More

    ಸ್ಮಶಾನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ

    ಹುಬ್ಬಳ್ಳಿ: ನವಲಗುಂದ ವಿಧಾನಸಭಾ ಕ್ಷೇತ್ರದ 72 ಹಳ್ಳಿಗಳ ಪೈಕಿ 20 ಹಳ್ಳಿಗಳಲ್ಲಿ ಸ್ಮಶಾನವಿಲ್ಲ. ಇದರಿಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆ ನಿಟ್ಟಿನಲ್ಲಿ ಸ್ಮಶಾನ ಸಮಸ್ಯೆ ಪರಿಹಾರಕ್ಕೆ ಮೊದಲ ಆದ್ಯತೆ ನೀಡಲಾಗಿದೆ ಎಂದು ನವಲಗುಂದ ಶಾಸಕ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ಸಂಸ್ಥೆ ಅಧ್ಯಕ್ಷ ಶಂಕರ ಪಾಟೀಲ ಮುನೇನಕೊಪ್ಪ ಭರವಸೆ ನೀಡಿದರು.

    ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಆಯೋಜಿಸಿದ್ದ ಕಂದಾಯ ಹಾಗೂ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕ್ಷೇತ್ರದ ಹಳ್ಳಿಗಳ ಸ್ಮಶಾನ ಸಮಸ್ಯೆ ಪರಿಹಾರಕ್ಕಾಗಿ ಕಂದಾಯ ಇಲಾಖೆ 50 ಲಕ್ಷ ರೂ. ಅನುದಾನ ಒದಗಿಸಿದೆ. ಮೊದಲ ಹಂತದಲ್ಲಿ ಕೋಳಿವಾಡ ಗ್ರಾಮದಲ್ಲಿ 25.72 ಲಕ್ಷ ರೂ. ಕೊಟ್ಟು 2.36 ಎಕರೆ ಭೂಮಿ ಸ್ಮಶಾನಕ್ಕಾಗಿ ಖರೀದಿಸಲಾಗಿದ್ದು, ಉಳಿದೆಡೆ ಹಂತ ಹಂತವಾಗಿ ಜಮೀನು ಖರೀದಿಸಲಾಗುವುದು ಎಂದರು.

    ಕೋಳಿವಾಡ ಗ್ರಾಮಕ್ಕೆ ವಿಶೇಷ 1 ಕೋಟಿ ರೂ. ಅನುದಾನ ನೀಡಲಾಗಿದೆ. ಕುಮಾರವ್ಯಾಸ ಭವನ, ಕುಡಿಯುವ ನೀರಿಗಾಗಿ ಕೆರೆ ನಿರ್ವಣ, ನಿರಂತರ ಜ್ಯೋತಿ, ರಸ್ತೆಗಳ ಅಭಿವೃದ್ಧಿಗೆ ಬಳಸಲಾಗಿದೆ. ಪದವಿಪೂರ್ವ ಕಾಲೇಜು ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದರು.

    ಕೋಳಿವಾಡ ಗ್ರಾಮದ ಮುಖ್ಯರಸ್ತೆ ನಿರ್ವಣಕ್ಕೆ 5 ಕೋಟಿ ರೂ. ಮಂಜೂರು ಮಾಡಲಾಗುವುದು. ಈ ಭಾಗದಲ್ಲಿ 60, 70 ಟನ್ ಎಂ ಸ್ಯಾಂಡ್ ತುಂಬಿಕೊಂಡು ಬೃಹತ್ ಲಾರಿಗಳು ಓಡಾಡುವುದರಿಂದ ರಸ್ತೆ ಬೇಗ ಹಾಳಾಗುತ್ತಿವೆ. ಈ ಬಗ್ಗೆ ತಹಸೀಲ್ದಾರ್ ಹಾಗೂ ಪೊಲೀಸ್ ಇಲಾಖೆ ಗಮನಹರಿಸಬೇಕು. ಬೃಹತ್ ಟ್ರಕ್ ಓಡಾಡುವುದನ್ನು ಬಂದ್ ಮಾಡಿಸಬೇಕು ಎಂದು ಸೂಚಿಸಿದರು.

    ಕರೊನಾ ಎರಡನೇ ಅಲೆ ಪ್ರಾರಂಭವಾಗಬಹುದು. ಹಳ್ಳಿಗಳ ಜನರು ಮಾಸ್ಕ್ ಮತ್ತು ಪರಸ್ಪರ ಅಂತರದ ಬಗ್ಗೆ ಇನ್ನೂ ಹೆಚ್ಚಿನ ಕಾಳಜಿ ವಹಿಸಬೇಕು. ಹು-ಧಾ ಒನ್ ಮಾದರಿಯಲ್ಲಿ ಗ್ರಾಮ ಒನ್ ಕೇಂದ್ರ ಆರಂಭಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೇ ಎಲ್ಲ ಸಮಸ್ಯೆಗೆ ಪರಿಹಾರ ಸಿಗಲಿದೆ. ನಗರಕ್ಕೆ ಅಲೆದಾಡುವುದು ತಪ್ಪುತ್ತದೆ ಎಂದರು.

    ‘ನಾನು ಕೋಳಿವಾಡದ ಅಳಿಯ’: ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ನಾನು ಕೋಳಿವಾಡ ಗ್ರಾಮದ ಅಳಿಯ. ಹಿರಿಯ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಕೋಳಿವಾಡ ಗ್ರಾಮದವರು. ಗ್ರಾಮದ ಬಗ್ಗೆ ವಿಶೇಷ ಅಭಿಮಾನವಿದೆ. ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕರೊನಾ ಕರ್ತವ್ಯ ನಂತರ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಗ್ರಾಮಕ್ಕೆ ಬರಲು ಆಗಿರಲಿಲ್ಲ. ಸ್ಮಶಾನದ ಸಮಸ್ಯೆ ಬಗೆಹರಿಸಿಕೊಂಡೇ ಬರಬೇಕು ಎಂದುಕೊಂಡಿದ್ದೆ. ಅದು ಈಗ ನೆರವೇರಿದೆ. ಗ್ರಾಮದಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ವಣಕ್ಕೆ ಸಿದ್ಧತೆ ನಡೆದಿದೆ ಎಂದರು.

    26 ಗ್ರಾಮಸ್ಥರಿಗೆ ಹಕ್ಕುಪತ್ರ ವಿತರಿಸಲಾಯಿತು. ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ಅಂಗವಿಕಲ ವೇತನದಡಿ ಆಯ್ಕೆಯಾದ 19 ಫಲಾನುಭವಿಗಳಿಗೆ ಪಿಂಚಣಿ ಪತ್ರ ವಿತರಿಸಲಾಯಿತು. ಕೃಷಿ ಇಲಾಖೆ ವತಿಯಿಂದ ಸ್ವಯಂ ಚಾಲಿತ ಕೂರಿಗೆ, ರೋಟವೇಟರ್, ಟ್ರ್ಯಾಕ್ಟರ್ ಟ್ರೇಲರ್ ವಿತರಿಸಲಾಯಿತು.

    ಜಿಲ್ಲಾ ಪಂಚಾಯಿತಿ ಸದಸ್ಯೆ ಚೈತ್ರಾ ಶಿರೂರ, ಉಪ ವಿಭಾಗಾಧಿಕಾರಿ ಗೋಪಾಲಕೃಷ್ಣ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪುರುಷೋತ್ತಮ, ತಾಲೂಕು ಪಂಚಾಯಿತಿ ಸದಸ್ಯೆ ಧ್ಯಾಮಕ್ಕ ಸತ್ಯಮ್ಮನವರ, ತಹಸೀಲ್ದಾರ್ ಪ್ರಕಾಶ ನಾಶಿ, ತಾಪಂ ಇಒ ಗಂಗಾಧರ ಕಂದಕೋರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಂಗಾಧರ ಗಾಣಿಗೇರ, ಪಿಡಿಒ ಎಫ್.ಡಿ. ತೋಟದ, ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts