More

    ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ ಕಮಿಷನ್ ದಂಧೆ: ಬೊಮ್ಮಾಯಿ ಪರ ರೋಡ್ ಶೋನಲ್ಲಿ ನಡ್ಡಾ ವಾಗ್ದಾಳಿ


    ಬ್ಯಾಡಗಿ: ಹಾವೇರಿ-ಗದಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪರವಾಗಿ ಪಟ್ಟಣದಲ್ಲಿ ಮಂಗಳವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭರ್ಜರಿ ರೋಡ್ ಶೋ ನಡೆಸಿ, ಮತಯಾಚನೆ ಮಾಡಿದರು.
    ರೋಡ್ ಶೋ ವೇಳೆ ಪಾಲ್ಗೊಂಡಿದ್ದ ಸಾವಿರಾರು ಜನರತ್ತ ಕೈ ಬೀಸಿದ ಅವರು ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಕೋರಿದರು. ಪಟ್ಟಣದ ಚಂದ್ರಗುತ್ತೆಮ್ಮ ದ್ವಾರಬಾಗಿಲಿನಿಂದ ಆರಂಭಗೊಂಡ ರೋಡ್ ಶೋ ಮೆಣಸಿನಕಾಯಿ ಮಾರುಕಟ್ಟೆ ಏರಿಯಾ, ಬಸ್ ನಿಲ್ದಾಣ ವೃತ್ತ, ಸುಭಾಸ ವೃತ್ತ ಸೇರಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
    ಜೆ.ಪಿ. ನಡ್ಡಾ ಮಾತನಾಡಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಕಮಿಷನ್ ದಂಧೆ. ಇಂಡಿಯಾ ಕೂಟವನ್ನು ಭ್ರಷ್ಟಾಚಾರ ನಡೆಸಿ ಹಣ ಲೂಟಿ ಮಾಡುವ ಉದ್ದೇಶದಿಂದ ಕಟ್ಟಲಾಗಿದೆ. ಇಂಥವರಿಗೆ ನೀವು ಓಟು ನೀಡುತ್ತೀರಾ ಎಂದು ಪ್ರಶ್ನಿಸುತ್ತಲೇ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
    ಇಂಡಿಯಾ ಕೂಟದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿ ಯಾರು ಎಂದು ಮೊದಲು ಹೇಳಲಿ ನೋಡೋಣ. ಅದಕ್ಕೆ ಪ್ರಧಾನಮಂತ್ರಿ ಅಭ್ಯರ್ಥಿಯೆ ಇಲ್ಲ. ಐದು ವರ್ಷದಲ್ಲಿ ಐದು ಜನ ಪ್ರಧಾನಮಂತ್ರಿಯಾಗಿ ಲೂಟಿ ಮಾಡಿಕೊಂಡು ಹೋಗುವ ಪ್ಲಾೃನ್ ಮಾಡಿದ್ದಾರೆ. ಇಂಥವರಿಗೆ ಮತ ನೀಡಬೇಡಿ. ಬದಲಾಗಿ ದೇಶವನ್ನು ಸುಭದ್ರಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು 3ನೇ ಬಾರಿಗೆ ಪ್ರಧಾನಿ ಮಾಡಲು ಬಿಜೆಪಿ ಮತ ನೀಡಿ ಎಂದರು.
    ಇಂಡಿಯಾ ಕೂಟದ ಸದಸ್ಯರಾದ ರಾಹುಲ್ ಗಾಂಧಿ, ಸೋನಿಯಾಗಾಂಧಿ, ಅಖಿಲೇಶ ಯಾಧವ, ಚಿದಂಬರಂ, ಲಾಲೂ ಪ್ರಸಾದ ಯಾಧವ, ಡಿ.ಕೆ. ಶಿವಕುಮಾರ ಎಲ್ಲರೂ ಜಾಮೀನು ಮೇಲೆ ಹೊರಗಡೆ ಇದ್ದಾರೆ. ಅರವಿಂದ ಕೇಜ್ರಿವಾಲ್, ಮನಿಶ ಸಿಸೋಡಿಯಾ, ಪಶ್ಚಿಮ ಬಂಗಾಳ, ತಮಿಳನಾಡಿನ ಮಂತ್ರಿಗಳು ಜೈಲಿನಲ್ಲಿದ್ದಾರೆ. ಇಂಥವರಿಂದ ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ ಎಂದು ಕಿಡಿಕಾರಿದರು.
    ಅಗಸ್ಟ್ ವೆಸ್ಟಲ್ಯಾಂಡ್‌ನಂತಹ ಕಲ್ಲಿದ್ದಲು ಹಾಗೂ ಮೇವು ಹಗರಣ ಮಾಡಿದವರು ಇಂದು ಇಂಡಿಯಾ ಕೂಟದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ ಮಾತು ಈಡೇರಿಸಿಲ್ಲ ಎಂದು ಆರೋಪಿಸಿದರು.
    ನರೇಂದ್ರ ಮೋದಿಯವರು ನಿಮ್ಮ ಗ್ರಾಮದ ಮಹಿಳೆಯರಿಗೆ ಉಜ್ವಲ ಯೋಜನೆಯಡಿ ಗ್ಯಾಸ್, ಮನೆ ಮನೆಗೆ ನಲ್ಲಿ ಹಾಗೂ ಶೌಚಗೃಹ, ಎಲ್ಲ ಕುಟುಂಬಕ್ಕೂ 5 ಕೆ.ಜಿ. ಅಕ್ಕಿ, ಕರೋನಾ ಸಮಯದಲ್ಲಿ ಉಚಿತವಾಗಿ ಔಷಧ, ಆಶ್ರಯ ಯೋಜನೆ ಮನೆ ಸೇರಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ.
    3ನೇ ಬಾರಿಗೆ ಅವರು ಪ್ರಧಾನಿಯಾದ ಕೂಡಲೇ ಅನೇಕ ಯೋಜನೆಗಳನ್ನು ಘೋಷಣೆ ಮಾಡಲಿದ್ದಾರೆ. ಭಾರತ ದೇಶದ ಆರ್ಥಿಕತೆಯಲ್ಲಿ ಜಗತ್ತಿಗೆ 3ನೇ ಸ್ಥಾನಕ್ಕೆ ಏರಲಿದೆ. ಇಲ್ಲಿ ಸೇರಿರುವ ಜನರನ್ನು ನೋಡಿದರೆ ನಿಮ್ಮ ಉತ್ಸಾಹ, ಕೂತುಹಲ ಗಮನಿಸಿದರೆ ಈ ಬಾರಿ ಬೊಮ್ಮಾಯಿ ಅವರನ್ನು ಗೆಲ್ಲಿಸಿ ದೆಹಲಿಗೆ ಕಳುಹಿಸುತ್ತೀರಿ ಎಂಬ ವಿಶ್ವಾಸ ಕಾಣುತ್ತಿದೆ. ನೀವು ಬೊಮ್ಮಾಯಿ ಅವರನ್ನು ಗೆಲ್ಲಿಸಿ ಕಳುಹಿಸಿದರೆ ನಾವು ಅವರನ್ನು ಮಂತ್ರಿಯನ್ನಾಗಿ ಮಾಡಿ ನಿಮ್ಮ ಬಳಿ ಕಳುಹಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು.
    ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮಾತನಾಡಿ, ಬ್ಯಾಡಗಿ ಕ್ಷೇತ್ರದಲ್ಲಿ ವಿರುಪಾಕ್ಷಪ್ಪ ಬಳ್ಳಾರಿ ಸಾವಿರಾರು ಕೋಟಿ ರೂ. ಅನುದಾನ ತಂದು ರಸ್ತೆ, ಕೆರೆ ಅಭಿವೃದ್ಧಿ ಪಡಿಸಿದ್ದಾರೆ. ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಸಹ ಸ್ವಾತಂತ್ರೃದ ನಂತರ ಅಭಿವೃದ್ಧಿಯಾಗಿದ್ದು ಬಿಜೆಪಿ ಕಾಲದಲ್ಲಿಯೆ. ಇದನ್ನು ಗಮನದಲ್ಲಿಟ್ಟುಕೊಂಡು ಮತದಾರರು ಈ ಬಾರಿ ಬಿಜೆಪಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.
    ಗಾಹುಲ್ ಗಾಂಧಿ ಹೊಸ ಕಾನೂನು ಜಾರಿಗೆ ತರುತ್ತಿದ್ದಾರೆ. ನಿಮ್ಮ ಆಸ್ತಿ ಮಕ್ಕಳಿಗೆ ಕೊಡಬೇಕು ಎಂದರೆ ಸರ್ಕಾರಕ್ಕೆ ಶೇ. 55ರಷ್ಟು ಬಿಟ್ಟುಕೊಡಬೇಕು. ಮಕ್ಕಳಿಗೆ ಶೇ. 45ರಷ್ಟು ಮಾತ್ರ ಕೊಡಬೇಕು. ಇಂಥ ಕಾನೂನು ನಿಮಗೆ ಬೇಕಾ ಎಂದು ಪ್ರಶ್ನಿಸಿದರು.
    ಉಚಿತ ಅಕ್ಕಿ ನೀಡುತ್ತಿರುವುದು ಮೋದಿಯವರು. ಆದರೆ, ಹೆಸರು ಕಾಂಗ್ರೆಸ್‌ನವರು ಹಾಕಿಕೊಂಡಿದ್ದಾರೆ. ನಮಗೆ ಅನ್ನ, ನೀರು, ಮನೆ, ಕೋವಿಡ್‌ನಲ್ಲಿ ಔಷಧ ಕೊಟ್ಟವರು ಮೋದಿಯವರು. ಅವರನ್ನು ನಾವು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.
    ವಿರೋಧ ಪಕ್ಷದ ನಾಯಕ ಆರ್. ಅಶೋಕ, ಮಾಜಿ ಸಚಿವ ಬಿ.ಸಿ. ಪಾಟೀಲ, ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಪ್ರಮುಖರಾದ ಭಾರತಿ ಜಂಬಗಿ, ಬಸವರಾಜ ಛತ್ರದ, ಶಿವಯೋಗಿ ಶಿರೂರ, ಮುರಿಗೇಪ್ಪ ಶೆಟ್ಟರ್ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts