More

    ಅಗ್ನಿಶಾಮಕ ಸಿಬ್ಬಂದಿಗೇ ಇಲ್ಲ ರಕ್ಷಣೆ: ಕಾಂಗ್ರೆಸ್, ಜೆಡಿಎಸ್ ಆರೋಪ

    ಶಿವಮೊಗ್ಗ: ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಗತ್ಯ ಸಲಕರಣೆ ಪೂರೈಕೆ ಮಾಡುವ ಜತೆಗೆ ಅವರ ಸುರಕ್ಷತೆಗೆ ಒತ್ತು ನೀಡುವಂತೆ ಆಗ್ರಹಿಸಿ ಸೋಮವಾರ ಮಹಾನಗರ ಪಾಲಿಕೆ ಪ್ರತಿಪಕ್ಷದ ನಾಯಕಿ ರೇಖಾ ರಂಗನಾಥ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
    ಅಗ್ನಿ ಅವಘಡ ಸಂದರ್ಭದಲ್ಲಿ ಬೆಂಕಿ ನಂದಿಸಲು ಸಿಬ್ಬಂದಿಗೆ ರಕ್ಷಾ ಕವಚಗಳಿಲ್ಲ. ಮಾಸ್ಕ್‌ಗಳಲ್ಲಿ ಆಕ್ಸಿಜನ್ ಪೂರೈಕೆ ವ್ಯವಸ್ಥಿತವಾಗಿಲ್ಲ. ಟೋಪಿಯಲ್ಲಿ ಲೈಟ್ ವ್ಯವಸ್ಥೆ ಇಲ್ಲ. ಬೆಂಕಿ ಕೆನ್ನಾಲಿಗೆಯಿಂದ ರಕ್ಷಿಸುವ ಜಾಕೆಟ್ ಕೂಡ ಇಲ್ಲದೆ ಕೆಲಸ ಮಾಡುವಂತಾಗಿದೆ ಎಂದು ದೂರಿದರು.
    ಶಿವಮೊಗ್ಗದಲ್ಲಿ ಇತ್ತೀಚಿನ ದಿನಗಳಲ್ಲಿ ಮಲ್ಟಿ ಸ್ಪೆಷಾಲಿಟೆ ಆಸ್ಪತ್ರೆಗಳು, ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಬೃಹತ್ ವಾಣಿಜ್ಯ ಕಟ್ಟಡಗಳು, ಶಾಪಿಂಗ್ ಮಾಲ್‌ಗಳಾಗುತ್ತಿವೆ. ಅಗ್ನಿ ಅವಘಡ ಸಂಭವಿಸಿದರೆ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷತಾ ಸಲಕರಣಗಳಿಲ್ಲದೆ ಬೆಂಕಿ ನಂದಿಸಲು ಪರದಾಡುವಂತಾಗಲಿದೆ. ಹಲವು ಬಾರಿ ಸಾಕಷ್ಟು ತೊಂದರೆ ಎದುರಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಜೀವಭಯದಲ್ಲೇ ಕೆಲಸ ಮಾಡಬೇಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಬೇಸಿಗೆ ಶುರುವಾಗಲಿದ್ದು ನಗರದಲ್ಲಿ ಅಗ್ನಿ ಅವಘಡಗಳು ಹೆಚ್ಚಾಗುವ ಸಂಭವವಿದೆ. ಸಂಕಷ್ಟ ಬಂದಾಗ ಪರಿಹಾರ ಹುಡುಕುವ ಬದಲು ಮುಂಜಾಗ್ರತಾ ಕ್ರಮವಾಗಿ ಸುರಕ್ಷಿತ ಸಾಧನಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕಿದೆ. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯವಿದೆ ಎಂದು ಸಲಹೆ ನೀಡಿದರು.
    ಜಿಪಂ ಕಚೇರಿ ಎದುರು ಉದ್ಯಮಿ ಶರತ್ ಭೂಪಾಳಂ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಅಗ್ನಿ ಅವಘಡ ಸಂಭವಿಸಿದ ವೇಳೆ ರಕ್ಷಣಾ ಕಾರ್ಯಾಚರಣೆ ಸಂದರ್ಭದಲ್ಲಿ ಸಿಬ್ಬಂದಿ ಹತ್ತು ಹಲವು ಸಮಸ್ಯೆಗಳನ್ನು ಎದುರಿಸುವಂತಾಯಿತು. ಸುರಕ್ಷಿತಾ ಸಾಧನಗಳಿಲ್ಲದ ಕಾರಣ ಶರತ್ ಭೂಪಾಳಂ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇದು ದುರ್ದೈವದ ಸಂಗತಿ. ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಎಂದು ಒತ್ತಾಯಿಸಿ ಎಡಿಸಿ ಡಾ. ನಾಗೇಂದ್ರ ಎಫ್. ಹೊನ್ನಳ್ಳಿ ಅವರಿಗೆ ಮನವಿ ಸಲ್ಲಿಸಿದರು.
    ಪಾಲಿಕೆ ಸದಸ್ಯರಾದ ಎಚ್.ಸಿ.ಯೋಗೇಶ್, ನಾಗರಾಜ್ ಕಂಕರಿ, ಮಂಜುಳಾ ಶಿವಣ್ಣ, ಮಾಜಿ ಉಪ ಮೇಯರ್ ಎಚ್.ಪಾಲಾಕ್ಷಿ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಗಿರೀಶ್, ಪ್ರಮುಖರಾದ ಭಾಸ್ಕರ್, ಪ್ರಶಾಂತ್ ರಾಯ್, ಮೋಹನ್ ಸೋಮಿನಕೊಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts