More

    30 ಲಕ್ಷ ರೂ. ವೆಚ್ಚದಲ್ಲಿ ಫಿಶ್ ಮಾರ್ಕೆಟ್ ನಿರ್ಮಿಸಿದರೂ ನಿಗದಿಯಾಗಿದ್ದ ಉದ್ಘಾಟನೆ ರದ್ದಾಗಿ ಬಿಡ್ತು ನೋಡಿ..!

    ಶ್ರೀಧರ ಅಡಿ 

    ಗೋಕರ್ಣ: ತೊರ್ಕೆ ಗ್ರಾಪಂ ವತಿಯಿಂದ ಮಾದನಗೇರಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ವಿುಸಿರುವ ನೂತನ ಮೀನು ಮಾರುಕಟ್ಟೆ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ನಡೆಯಬೇಕಿತ್ತು. ಪ್ರಾಧಿಕಾರದ ಅಧ್ಯಕ್ಷರು ಮಾರುಕಟ್ಟೆಯನ್ನು ಉದ್ಘಾಟಿಸಲಿದ್ದರು. ಆದರೆ, ಜಾಗದ ಕುರಿತು ಉಂಟಾದ ವಿವಾದದಿಂದಾಗಿ ಕಾರ್ಯಕ್ರಮ ರದ್ದಾಗಿದೆ.

    ಕುಮಟಾ ತಾಲೂಕಿನ ಮಾದನಗೇರಿಯಲ್ಲಿ ಮೀನು ಮಾರುಕಟ್ಟೆ ಕಟ್ಟಲಾಗಿದ್ದರೂ ಕಂದಾಯ ದಾಖಲೆ ಪ್ರಕಾರ ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಪಂನ ಬಳಲೆ ಊರಿಗೆ ಸೇರಿದೆ ಎನ್ನುವುದೇ ಕಾರ್ಯಕ್ರಮ ರದ್ದಾಗಲು ಪ್ರಮುಖ ಕಾರಣವಾಗಿದೆ. ಸಗಡಗೇರಿ ಗ್ರಾಪಂ ಈ ಕಾರ್ಯಕ್ರಮಕ್ಕೆ ಆಕ್ಷೇಪ ಸಲ್ಲಿಸಿತ್ತು. ಇದರಿಂದಾಗಿ ಉದ್ಘಾಟನೆಯನ್ನು ಮುಂದಕ್ಕೆ ಹಾಕಲಾಗಿದೆಯಾಗಿ ಮಾರುಕಟ್ಟೆ ನಿರ್ವಿುಸಿ ಕೊಟ್ಟ ಭೂಸೇನಾ ನಿಗಮ ಕೊನೆಯ ಕ್ಷಣದಲ್ಲಿ ತೊರ್ಕೆ ಗ್ರಾಪಂಗೆ ತಿಳಿಸಿ ಕಾರ್ಯಕ್ರಮ ರದ್ದು ಪಡಿಸಿತು ಎನ್ನಲಾಗಿದೆ.

    ಹಕ್ಕು ಮಂಡನೆಗೆ ಮುಂದಾದ ಸಗಡಗೇರಿ ಗ್ರಾಪಂ: ಕುಮಟಾ ತಾಲೂಕಿನ ತೊರ್ಕೆ ಗ್ರಾಪಂಗೆ ಸೇರಿದ ಮಾದನಗೇರಿ ಕನ್ನಡ ಶಾಲೆಯಿಂದ ಮುಂದಕ್ಕೆ ಅಂಕೋಲಾ ತಾಲೂಕಿನ ಸಗಡಗೇರಿ ಗ್ರಾಪಂಗೆ ಒಳಪಟ್ಟ ಬಳಲೆ ಗ್ರಾಮವಿದೆ. ಕಂದಾಯ ದಾಖಲೆ ಪ್ರಕಾರ ಮಾರುಕಟ್ಟೆ ಜಾಗ ಮಾದನಗೇರಿಯ ಬದಲು ಬಳಲೆಗೆ ಸೇರಿರುವುದರಿಂದ ಸಗಡಗೇರಿ ಗ್ರಾಪಂ ಈ ಕುರಿತು ಹಕ್ಕು ಮಂಡನೆಗೆ ಮುಂದಾಗಿದೆ. ಈ ಕುರಿತು ಮಾತನಾಡಿದ ಸಗಡಗೇರಿ ಗ್ರಾಪಂ ಪಿಡಿಒ ಸಂದೀಪ ಗಾಂವಕರ, ಮಾರುಕಟ್ಟೆ ಜಾಗ ಬಳಲೆಗೆ ಸೇರಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮುಂದಿನ ಕ್ರಮಕ್ಕೆ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ. ಸದ್ಯ ಗ್ರಾಪಂ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇರದ ಕಾರಣ ವಿಷಯವನ್ನು ಮೇಲಧಿಕಾರಿಗಳಿಗೆ ಮತ್ತು ಸಂಬಂಧಿಸಿದವರಿಗೆ ವರದಿ ಮಾಡಲಾಗಿದೆ’ ಎಂದಿದ್ದಾರೆ.

    ಮುಂದುವರಿದ ಅತಂತ್ರತೆ: ಈ ಭಾಗದಲ್ಲಿ ಮಾರುಕಟ್ಟೆ ಇಲ್ಲದೆ ಹೋಗಿರುವುದರಿಂದ ಕಳೆದ ಅನೇಕ ವರ್ಷಗಳಿಂದ 50ಕ್ಕೂ ಹೆಚ್ಚಿನ ಮೀನುಗಾರ ಮಹಿಳೆಯರು ನಿತ್ಯ ಬಿಸಿಲು ಮಳೆಯಲ್ಲಿ ರಸ್ತೆ ಬದಿಯಲ್ಲಿ ಕುಳಿತು ವ್ಯಾಪಾರ ಮಾಡುವಂತಾಗಿದೆ. ಮಾರುಕಟ್ಟೆ ಸಿದ್ಧವಾಗಿ ಎರಡು ವರ್ಷ ಕಳೆದಿದ್ದರೂ ಉದ್ಘಾಟನೆ ಆಗದೇ ಇರುವ ಹಿನ್ನೆಲೆಯಲ್ಲಿ ಜಿಪಂ ಸದಸ್ಯರಾದ ಪ್ರದೀಪ ನಾಯಕ ಮತ್ತು ಜಗದೀಶ ನಾಯಕ ಮೊಗಟಾ ಇತ್ತೀಚಿನ ಜಿಪಂ ಸಭೆಯಲ್ಲಿ ಉದ್ಘಾಟನೆಗೆ ಒತ್ತಾಯಿಸಿದ್ದರು. ಮೀನುಗಾರ ಮಹಿಳೆಯರಿಗಾಗಿ ನಿರ್ವಿುಸಲಾದ ಮಾರ್ಕೆಟ್​ನ ಉದ್ಘಾಟನೆ ಕಾರ್ಯಕ್ರಮ ಸದ್ಯ ರದ್ದಾದ ಹಿನ್ನೆಲೆಯಲ್ಲಿ ಈ ಮಹಿಳೆಯರು ಇನ್ನಷ್ಟು ದಿನ ಅತಂತ್ರ ಸ್ಥಿತಿಯಲ್ಲಿ ಮುಂದುವರಿಯುವುದು ಅನಿವಾರ್ಯವಾಗಿದೆ.

    2018 ರಲ್ಲೇ ಕಟ್ಟಡ ಸಿದ್ಧ: ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಹಿಂದಿನ ಅಧ್ಯಕ್ಷರಾದ ಅಂದಿನ ಶಾಸಕಿ ಶಾರದಾ ಶೆಟ್ಟಿ ಅವರ ಅವಧಿಯಲ್ಲಿ 30 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಮೀನು ಮಾರ್ಕೆಟ್ ನಿರ್ವಿುಸಲು ಭೂಮಿ ಪೂಜೆ ನಡೆದಿತ್ತು. ಈ ಬಗ್ಗೆ ತೊರ್ಕೆ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಶಾಲಾ ಆಟದ ಮೈದಾನದ ಪೈಕಿ 2ಗುಂಟೆ ಜಾಗವನ್ನು ಮಾರುಕಟ್ಟೆಗೆ ಬಿಟ್ಟುಕೊಡಲು ಠರಾವು ಸ್ವೀಕರಿಸಲಾಗಿತ್ತು. ಆ ತರುವಾಯ ನೂತನ ಮಾರ್ಕೆಟ್ ಜಾಗದಲ್ಲಿದ್ದ ಹಳೇ ಕಟ್ಟಡವನ್ನು ತೆಗೆದು ಅದರ ಅಗತ್ಯ ಸಾಮಾನುಗಳನ್ನು ಲಿಲಾವಿನಲ್ಲಿ ತೊರ್ಕೆ ಗ್ರಾಪಂ ಮಾರಾಟ ಮಾಡಿ ಕಟ್ಟಡಕ್ಕೆ ಅಗತ್ಯವಿರುವ ವಿವಿಧ ಅನಾಕ್ಷೇಪಣಾ ಪತ್ರವನ್ನು ಕೂಡ ತೊರ್ಕೆ ಗ್ರಾಪಂ ನೀಡಿತ್ತು. ಇದನ್ನು ಅವಲಂಬಿಸಿ ಕಾಮಗಾರಿ ನಡೆದು ಎರಡು ವರ್ಷ ಹಿಂದೆ 2018ರಲ್ಲೇ ಕಟ್ಟಡ ಸಿದ್ಧಗೊಂಡಿತ್ತು.

    ಈ ಭಾಗದ ಗ್ರಾಮಗಳ ಜನರಿಗೆ ಮೀನು ಮಾರುಕಟ್ಟೆಯ ಅಗತ್ಯ ಬಹಳವಾಗಿದೆ.ಇದರಿಂದ ಕುಮಟಾ ಮತ್ತು ಅಂಕೋಲಾ ತಾಲೂಕಿನ ಗ್ರಾಮಸ್ಥರಿಗೆ ಅನುಕೂಲವಾಗಲಿರುವ ಕಾರಣ ಆದಷ್ಟು ಬೇಗ ಎರಡೂ ತಾಲೂಕಿನ ಸಂಬಂಧಿಸಿದವರು ಒಟ್ಟಾಗಿ ಉದ್ಘಾಟನೆ ಮಾಡಿ ಬಯಲಿನಲ್ಲಿ ಮಾರಾಟ ನಡೆಸುತ್ತಿರುವ ಮೀನುಗಾರ ಮಹಿಳೆಯರಿಗೆ ಅನುಕೂಲ ಮಾಡಿಕೊಡುವ ಅಗತ್ಯವಿದೆ. | ಪ್ರದೀಪ ನಾಯಕ ಜಿಪಂ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts