More

    ಮೀನುಗಳಿಗೆ ಮಾರಣಾಂತಿಕ ವೈರಸ್

    ಮಂಗಳೂರು: ಕುಂದಾಪುರದ ಪಂಚ ಗಂಗಾವಳಿ ನದಿ ಪ್ರದೇಶ ತಲ್ಲೂರು ಭಾಗದಲ್ಲಿ ಪಂಜರ ಕೃಷಿಯಲ್ಲಿ ಸಾಕುತ್ತಿರುವ ಮೀನುಗಳು ನಿಗೂಢವಾಗಿ ಸಾವನ್ನಪ್ಪುತ್ತಿರುವುದಕ್ಕೆ ಮಾರಕ ‘ರೆಡ್ ಸೀ ಬ್ರೀಮ್ ಇರಿಡೋವೈರಸ್’ (ಆರ್‌ಎಸ್‌ಐವಿ) ಕಾರಣ ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.

    ಈ ಕುರಿತ ವರದಿಯನ್ನು ಕುಂದಾಪುರ ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕರಿಗೆ ಸಲ್ಲಿಸಲಾಗಿದೆ. ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಮೀನುಗಳ ಮಾರಣ ಹೋಮವಾಗುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
    ಆ ಭಾಗದಲ್ಲಿ 115 ಪಂಜರಗಳಲ್ಲಿ ಮೀನಿನ ಕೃಷಿ ಆರಂಭಿಸಲಾಗಿದೆ. ಮೀನುಗಳು ಸಾಯುತ್ತಿರುವುದರಿಂದ ಅಪಾರ ನಷ್ಟ ಉಂಟಾಗಿದೆ. ಇಲಾಖೆ ಮನವಿ ಮೇರೆಗೆ ಮೀನುಗಾರಿಕಾ ಕಾಲೇಜಿನ ಫಿಶರೀಸ್ ಮೈಕ್ರೋಬಯಾಲಜಿ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಕೆ.ಗಿರೀಶ್ ನೇತೃತ್ವದ ತಂಡ ಸ್ಥಳಕ್ಕೆ ಭೇಟಿ ನೀಡಿ, ಸತ್ತ ಮೀನುಗಳ ಮಾದರಿ ಸಂಗ್ರಹಿಸಿ, ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಆರ್‌ಎಸ್‌ಐವಿ ಪತ್ತೆಯಾಗಿದೆ.

    ಚಳಿಗಾಲದಲ್ಲಿ ಹೆಚ್ಚು: ಚಳಿಗಾಲದಲ್ಲಿ ಈ ವೈರಸ್ ಹರಡುವುದು ಹೆಚ್ಚು. ಪಂಜರದಲ್ಲಿ ಸಾಕುವ ಉದ್ದೇಶದಿಂದ ಮರಿಗಳನ್ನು ತರುವಾಗಲೇ ವೈರಸ್ ಕೂಡ ಒಟ್ಟಿಗೆ ಬಂದಿರುವ ಸಾಧ್ಯತೆ ಇದೆ. ನೀರಿನಲ್ಲಿ ಚಳಿ, ಪಂಜರದಲ್ಲಿ ನೀರಿನ ಆಳ ಕಡಿಮೆಯಾಗಿ ಒತ್ತಡ ಹೆಚ್ಚಾದಾಗ, ಆಮ್ಲಜನಕ ಪ್ರಮಾಣ ಕಡಿಮೆಯಾದಾಗ ವೈರಸ್ ಹೆಚ್ಚು ಕ್ರಿಯಾಶೀಲವಾಗುತ್ತದೆ. ಇದರಿಂದ ಮೀನುಗಳು ಸಾಯುವ ಸಾಧ್ಯತೆಯಿದೆ. ಈ ವೈರಸ್‌ಗೆ ಯಾವುದೇ ಔಷಧ ಇಲ್ಲ. ಸರಿಯಾದ ರೀತಿಯಲ್ಲಿ ಮೀನು ಸಾಕುವುದರಿಂದ ವೈರಸ್ ಬರದಂತೆ ತಡೆಯಬಹುದು. ಸತ್ತ ಮೀನುಗಳನ್ನು ಮತ್ತೆ ನೀರಿಗೆ ಎಸೆಯದೆ, ಎಲ್ಲಾದರೂ ದೂರ ಮಣ್ಣಿನಲ್ಲಿ ಹೂಳಬೇಕು. ಪಂಜರಗಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಮೀನಿನ ಮರಿಗಳನ್ನು ಸಾಕಬೇಕು ಎನ್ನುತ್ತಾರೆ ವಿಜ್ಞಾನಿಗಳು.

    ‘ರೆಡ್ ಸೀ ಬ್ರೀಮ್ ಇರಿಡೋವೈರಸ್’ ಕೋವಿಡ್-19 ಮಾದರಿಯಲ್ಲಿ ಮೀನುಗಳಲ್ಲಿ ಕಂಡು ಬರುವ ಮಾರಣಾಂತಿಕ ವೈರಸ್. ಕಳೆದ ಎರಡು ವರ್ಷಗಳಲ್ಲೂ ಅದೇ ಪ್ರದೇಶದಲ್ಲಿ ಈ ವೈರಸ್ ಪತ್ತೆಯಾಗಿತ್ತು. ಮೀನುಗಳಿಗೆ ಹರಡದಂತೆ ಎಚ್ಚರ ವಹಿಸುವುದೇ ಇದನ್ನು ತಡೆಯುವ ವಿಧಾನ.
    – ಡಾ.ಎಸ್.ಕೆ.ಗಿರೀಶ್, ಸಹಾಯಕ ಪ್ರಾಧ್ಯಾಪಕ, ಮಂಗಳೂರು ಮೀನುಗಾರಿಕಾ ಕಾಲೇಜು

    ಮುಂದಿನ ದಿನಗಳಲ್ಲಿ ಪಂಜರ ಕೃಷಿಗೆ ಅನುಮತಿ ನೀಡುವಾಗ ಮೀನುಗಾರಿಕಾ ಕಾಲೇಜನ್ನು ಸಂಪರ್ಕಿಸಿದರೆ, ನಮ್ಮ ತಜ್ಞರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದೆ. ಮೀನಿನ ಮರಿಗಳು ಸಾಕಲು ಯೋಗ್ಯವೇ ಎಂದು ನೋಡಿ ಅನುಮತಿ ನೀಡುತ್ತೇವೆ. ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆಯನ್ನೂ ಮಾಡುತ್ತೇವೆ ಎಂದು ವರದಿಯ ಜತೆಗೆ ಸರ್ಕಾರಕ್ಕೆ ತಿಳಿಸಿದ್ದೇವೆ.
    – ಡಾ. ಸೆಂಥಿಲ್ ವೇಲ್ ಎ, ಡೀನ್, ಮಂಗಳೂರು ಮೀನುಗಾರಿಕಾ ಕಾಲೇಜು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts