More

    ಈ ಬಾರಿ ಮಂಕಡಿಂಗ್ ಮಾಡದ ಬಗ್ಗೆ ಅಶ್ವಿನ್ ಹೇಳಿದ್ದೇನು ಗೊತ್ತೇ?

    ದುಬೈ: ಕಳೆದ ವರ್ಷ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ಮೂಲಕ ಔಟ್ ಮಾಡಿದ್ದ ಆರ್. ಅಶ್ವಿನ್ ಸಾಕಷ್ಟು ವಿವಾದಕ್ಕೆ ಗ್ರಾಸವಾಗಿದ್ದರು. ಈ ಬಾರಿ ಅವರು ಪಂಜಾಬ್‌ನಿಂದ ಡೆಲ್ಲಿ ತಂಡಕ್ಕೆ ವರ್ಗಾವಣೆಗೊಂಡಿದ್ದು, ಕೋಚ್ ರಿಕಿ ಪಾಂಟಿಂಗ್ ಸಲಹೆಯಂತೆ ಮಂಕಡಿಂಗ್ ಮಾಡುವ ಮೊದಲ ಅವಕಾಶದಲ್ಲಿ ನಾನ್-ಸ್ಟ್ರೈಕರ್ ಬ್ಯಾಟ್ಸ್‌ಮನ್ ಆರನ್ ಫಿಂಚ್‌ಗೆ ಎಚ್ಚರಿಕೆಯನ್ನಷ್ಟೇ ನೀಡಿದ್ದಾರೆ. ಆದರೆ ಇದು 2020ರಲ್ಲಿ ನಾನು ನೀಡುತ್ತಿರುವ ಮೊದಲ ಮತ್ತು ಕೊನೆಯ ಎಚ್ಚರಿಕೆಯಾಗಿದೆ. ಟೂರ್ನಿಯ ಮುಂದಿನ ಪಂದ್ಯಗಳಲ್ಲಿ ಮಂಕಡಿಂಗ್ ಮಾಡಿದರೆ ನನ್ನನ್ನು ದೂರಬೇಡಿ ಎಂದು ಪಂದ್ಯದ ಬಳಿಕ ಟ್ವೀಟ್ ಮಾಡಿದ್ದಾರೆ.

    ಕಳೆದ ವರ್ಷ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್‌ರನ್ನು ಮಂಕಡಿಂಗ್ ಮಾಡಿದ ಬಳಿಕ ಅಶ್ವಿನ್ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ಅವರು ಕ್ರೀಡಾಸ್ಫೂರ್ತಿ ತೋರಲಿಲ್ಲ ಎಂದು ಕ್ರಿಕೆಟ್ ವಲಯದಲ್ಲಿ ಟೀಕೆಗಳು ಕೇಳಿಬಂದಿದ್ದವು. ಈ ವರ್ಷವೂ ಟೂರ್ನಿಗೆ ಮುನ್ನ ಮಂಕಡಿಂಗ್ ವಿಷಯ ಚರ್ಚೆಗೆ ಬಂದಾಗ ಅಶ್ವಿನ್, ಅದನ್ನು ಸಮರ್ಥಿಸಿಕೊಂಡಿದ್ದರು. ಆದರೆ ತಂಡದ ಕೋಚ್ ರಿಕಿ ಪಾಂಟಿಂಗ್ ಮಾತ್ರ, ನಾನು ಅದಕ್ಕೆ ಅವಕಾಶ ನೀಡುವುದಿಲ್ಲ ಎಂದಿದ್ದರು. ಬಳಿಕ ಯುಎಇಯಲ್ಲಿ ಅಶ್ವಿನ್-ಪಾಂಟಿಂಗ್ ನಡುವೆ ಈ ಬಗ್ಗೆ ಚರ್ಚೆಯೂ ನಡೆದಿತ್ತು. ಇದರಿಂದಾಗಿ ಅಶ್ವಿನ್, ಸೋಮವಾರ ಫಿಂಚ್‌ಗೆ ಎಚ್ಚರಿಕೆಯನ್ನಷ್ಟೇ ನೀಡಿದಾಗ ಡಗೌಟ್‌ನಲ್ಲಿದ್ದ ಪಾಂಟಿಂಗ್ ಮುಖದಲ್ಲಿ ದೊಡ್ಡ ನಗು ಮೂಡಿತ್ತು.

    ಆರ್‌ಸಿಬಿ ಇನಿಂಗ್ಸ್‌ನ 3ನೇ ಓವರ್‌ನಲ್ಲಿ ಚೆಂಡೆಸೆಯುವುದಕ್ಕೆ ಮೊದಲೇ ಫಿಂಚ್ ಕ್ರೀಸ್‌ನಿಂದ ಮುಂದೆ ಹೋದಾಗ ಅಶ್ವಿನ್ ಅದನ್ನು ಗಮನಿಸಿ ಬೌಲಿಂಗ್ ನಿಲ್ಲಿಸಿದರೂ, ಮಂಕಡಿಂಗ್ ಮಾಡದೆ ಎಚ್ಚರಿಕೆಯನ್ನಷ್ಟೇ ನೀಡಿದರು. ಆದರೆ ಪಂದ್ಯದ ಬಳಿಕ ಮಂಕಡಿಂಗ್ ಸಮರ್ಥನೆ ಮುಂದುವರಿಸಿರುವ ಅಶ್ವಿನ್, ನಾನ್-ಸ್ಟ್ರೈಕರ್ ಬ್ಯಾಟ್ಸ್‌ಮನ್‌ಗಳು ಮುಂದಿನ ದಿನಗಳಲ್ಲಿ ಬೌಲರ್ ಚೆಂಡೆಸುವುದಕ್ಕೆ ಮುನ್ನ ಕ್ರೀಸ್ ಬಿಟ್ಟರೆ ಅಪಾಯ ಕಾದಿದೆ ಎಂಬ ಸಂದೇಶ ರವಾನಿಸಿದ್ದಾರೆ.

    ಭಾರತದ ಮಾಜಿ ಕ್ರಿಕೆಟಿಗ ವಿನೂ ಮಂಕಡ್ ಅವರಿಂದಲೇ ಈ ರೀತಿಯ ಔಟ್‌ಗಳಿಗೆ ಮಂಕಡಿಂಗ್ ಎಂದು ಹೆಸರು ಬಂದಿದೆ. ಎಡಗೈ ಸ್ಪಿನ್ನರ್ ಆಗಿದ್ದ ವಿನೂ ಮಂಕಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿ ಔಟ್ ಮಾಡಿದ ಮೊದಲಿಗರಾಗಿದ್ದಾರೆ. 1947ರ ಆಸ್ಟ್ರೇಲಿಯಾ ಪ್ರವಾಸದ 2ನೇ ಟೆಸ್ಟ್‌ನಲ್ಲಿ ಅವರು, ಬೌಲಿಂಗ್‌ಗೆ ಮೊದಲೇ ಕ್ರೀಸ್ ಬಿಟ್ಟಿದ್ದ ಬಿಲ್ ಬ್ರೌನ್ ಅವರನ್ನು ನಾನ್-ಸ್ಟ್ರೈಕರ್‌ನಲ್ಲಿ ಔಟ್ ಮಾಡಿದ್ದರು. ಇದು ಕ್ರಿಕೆಟ್ ನಿಯಮಬದ್ಧವಾದ ರೀತಿಯ ಔಟ್ ಆಗಿದ್ದರೂ, ಆಗಲೇ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಜತೆಗೆ ‘ಮಂಕಡಿಂಗ್’ ಎಂದು ಅವರದೇ ಹೆಸರು ಪಡೆದುಕೊಂಡಿತ್ತು. ವಿನೂ ಮಂಕಡ್ ಅವರಿಗೂ ಆಗ ಕ್ರೀಡಾಸ್ಫೂರ್ತಿಯ ಪ್ರಶ್ನೆ ಎದುರಾಗಿತ್ತು. ಆದರೆ ಆಗಿನ ಆಸೀಸ್ ತಂಡದಲ್ಲಿದ್ದ ದಿಗ್ಗಜ ಡಾನ್ ಬ್ರಾಡ್ಮನ್ ತಮ್ಮ ಜೀವನಚರಿತ್ರೆಯಲ್ಲಿ ವಿನೂ ಮಂಕಡ್ ಅವರ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ನಿಯಮದಲ್ಲೇ ಅವಕಾಶ ಇರುವಾಗ ಕ್ರೀಡಾಸ್ಫೂರ್ತಿಯ ಪ್ರಶ್ನೆ ಯಾಕೆ? ನಾನ್-ಸ್ಟ್ರೈಕರ್‌ಗೆ ಯಾಕೆ ನ್ಯಾಯೋಚಿತವಲ್ಲದ ಲಾಭ ನೀಡಬೇಕು ಎಂದು ಪ್ರಶ್ನಿಸಿದ್ದ ಬ್ರಾಡ್ಮನ್, ಮಂಕಡ್ ಪರ ನಿಂತಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts