರೆ
    ಮೀನುಗಾರ ಮುಖಂಡ, ಮಂಗಳೂರು

    ಮಲ್ಪೆಯಲ್ಲೂ ಮೀನುಗಾರಿಕೆ ಉತ್ತಮ ರೀತಿಯಲ್ಲಿ ಆರಂಭಗೊಂಡಿದ್ದು, ಕೆಲವು ದಿನಗಳಿಂದ ಒಂದಷ್ಟು ಕಡಿಮೆ ಪ್ರಮಾಣದಲ್ಲಿ ಲಭಿಸಿದೆ. ಮೀನುಗಾರರ ಶ್ರಮಕ್ಕೆ ಪೂರಕವಾಗಿ ವರ್ಷವಿಡೀ ವಿಪುಲವಾಗಿ ಮೀನು ಲಭಿಸಬೇಕು ಎನ್ನುವುದು ಎಲ್ಲ ಮೀನುಗಾರರ ಪ್ರಾರ್ಥನೆ. ಸ್ಥಳೀಯವಾಗಿ ಅಗ್ಗದ ದರದಲ್ಲಿ ಮೀನು ಮಾರಾಟವಾಗುತ್ತಿದೆ.
    ಕೃಷ್ಣಪ್ಪ ಸುವರ್ಣ ಅಧ್ಯಕ್ಷ, ಮಲ್ಪೆ ಮೀನುಗಾರರ ಸಂಘ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts