More

    ಭದ್ರಾ ಹಿನ್ನೀರಿನಲ್ಲಿ ಮೀನು ಶಿಕಾರಿ ಜೋರು

    ಎನ್.ಆರ್.ಪುರ: ಭದ್ರಾ ನದಿಗೆ ಅಣೆಕಟ್ಟು ನಿರ್ಮಾಣದಿಂದ ತಾಲೂಕಿನ ಬಹುಭಾಗ ಮುಳುಗಡೆಯಾಯಿತು. ಅಂದಿನಿಂದ ಭತ್ತದ ಕಣಜದ ಜಾಗದಲ್ಲಿ ಹಿನ್ನೀರು ವ್ಯಾಪಿಸಿ ದ್ವೀಪವಾಯಿತು. ಬಳಿಕ ಇಲ್ಲಿನ ಜನರ ಜೀವನ ಶೈಲಿಯೂ ಬದಲಾಯಿತು. ಬಹುತೇಕರಿಗೆ ಮೀನುಗಾರಿಕೆಯೇ ಜೀವನಾಧಾರವಾಗಿದೆ. ಸದ್ಯ ಭದ್ರಾ ಹಿನ್ನೀರಿನ ಮೀನುಗಳಿಗೆ ಭಾರಿ ಬೇಡಿಕೆ ಇದೆ.

    ಭದ್ರಾ ಹಿನ್ನೀರಿನಲ್ಲಿ ಸ್ವಾಭಾವಿಕವಾಗಿ ಬೆಳೆಯುವ ಔಲು, ಗಿರಲು, ಸುರಗಿ, ಗೊಜಲೆ, ಕೊಳಸು, ಹಾವುಮೀನು, ಕುಚ್ಚ, ಮುರುಗೋಡ್, ಬಾಳೆ, ಪಟ್ಟಕರ, ಬಿಳ್ಚಿ, ಅರ್ಜು ಹೇರಳವಾಗಿ ಸಿಗುತ್ತಿದ್ದವು. ಇಲ್ಲಿನ ಮೀನುಗಳನ್ನು ಹೊರ ರಾಜ್ಯಗಳಿಗೂ ಸಾಗಣೆ ಮಾಡಲಾಗುತ್ತಿತ್ತು. ಇದನ್ನು ಗಮನಿಸಿದ ಅಕ್ಕಪಕ್ಕದ ಪಟ್ಟಣಗಳ ಜನತೆ ಇಲ್ಲಿಗೆ ಬಂದು ಮೀನುಗಳನ್ನು ಹಿಡಿದು ಹೊರ ರಾಜ್ಯಗಳಿಗೆ ಮಾರಾಟ ಮಾಡಲಾರಂಭಿಸಿದರು.
    ತಾಲೂಕಿಗೆ ಹೊಸದಾಗಿ ಬಂದ ಶಿಳ್ಯೆಕ್ಯಾತರ ಜನಾಂಗದವರು ತಾಲೂಕಿನ ಮೀನುಕ್ಯಾಂಪ್, ರಾವೂರು, ಮಾರಿದಿಬ್ಬ, ಸಾರ್ಯ, ಕೂಸ್ಗಲ್, ಮೋರಿಮಠ, ಸುಗ್ಗಪ್ಪನಮಠ, ಲಿಂಗಾಪುರಗಳಲ್ಲಿ ಬೀಡುಬಿಟ್ಟು ಮೀನುಗಾರಿಕೆಯನ್ನು ಕಸುಬನ್ನಾಗಿ ಮಾಡಿಕೊಂಡರು. ಹೆಚ್ಚು ಲಾಭ ಕಂಡುಕೊಂಡ ಕೆಲ ಅನ್ಯ ವೃತ್ತಿಯವರು ಮೀನು ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಉತ್ತಮ ನಾಟಿ ಮೀನುಗಳನ್ನು ಮಾರುಕಟ್ಟೆಗೆ ತರದೆ ಮೀನುಗಾರರಿಗೆ ಹೆಚ್ಚಿನ ಹಣದ ಆಸೆ ತೋರಿಸಿ ಗೋಡೌನ್‌ಗಳಲ್ಲಿ ಶೇಖರಿಸಿ ಪ್ರತಿದಿನ ಮೀನುಗಳನ್ನು ಸಾಗರ, ಮುಂಬಯಿ, ಪುಣೆಗೆ ಸಾಗಿಸುತ್ತಾರೆ. ಏಕೆಂದರೆ ಭದ್ರಾ ಹಿನ್ನೀರಿನ ಮೀನುಗಳು ಭಾರಿ ರುಚಿಯಾಗಿರುತ್ತವೆ ಹಾಗೂ ಎಲ್ಲ ಜಾತಿಯ ಮೀನುಗಳು ದೊರಕುತ್ತವೆ.
    ಮುಂಗಾರು ಮಳೆ ಸಂದರ್ಭದಲ್ಲಿ ಭದ್ರಾ ಹಿನ್ನೀರಿನಲ್ಲಿ ಮೀನು ಶಿಕಾರಿ ಜೋರಾಗಿರುತ್ತದೆ. ಈ ವೇಳೆ ಭಾರಿ ಗಾತ್ರದ ಮೀನುಗಳನ್ನು ಮಾರುಕಟ್ಟೆಗೆ ತರಲಾಗುತ್ತದೆ. ಈ ಮೀನುಗಳನ್ನು ನಾಲ್ಕೈದು ಜನರು ಖರೀದಿಸಿ, ಪಾಲು ಮಾಡಿಕೊಳ್ಳುತ್ತಾರೆ. ಭಾರಿ ಗಾತ್ರದ ಮೀನುಗಳನ್ನು ನೋಡಲೆಂದೇ ಜನರೂ ಮಾರುಕಟ್ಟೆಗೆ ಬರುತ್ತಾರೆ. ಇಲ್ಲಿನ ಮಾರುಕಟ್ಟೆಗೆ 56, 30, 40 ಕೆ.ಜಿ ಗಾತ್ರದ ಮೀನುಗಳನ್ನು ತರಲಾಗುತ್ತದೆ.
    ಭದ್ರಾ ಹಿನ್ನೀರಿನ ಮೀನುಗಳಲ್ಲಿ ಗೋಜಳ ಮೀನುಗಳಿಗೆ ಭಾರಿ ಬೇಡಿಕೆ ಇದೆ. ಈ ಮೀನಿನಿಂದ ಔಷದ ತಯಾರಿಸಲಾಗುತ್ತದೆ. ಈ ಮೀನುಗಳು ಮಾರುಕಟ್ಟೆಗಿಂತ ಭದ್ರಾ ಹಿನ್ನೀರಿನ ದಡದಲ್ಲೇ ವ್ಯಾಪಾರವಾಗುತ್ತವೆ. ಮೀನುಗಳ ಖರೀದಿಗೆಂದೇ ಪ್ರತ್ಯೇಕ ತಂಡವಿದೆ. ತಂಡದವರು ಗೋಜಳ ಮೀನುಗಳನ್ನು ಖರೀದಿಸಿ ಸಾಗರಕ್ಕೆ ಸಾಗಿಸುತ್ತಾರೆ.
    ಭದ್ರಾ ಹಿನ್ನೀರು ವ್ಯಾಪ್ತಿ ದೊಡ್ಡದಾಗಿದ್ದು, ಡ್ಯಾಂಗೆ ಮೀನುಗಾರಿಕೆ ಇಲಾಖೆ ಬಿಡುತ್ತಿರುವ ಮೀನು ಮರಿಗಳ ಸಂಖ್ಯೆ ಭಾರಿ ಕಡಿಮೆಯಾಗಿದೆ. ಅನೇಕ ಜಾತಿಯ ಮೀನುಗಳು ಭದ್ರಾ ವೈಲ್ಡ್‌ಲೈಫ್ ಭಾಗದಲ್ಲಿವೆ. ಮೀನುಗಾರರು ಆ ಪ್ರದೇಶಕ್ಕೆ ಹೋಗುವಂತಿಲ್ಲ. ಆದರು ಈಗಿರುವ ಮೀನುಗಾರಿಕಾ ಪ್ರದೇಶದಲ್ಲಿ ಸಿಗುವ ಮೀನುಗಳಿಂದ ಭಾರಿ ಆದಾಯವಿದೆ.
    ವೈಲ್ಡ್‌ಲೈಫ್ ವ್ಯಾಪ್ತಿಯಲ್ಲಿ ನಿಷೇಧ: ವಿವಿಧ ಜಾತಿಯ ಮೀನುಗಳು ಭದ್ರಾ ವೈಲ್ಡ್‌ಲೈಫ್ ವ್ಯಾಪ್ತಿಯಲ್ಲಿವೆ. ಆದರೆ ಮೀನುಗಾರರು ಈ ಪ್ರದೇಶದಲ್ಲಿ ಮೀನುಗಾರಿಕೆ ಮಾಡುವಂತಿಲ್ಲ. ಭದ್ರಾ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾದರೆ ಮೀನುಗಾರರು ಅರಣ್ಯ ಇಲಾಖೆ ವ್ಯಾಪ್ತಿಯ ನೀರಿನಲ್ಲಿ ಮೀನುಗಾರಿಕೆ ಮಾಡಬೇಕಾಗುತ್ತದೆ. ಮೀನುಗಾರಿಕೆ ಸಮಯದಲ್ಲಿ ಭದ್ರಾ ವೈಲ್ಡ್‌ಲೈಫ್ ಗೇಮ್ ಏರಿಯಾ ಪ್ರದೇಶದಲ್ಲಿ ಅನಾಹುತವಾದರೆ ಅರಣ್ಯ ಇಲಾಖೆ ಹೊಣೆ ಹೊರಬೇಕಾಗುತ್ತದೆ. ಇದರಿಂದ ಮೀನುಗಾರರಿಗೆ ಈ ಪ್ರದೇಶದಲ್ಲಿ ಪ್ರವೇಶ ನಿರ್ಬಂಧಿಸಲಾಗಿದೆ. ಆದರೂ ಕೆಲ ಮೀನುಗಾರರು ಕ್ಯಾರೇ ಎನ್ನದೆ ಆ ಪ್ರದೇಶ ಪ್ರವೇಶಿಸುತ್ತಾರೆ. ಇದರಿಂದಾಗಿ ಮೀನುಗಾರರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಿರುತ್ತವೆ. ಕೆಲ ಮೀನುಗಾರರು ಮಾತ್ರ ಇಲಾಖೆಯಿಂದ ಮೀನು ಶಿಕಾರಿಗೆ ಪರವಾನಗಿ ಪಡೆದಿದ್ದಾರೆ. ಮೀನು ಹಿಡಿಯುವಾಗ ಮೀನುಗಾರ ಸಾವನ್ನಪ್ಪಿದರೆ ಆತನ ಕುಟುಂಬಕ್ಕೆ ಪರಿಹಾರ ಅಥವಾ ಇನ್ಯಾವುದೇ ಸೌಲಭ್ಯ ನೀಡಲು ಮೀನುಗಾರಿಕೆ ಪರವಾನಗಿ ಕಡ್ಡಾಯವಾಗಿರುತ್ತದೆ. ಇದರಿಂದ ಸರ್ಕಾರದಿಂದ ಸಿಗುವ ಸವಲತ್ತುಗಳೂ ದೊರಕುವುದಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts