More

    ರಾಸಾಯನಿಕ ಕಾರ್ಖಾನೆಯಲ್ಲಿ ಬೆಂಕಿ ಅವಘಡ, ಮೂವರಿಗೆ ಗಾಯ, ಒಬ್ಬನ ಸ್ಥಿತಿ ಗಂಭೀರ

    ಸೂಲಿಬೆಲೆ: ಕಂಬಳೀಪುರ ಬಳಿಯ ರಾಸಾಯನಿಕ ತಯಾರಿಕೆ ಕಾರ್ಖಾನೆಯಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದ್ದು, ಮೂವರು ಗಾಯಗೊಂಡಿದ್ದು, ಒಬ್ಬನ ಸ್ಥಿತಿ ಗಂಭೀರವಾಗಿದೆ.

    ಶಿಡ್ಲಘಟ್ಟ ತಾಲೂಕು ಗಂಬೀರನಹಳ್ಳಿಯ ಚಂದನ್(28) ತೀವ್ರ ಗಾಯಗೊಂಡಿದ್ದು, ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಜೇಶ್ (34) ಹಾಗೂ ರಾಜಣ್ಣ (38) ಎಂಬುವವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸಾರ್ವಜನಿಕರಿಂದ ರಕ್ಷಣೆ: ಇಸಿಸಿಐ ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. ಸ್ಥಳೀಯರು ಕಾರ್ಖಾನೆಯತ್ತ ದೌಡಾಯಿಸಿ ಪರಿಶೀಲಿಸಿದಾಗ ಕಾರ್ಮಿಕರು ಬೆಂಕಿಯಲ್ಲಿ ಸಿಲುಕಿರುವುದು ಕಂಡುಬಂದಿದೆ. ತಕ್ಷಣ ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದಾರೆ ಎನ್ನಲಾಗಿದೆ.
    ಕಾರ್ಖಾನೆಯಲ್ಲಿ 5 ಮಂದಿ ಕಾರ್ಯನಿರ್ವಹಿಸುತ್ತಿದ್ದು, ರಾಸಾಯನಿಕ ಪದಾರ್ಥಗಳನ್ನು ಮಿಶ್ರಣ ಮಾಡುವಾಗ ಅವಘಡ ಸಂಭವಿಸಿದೆ ಎನ್ನಲಾಗಿದೆ. ಇದರಲ್ಲಿ ನಟರಾಜ್ ಹಾಗೂ ಮತ್ತೊಬ್ಬ ಕಾರ್ಮಿಕ ಅವಘಡದಿಂದ ಪಾರಾಗಿದ್ದಾರೆ.

    ದಟ್ಟಹೊಗೆಯಿಂದ ಆತಂಕ: 2 ಗಂಟೆಗೂ ಹೆಚ್ಚು ಕಾಲ ಉರಿದ ಬೆಂಕಿಯಿಂದ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟಹೊಗೆ ಕಾಣಿಸಿಕೊಂಡಿತ್ತು. ಈ ಕಾರ್ಖಾನೆಗೆ ಸಾರ್ವಜನಿಕ ಪ್ರವೇಶವಿಲ್ಲದ್ದರಿಂದ ಒಳಗೆ ಏನಾಗುತ್ತಿದೆ ಎಂಬುದರ ಮಾಹಿತಿ ಇಲ್ಲದೆ ಸ್ಥಳೀಯರು ಆತಂಕಗೊಂಡಿದ್ದರು. ಕೆಲವರು ಧೈರ್ಯ ಮಾಡಿ ಒಳಗೆ ನುಗ್ಗಿದ್ದರಿಂದ ಕಾರ್ಮಿಕರ ಪ್ರಾಣ ರಕ್ಷಣೆಯಾಗಿದೆ ಎನ್ನಲಾಗಿದೆ.

    ಸಿಲಿಂಡರ್ ಸ್ಫೋಟ ಶಂಕೆ: ಸಿಲಿಂಡರ್ ಸ್ಫೋಟದಿಂದ ಬೆಂಕಿ ಅವಘಡ ಸಂಭವಿಸಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಕಾರ್ಖಾನೆ ಛಾವಣಿ ಭಸ್ಮವಾಗಿದೆ. ರಾಸಾಯನಿಕ ಡ್ರಮ್‌ಗಳು ಆಹುತಿಯಾಗಿವೆ. ಗ್ಯಾಸ್ ಸ್ಟವ್ ಬಿಡಿ ಭಾಗಗಳು ಕಾಣಿಸಿಕೊಂಡಿರುವುದರಿಂದ ಸಿಲಿಂಟರ್ ಸ್ಫೋಟಗೊಂಡಿರಬಹುದು ಎನ್ನಲಾಗಿದೆ.
    ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್ಪಿ ಉಮಾಶಂಕರ್, ಸಿಪಿಐ.ಶಿವರಾಜ್, ಸೂಲಿಬೆಲೆ ಸಬ್‌ಇನ್‌ಸ್ಪೆಕ್ಟರ್ ರಮೇಶ್‌ಗುಗ್ಗರಿ ಭೇಟಿ ನೀಡಿ ಪರಿಶೀಲಿಸಿ, ದೂರು ದಾಖಲಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts