More

    ನಿಷೇಧವಿಲ್ಲದಿದ್ದರೂ ಮೀನುಗಾರಿಕೆ ಬಂದ್

    ಕಾರವಾರ: ವಿವಿಧ ಕಾರಣಗಳಿಂದ ಆಳ ಸಮುದ್ರ ಮೀನುಗಾರಿಕೆ ತಿಂಗಳ ಮುಂಚೆ ಭಾಗಶಃ ಬಂದ್ ಆಗಿದೆ. ಬೋಟ್​ಗಳು ಈಗಾಗಲೇ ಲಂಗರು ಹಾಕಿವೆ. ಸದಾ ಜನರಿಂದ ಗಿಜಿಗುಡುತ್ತಿದ್ದ ಬಂದರುಗಳು ಸ್ತಬ್ಧವಾಗಿವೆ.

    ಆಳ ಸಮುದ್ರದಲ್ಲಿ ಬಲೆಗೆ ಬೀಳುವ ಮೀನಿನ ಪ್ರಮಾಣ ಕಡಿಮೆಯಾಗಿದೆ. ಬೋಟ್​ಗಳ ಓಡಾಟಕ್ಕೆ ಬಳಸುವ ಡೀಸೆಲ್ ಬೆಲೆ ದ್ವಿಗುಣವಾಗಿದೆ. ಬೋಟ್​ನಲ್ಲಿ ದುಡಿಯಲು ಕಾರ್ವಿುಕರ ಕೊರತೆಯಿದೆ. ಇದರಿಂದ ಅತಿ ದೂರದವರೆಗೆ ಹೋಗುವ ಶೇ. 95ರಷ್ಟು ಪರ್ಸೀನ್ ಬೋಟ್​ಗಳು ಈಗಾಗಲೇ ಲಂಗರು ಹಾಕಿವೆ. ಬೆರಳೆಣಿಕೆಯಷ್ಟು ಟ್ರಾಲರ್ ಬೋಟ್​ಗಳು ಮಾತ್ರ ಸಮುದ್ರಕ್ಕೆ ತೆರಳುತ್ತಿವೆ.

    ಜೂನ್ 1ರಿಂದ ಆಗಸ್ಟ್ ಕೊನೆಯವರೆಗೆ ಸರ್ಕಾರ ಆಳ ಸಮುದ್ರ ಮೀನುಗಾರಿಕೆಯನ್ನು ನಿಷೇಧ ಮಾಡುತ್ತದೆ. ಈ ಅವಧಿಯಲ್ಲಿ ಬೋಟ್​ಗಳು ದಡದಲ್ಲೇ ಲಂಗರು ಹಾಕುವುದು ವಾಡಿಕೆ. ಕಳೆದ ಬಾರಿ ಲಾಕ್​ಡೌನ್ ಸಂದರ್ಭದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿತ್ತು. ಆದರೆ, ಈ ಬಾರಿ ಮೀನುಗಾರಿಕೆಗೆ ನಿಷೇಧ ಹೇರದಿದ್ದರೂ ಏಪ್ರಿಲ್ ಕೊನೆಯಲ್ಲೆ ಹೆಚ್ಚಿನ ಬೋಟ್​ಗಳು ದಡ ಸೇರಿವೆ.

    ಕಳೆದ ವರ್ಷ ಲಾಕ್​ಡೌನ್ ನಂತರ ಮೀನುಗಾರಿಕೆಗೆ ಹೊರ ರಾಜ್ಯದ ಕಾರ್ವಿುಕರು ಆಗಮಿಸಿಲ್ಲ. ಇದರಿಂದ ಬೋಟ್​ಗಳಲ್ಲಿ ಕಾರ್ವಿುಕರ ಕೊರತೆ ಕಾಡುತ್ತಿದೆ. ರಾಜ್ಯದ ಕೊಪ್ಪಳ ಸೇರಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಕೆಲವೇ ಕಾರ್ವಿುಕರಿಂದ ಕಳೆದ ನಾಲ್ಕೈದು ತಿಂಗಳಿಂದ ಮೀನುಗಾರಿಕೆಗೆ ಸಾಗಿತ್ತು. ಈಗ ಮತ್ತೆ ಕರೊನಾ ಲಾಕ್​ಡೌನ್ ಸುದ್ದಿ ಕೇಳಿದ್ದರಿಂದ ಮುಂದೆ ಜೀವನ ಕಷ್ಟ ಎಂದು ಆತಂಕಗೊಂಡ ಬೈತಖೋಲ, ಮುದಗಾ ಮುಂತಾದ ಬಂದರುಗಳಲ್ಲಿದ್ದ ನೂರಾರು ಕಾರ್ವಿುಕರು ಕಳೆದ ಎರಡು ದಿನಗಳಿಂದ ದಂಡು, ದಂಡಾಗಿ ಸ್ವಗ್ರಾಮಗಳಿಗೆ ತೆರಳುತ್ತಿದ್ದಾರೆ. ಇನ್ನು ಸ್ಥಳೀಯ ಕಾರ್ವಿುಕರನ್ನು ಆಧರಿಸಿ ನಡೆಯುತ್ತಿರುವ ಟ್ರಾಲರ್ ಬೋಟ್ ಮೀನುಗಾರಿಕೆಗೂ ಮತ್ಸ್ಯ ಕ್ಷಾಮದಿಂದ ಲಾಭವಾಗುತ್ತಿಲ್ಲ. ಹೋದರೆ ಡೀಸೆಲ್ ಹಾಗೂ ಕಾರ್ವಿುಕರ ವೇತನ ಪಾವತಿಗೆ ಸರಿಸಮನಾಗುತ್ತಿದೆ ಎಂಬುದು ಮಾಲೀಕರ ಗೋಳು. ಇದರಿಂದ ಕಾರವಾರದಲ್ಲಿರುವ 70ಕ್ಕೂ ಹೆಚ್ಚು ಟ್ರಾಲರ್ ಬೋಟ್​ಗಳ ಪೈಕಿ ನಾಲ್ಕೈದು ಬೋಟ್​ಗಳು ಮಾತ್ರ ಮೀನುಗಾರಿಕೆ ನಡೆಸುತ್ತಿವೆ.

    ಮೀನು ಕೊರತೆ: ಮೀನುಗಾರಿಕೆ ಕಡಿಮೆಯಾಗಿದ್ದರಿಂದ ಮಾರುಕಟ್ಟೆಯಲ್ಲಿ ಮೀನಿನ ತೀವ್ರ ಕೊರತೆ ಉಂಟಾಗಿದೆ. ಬೆಲೆ ಭಾರಿ ಏರಿಕೆ ಕಂಡಿದೆ. ಇದರಿಂದ ಕರಾವಳಿಯ ಮತ್ಸ್ಯ ಪ್ರಿಯರು ಮೊಟ್ಟೆ ಹಾಗೂ ಕೋಳಿ ಮಾಂಸ ಸೇವನೆಯತ್ತ ಆಸಕ್ತಿ ತೋರುತ್ತಿದ್ದಾರೆ. ಮೊದಲು 20 ರಿಂದ 25 ರೂ. ಇದ್ದ ಪ್ರತಿ ಬಾಂಗಡೆ ಬೆಲೆ ಈಗ 50 ರಿಂದ 100 ರೂ.ವರೆಗೂ ಏರಿಕೆಯಾಗಿದೆ. ಮೊದಲು 10 ರೂ.ಗಿಂತ ಕಡಿಮೆ ಬೆಲೆಗೆ ಸಿಗುತ್ತಿದ್ದ ಪ್ರತಿ ತಾರ್ಲೆ ಮೀನಿನ ಬೆಲೆ ಈಗ 15 ರೂ.ಗೆ ಏರಿಕೆಯಾಗಿದೆ. ಇಸ್ವಾಣದ ಬೆಲೆ ಪ್ರತಿ ಕೆಜಿಗೆ 800 ರೂ. ತಲುಪಿದೆ.

    ಕಳೆದ ವರ್ಷದಿಂದ ಕರೊನಾ ಮಹಾಮಾರಿಗೆ ಮೀನುಗಾರರು ತತ್ತರಿಸಿದ್ದಾರೆ. ಈಗ ಲಾಕ್​ಡೌನ್ ನಿಯಮಾವಳಿಗಳಿಂದ ಮೀನುಗಾರರು ಮತ್ತಷ್ಟು ತೊಂದರೆಗೆ ಈಡಾಗಿದ್ದಾರೆ. ಕಳೆದ ವರ್ಷ ಸರ್ಕಾರ ವಿವಿಧ ಸಮುದಾಯದವರಿಗೆ ಸಹಾಯಧನ ಘೊಷಿಸಿತ್ತು. ಆದರೆ, ಮೀನುಗಾರರಿಗೆ ಏನನ್ನೂ ನೀಡಿಲ್ಲ. ಡೀಸೆಲ್ ಬೆಲೆ ಹೆಚ್ಚಳ, ಮೀನುಗಾರಿಕೆ ಆದಾಯ ಖೋತಾದಿಂದ ಹಲವು ಬೋಟ್ ಮಾಲೀಕರು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಳ್ಳುವ ಹಂತ ತಲುಪಿದ್ದಾರೆ. ಈ ಬಾರಿಯಾದರೂ ಎಲ್ಲ ಮೀನುಗಾರರಿಗೆ ತಿಂಗಳಿಗೆ 10 ಸಾವಿರ ರೂ. ಸಹಾಯಧನ ನೀಡಬೇಕು. | ಉಮಾಕಾಂತ ಹೊಸ್ಕಟ್ಟ ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts