More

    ಮತ್ಸ್ಯಕ್ಷಾಮಕ್ಕೆ ತತ್ತರಿಸಿದ ಮೀನುಗಾರರು

    ಗಂಗೊಳ್ಳಿ: ಪ್ರತಿಕೂಲ ಹವಾಮಾನ, ಮತ್ಸ್ಯ ಕ್ಷಾಮ, ಲೈಟ್ ಫಿಶಿಂಗ್ ನಿಷೇಧ ಮತ್ತಿತರ ಕಾರಣಗಳಿಂದ ಮೀನುಗಾರಿಕಾ ಬೋಟುಗಳು ಕಡಲಿಗಿಳಿಯದೇ ತಿಂಗಳುಗಳೇ ಕಳೆದಿದ್ದು, ಮೀನುಗಾರರು ಸಂಕಷ್ಟದಲ್ಲಿದ್ದಾರೆ. ಈಗ ಮೀನುಗಾರಿಕೆಗೆ ತೆರಳಿದರೂ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಕಾರಣಕ್ಕೆ ಉಡುಪಿ ಜಿಲ್ಲೆಯ ಪ್ರಮುಖ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿ ಬಂದರಿನಲ್ಲಿ ಬೋಟುಗಳು ಮೀನುಗಾರಿಕೆಗೆ ತೆರಳದೇ ದಡದಲ್ಲೇ ಲಂಗರು ಹಾಕಿವೆ.
    ಮತ್ಸ್ಯಕ್ಷಾಮಕ್ಕೆ ಮೀನುಗಾರರೆಲ್ಲ ತತ್ತರಿಸಿ ಹೋಗಿದ್ದಾರೆ. ನಾಡದೋಣಿಗಳು, ಪರ್ಸೀನ್, ಬುಲ್‌ಟ್ರಾಲ್ ಹೀಗೆ ಎಲ್ಲ ಬೋಟು, ದೋಣಿಗಳ ಮೀನುಗಾರರಿಗೂ ಮೀನುಗಾರಿಕೆಗೆ ತೆರಳಿದರೆ ಕನಿಷ್ಠ ಖರ್ಚು ಆಗುವಷ್ಟು ಕೂಡ ಮೀನುಗಳು ಸಿಗದ ಕಾರಣ ಇಡೀ ಮೀನುಗಾರಿಕಾ ವಲಯಕ್ಕೆ ಗ್ರಹಣ ಬಡಿದಂತಿದೆ. ಕಳೆದ ಕೆಲವು ತಿಂಗಳುಗಳಿಂದ ಮೀನುಗಾರಿಕೆ ಇಲ್ಲದೆ ಮೀನುಗಾರರು ಚಿಂತಿತರಾಗಿದ್ದು, ದಿನ ಕಳೆಯುತ್ತಿದ್ದಂತೆ ಮೀನುಗಾರಿಕೆ ಇಳಿಮುಖವಾಗುತ್ತಿದೆ. ಮೀನುಗಾರಿಕೆ ಇಲ್ಲದೆ ಜೀವನ ಸಾಗಿಸುವುದೇ ಕಷ್ಟವಾಗುತ್ತಿರುವ ಈ ದಿನಗಳಲ್ಲಿ ವಿವಿಧ ಬ್ಯಾಂಕು ಮತ್ತು ಸಹಕಾರ ಸಂಘಗಳಿಂದ ಪಡೆದುಕೊಂಡ ಸಾಲವನ್ನು ಹಿಂತಿರುಗಿಸಲು ಮೀನುಗಾರರು ಹರಸಾಹಸ ಪಡುತ್ತಿದ್ದಾರೆ.

    ದಡದಲ್ಲೇ ಲಂಗರು: ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಈಗ ಮೀನುಗಾರಿಕೆಗೆ ಹೋಗುವ ಬೋಟು, ದೋಣಿಗಳಿಗಿಂತ, ದಡದಲ್ಲೇ ಲಂಗರು ಹಾಕಿರುವ ಬೋಟುಗಳ ಸಂಖ್ಯೆಯೇ ಹೆಚ್ಚಿದೆ. ಗಂಗೊಳ್ಳಿ ಮೀನುಗಾರಿಕಾ ಬಂದರು, ಮ್ಯಾಂಗನೀಸ್ ವಾರ್ಫ್, ಲೈಟ್‌ಹೌಸ್ ಬಳಿಯಿರುವ ನಾಡದೋಣಿಗಳ ತಾತ್ಕಾಲಿಕ ಬಂದರುಗಳಲ್ಲಿ ನೂರಾರು ಬೋಟ್, ದೋಣಿಗಳು ನಿಂತಿವೆ. ಗಂಗೊಳ್ಳಿ ಬಂದರಿನಲ್ಲಿ 40 ಪರ್ಸಿನ್ ಬೋಟುಗಳಿವೆ. 60 ಸಣ್ಣ ಟ್ರಾಲ್ ಬೋಟುಗಳು, 30 ರಿಂದ 40 ತ್ರಿಸೆವೆಂಟಿ, ನೂರಾರು ಗಿಲ್‌ನೆಟ್, ಮಾಟುಬಲೆ, ಬೀಡುಬಲೆ, ಪಾತಿ ದೋಣಿ, 200ಕ್ಕೂ ಮಿಕ್ಕಿ ನಾಡದೋಣಿಗಳಿವೆ.

    ಸಿಗುತ್ತಿಲ್ಲ ಬಂಗುಡೆ: ಕರಾವಳಿಯ ಮೀನುಗಾರರಿಗೆ ಬಂಗುಡೆ ಹಾಗೂ ಬೂತಾಯಿ (ಬೈಗೆ) ಎನ್ನುವುದು ಹೆಚ್ಚು ಆದಾಯ ತಂದು ಕೊಡುವ ಮೀನು. ಆದರೆ ಬೂತಾಯಿ ಸಿಗುವ ಪ್ರಮಾಣ ಕಡಿಮೆಯಾಗಿ ಮೂರು ವರ್ಷಗಳೇ ಕಳೆದಿವೆ. ಬೂತಾಯಿ ಸಿಗದ ನಷ್ಟವನ್ನು ಈವರೆಗೆ ಬಂಗುಡೆ ಮೀನು ಭರಿಸುತ್ತಿತ್ತು. ಆದರೆ ಈ ಬಾರಿ ಕಳೆದ ಆಗಸ್ಟ್‌ನಿಂದ ಇಲ್ಲಿಯವರೆಗೆ ಮೀನುಗಾರರಿಗೆ ಬಂಗುಡೆ ಮೀನು ಸಿಗುತ್ತಲೇ ಇಲ್ಲ. ಕೆಲವರಿಗೆ ಚಿಲ್ಲರೆ ಚಿಲ್ಲರೆ ಅಷ್ಟೇ ಸಿಗುತ್ತಿದೆ. ಕಳೆದ ಕೆಲವು ತಿಂಗಳಿನಿಂದ ಮತ್ಸ್ಯಕ್ಷಾಮ, ಪ್ರತಿಕೂಲ ಹವಾಮಾನ ಮೀನುಗಾರರನ್ನು ಕಾಡುತ್ತಿದ್ದು, ಮೀನುಗಾರಿಕೆ ಇಲ್ಲದೆ ಮೀನುಗಾರರು ದಿಕ್ಕು ತೋಚದಂತಾಗಿದ್ದರೆ, ಗಂಗೊಳ್ಳಿಯಲ್ಲಿ ಇನ್ನಿತರ ವ್ಯಾಪಾರ, ಉದ್ದಿಮೆಗಳಿಗೆ ಬಲವಾದ ಹೊಡೆತ ಬಿದ್ದಿದೆ. ಒಟ್ಟಿನಲ್ಲಿ ಮೀನುಗಾರಿಕೆ ಕಡಿಮೆಯಾಗಿರುವುದು ಮೀನುಗಾರರಿಗೆ ಹಾಗೂ ವ್ಯಾಪಾರಸ್ಥರಿಗೆ ಬಲವಾದ ಹೊಡೆತ ಬಿದ್ದಿದ್ದು, ಆರ್ಥಿಕ ಮುಗ್ಗಟ್ಟು ಕಾಡಲಾರಂಭಿಸಿದೆ.

    ಈ ಬಾರಿ ಬಂಗುಡೆ ಸಿಗದಿರುವುದು ಮೀನುಗಾರರಿಗೆ ದೊಡ್ಡ ಹೊಡೆತ. ಆಗಸ್ಟ್‌ನಿಂದ ಜನವರಿವರೆಗೆ ಬೋಟುಗಳಿಗೆ ಕನಿಷ್ಠವೆಂದರೂ 50 ರಿಂದ 60 ಲಕ್ಷ ರೂ. ಆದಾಯ ಬರುತ್ತಿತ್ತು. ಆದರೆ ಈ ಬಾರಿ 8-10 ಲಕ್ಷ ರೂ., 5-8 ಲಕ್ಷ ರೂ. ಅಷ್ಟೇ ಆಗಿದೆ. ಅಂದರೆ ಹಿಂದಿನ ವರ್ಷಗಳಲ್ಲಿ ಈವರೆಗೆ ಆಗುತ್ತಿದ್ದ ಮೀನುಗಾರಿಕೆ ಪೈಕಿ ಈ ಬಾರಿ ಕೇವಲ ಶೇ.5ರಷ್ಟು ಮಾತ್ರ ಆಗಿದೆ.
    -ರಮೇಶ್ ಕುಂದರ್, ಅಧ್ಯಕ್ಷರು, ಪರ್ಸಿನ್ ಮೀನುಗಾರರ ಸಹಕಾರ ಸಂಘ

    ಗಂಗೊಳ್ಳಿಯಲ್ಲಿ ಒಡಿಶಾ ಮೂಲದ ಕಾರ್ಮಿಕರು ಹೆಚ್ಚಾಗಿ ಬೋಟ್‌ಗಳಲ್ಲಿ ಕೆಲಸಕ್ಕೆ ಬರುತ್ತಾರೆ. ಈ ಬಾರಿ ಹೆಚ್ಚಿನ ದಿನಗಳಲ್ಲಿ ಮೀನುಗಾರಿಕೆಯಿಲ್ಲದೆ ಇರುವ ಕಾರಣ, ಕೆಲಸವೇ ಇಲ್ಲದೆ ಕಾರ್ಮಿಕರೆಲ್ಲ ಈಗಾಗಲೇ ಊರಿಗೆ ತೆರಳಿದ್ದು, ಈಗ ಆಗೊಮ್ಮೆ, ಈಗೊಮ್ಮೆ ಮೀನುಗಾರಿಕೆಗೆ ತೆರಳುತ್ತಿದ್ದರೂ, ಕೆಲಸಕ್ಕೆ ಜನವಿಲ್ಲದ ಸ್ಥಿತಿ. ಇನ್ನೂ ಮೀನುಗಾರಿಕೆಗೆ ಹೋದರೂ, ಖರ್ಚಾಗುವಷ್ಟು ಕೂಡ ಮೀನು ಸಿಗುತ್ತಿಲ್ಲ. ಹಾಗಾಗಿ ಹೆಚ್ಚಿನವರು ಮೀನುಗಾರಿಕೆಗೆ ಹೋಗುತ್ತಿಲ್ಲ. ಇದರಿಂದ ಎಲ್ಲರಿಗೂ ಕಷ್ಟವಾಗುತ್ತಿದೆ
    -ಅಶೋಕ್, ಮೀನುಗಾರರು

    ರಾಘವೇಂದ್ರ ಪೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts