More

    ಮೀನು ವ್ಯಾಪಾರಿಗೆ ತಲವಾರಿನಿಂದ ಹಲ್ಲೆ: 2 ಲಕ್ಷ ರೂ. ನಗದು ದೋಚಿ ಪರಾರಿಯಾದ ದುಷ್ಕರ್ಮಿಗಳು

    ಉಳ್ಳಾಲ: ಮಂಗಳೂರಿಗೆ ತೆರಳುತ್ತಿದ್ದ ಮೀನು ವ್ಯಾಪಾರಿಯ ಟೆಂಪೋವನ್ನು ರಾಷ್ಟ್ರೀಯ ಹೆದ್ದಾರಿ 66ರ ಆಡಂಕುದ್ರುವಿನಲ್ಲಿ ಶನಿವಾರ ಬೆಳಗ್ಗೆ ಅಡ್ಡಗಟ್ಟಿದ ತಂಡ ಮಾರಕಾಯುಧಗಳಿಂದ ಹಲ್ಲೆ ನಡೆಸಿ ನಗದು ದೋಚಿ ಪರಾರಿಯಾಗಿದೆ.

    ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮುಸ್ತಫಾ(47) ಘಟನೆಯಲ್ಲಿ ಗಂಭೀರ ಗಾಯಗೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಮೀನು ವ್ಯಾಪಾರ ನಡೆಸುತ್ತಿರುವ ಮುಸ್ತಫಾ ಎಂದಿನಂತೆ ಶನಿವಾರ ಮುಂಜಾನೆ ಮೀನು ಖರೀದಿಗಾಗಿ ತಮ್ಮ ಟೆಂಪೋದಲ್ಲಿ ಮಾಸ್ತಿಕಟ್ಟೆಯ ಮೂಸಾ ಎಂಬುವರ ಜತೆ ಧಕ್ಕೆಗೆ ಹೊರಟಿದ್ದರು. ಆಡಂಕುದ್ರು ತಲುಪಿದಾಗ ಹಿಂದಿನಿಂದ ಬಂದ ಕಾರು ಟೆಂಪೋವನ್ನು ಅಡ್ಡಗಟ್ಟಿದೆ. ಕಾರಿನಲ್ಲಿದ್ದ ಮೂವರು ಮುಸುಕುಧಾರಿಗಳ ಪೈಕಿ ಇಬ್ಬರು ಕೆಳಗಿಳಿದು ಮುಸ್ತಫಾ ಅವರಲ್ಲಿದ್ದ ಹಣದ ಬ್ಯಾಗ್ ನೀಡುವಂತೆ ಬೆದರಿಸಿದರು. ನಿರಾಕರಿಸಿದ ಮುಸ್ತಫಾ ಟೆಂಪೊದಿಂದ ಕೆಳಗಿಳಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ದುಷ್ಕರ್ಮಿಗಳು ಅವರತ್ತ ತಲವಾರು ಬೀಸಿದರು.

    ಮುಸ್ತಫಾ ಕೈಗಳನ್ನು ಅಡ್ಡ ಹಿಡಿದ ಪರಿಣಾಮ, ಎರಡು ಕೈಗಳಿಗೂ ಗಾಯಗಳಾಗಿವೆ. ಅವರು ನೋವಿನಿಂದ ನರಳುತ್ತಿದ್ದಾಗಲೇ ದುಷ್ಕರ್ಮಿಗಳು 2.15 ಲಕ್ಷ ರೂ.ವನ್ನು ದರೋಡೆ ಮಾಡಿ ಪರಾರಿಯಾಗಿದ್ದಾರೆ.
    ಗಾಯಾಳು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದರೋಡೆ ನಡೆದ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಪರಿಸರದ ಸಿಸಿಟಿವಿ ಕ್ಯಾಮರಾ ಫೂಟೇಜನ್ನು ಪರಿಶೀಲಿಸುತ್ತಿದ್ದಾರೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ತಲವಾರಿಂದ ಹಲ್ಲೆ ಪ್ರಕರಣಕ್ಕೆ ವೈಯಕ್ತಿಕ ದ್ವೇಷ ಕಾರಣ. ನಗದು ದೋಚಿದ ಪ್ರಕರಣ ಬಗ್ಗೆ ತನಿಖೆ ನಡೆಯಲಿದೆ. ತಂಡದಲ್ಲಿದ್ದವರು ಬ್ಯಾರಿ ಭಾಷೆ ಮಾತನಾಡುತ್ತಿದ್ದರು ಎಂದು ಗಾಯಾಳು ತಿಳಿಸಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಶೀಘ್ರ ಕ್ರಮ ಕೈಗೊಳ್ಳಲಿದ್ದೇವೆ.
    ಎನ್. ಶಶಿಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts