More

    ಕೇಂದ್ರ ತನಿಖಾ ಸಂಸ್ಥೆಗಳ ಮಾದರಿ ಸಿಐಡಿಗೆ ಎಫ್ಐಆರ್ ಅಧಿಕಾರ

    ಬೆಂಗಳೂರು: ಕೇಂದ್ರ ತನಿಖಾ ಸಂಸ್ಥೆಗಳ ಮಾದರಿ ಎಫ್ಐಆರ್ ದಾಖಲಿಸುವ ಅಧಿಕಾರವನ್ನು ಅಪರಾಧ ತನಿಖಾ ವಿಭಾಗಕ್ಕೂ (ಸಿಐಡಿ) ವಹಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಇದೀಗ ಸಿಐಡಿಗೆ ಪ್ರತ್ಯೇಕ ಎಫ್ಐಆರ್ ದಾಖಲಿಸುವ ಅಧಿಕಾರ ಲಭಿಸಿದ್ದು, ತನಿಖೆಗೆ ಚುರುಕು ಮತ್ತು ಮತ್ತಷ್ಟು ಪಾರದರ್ಶಕತೆ ಸಿಗಲಿದೆ.

    ದೇಶದಲ್ಲಿ ನಡೆಯುವ ಭಯೋತ್ಪಾದಕ ಚಟುವಟಿಕೆ, ಆರ್ಥಿಕ ಅಪರಾಧ, ಹವಾಲ ದಂಧೆ ಸೇರಿ ಗಂಭೀರ ಅಪರಾಧ ಪ್ರಕರಣಗಳನ್ನು ಸಿಬಿಐ, ಎನ್‌ಐಎ ಸೇರಿ ಕೇಂದ್ರ ತನಿಖಾ ಸಂಸ್ಥೆಗಳು ಕೈಗೊಂಡಾಗ ತಮ್ಮ ವ್ಯಾಪ್ತಿಯ ಠಾಣೆಯಲ್ಲಿ ಎ್ಐಆರ್ ದಾಖಲಿಸಿ ತನಿಖೆ ಶುರು ಮಾಡಲಿವೆ.
    ರಾಜ್ಯದಲ್ಲಿ ಉನ್ನತ ತನಿಖಾ ಸಂಸ್ಥೆಯಾದ ಸಿಐಡಿಗೆ ಈ ಅಧಿಕಾರ ಇರಲಿಲ್ಲ. ರಾಜ್ಯ ಸರ್ಕಾರ ಗಂಭೀರ ಅಪರಾಧ ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವಹಿಸಿದಾಗ ಅಪರಾಧ ಕೃತ್ಯ ನಡೆದ ಸ್ಥಳೀಯ ಠಾಣೆಯಲ್ಲಿ ಅಥವಾ ಸ್ಥಳೀಯ ಪೊಲೀಸರು ದಾಖಲಿಸುವ ಎಫ್ಐಆರ್ ಆಧಾರದ ಮೇಲೆ ತನಿಖೆ ಶುರು ಮಾಡುತ್ತಿದ್ದರು. ಆರೋಪಿಗಳು ಜಾಮೀನು ಅರ್ಜಿ ವಿಚಾರಣೆ ಸಹ ಸ್ಥಳೀಯ ಕೋರ್ಟ್‌ಗೆ ನಡೆಯುತ್ತಿತ್ತು. ತನಿಖೆ ಪೂರ್ಣಗೊಂಡ ಮೇಲೂ ಸಿಐಡಿ ಅಧಿಕಾರಿಗಳು ಸ್ಥಳೀಯ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಿದ್ದರು. ಜಿಲ್ಲಾ ಕೋರ್ಟ್‌ಗಳಲ್ಲಿ ಮೇಲ್ವಿಚಾರಣೆಗೆ ಸಿಐಡಿ ಅಧಿಕಾರಿಗಳಿಗೆ ಕಷ್ಟಸಾಧ್ಯವಾಗಿತ್ತು.
    ಇದನ್ನು ಮನಗೊಂಡ ಸಿಐಡಿ ಡಿಜಿಪಿ ಡಾ.ಎಂ.ಎ. ಸಲೀಂ, ಕೇಂದ್ರ ತನಿಖಾ ಸಂಸ್ಥೆಗಳ ಮಾದರಿ ಸಿಐಡಿಗೂ ಎಫ್ಐಆರ್ ದಾಖಲಿಸುವ ಅಧಿಕಾರಿ ನೀಡಬೇಕೆಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಗೃಹ ಇಲಾಖೆ ಮತ್ತು ಕಾನೂನು ಇಲಾಖೆ ಸಮ್ಮತಿಸಿ ಸಿಐಡಿಗೆ ಪೊಲೀಸ್ ಠಾಣೆ ಅಧಿಕಾರವನ್ನು ಕೊಟ್ಟು ಅಧಿಸೂಚನೆ ಹೊರಡಿಸಿದೆ.

    ಸುಪ್ರೀಂ ಕೋರ್ಟ್, ಹೈಕೋರ್ಟ್, ರಾಜ್ಯ ಸರ್ಕಾರ ಅಥವಾ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಅಡಿಯಲ್ಲಿ ಅಪರಾಧ ಕೃತ್ಯಗಳ ತನಿಖೆಗೆ ಎಫ್ಐಆರ್ ದಾಖಲಿಸುವ ಅಧಿಕಾರವನ್ನು ಇನ್‌ಸ್ಪೆಕ್ಟರ್ ದರ್ಜೆ ಅಧಿಕಾರಿಗೆ ವಹಿಸಲಾಗಿದೆ. ಸಿಐಡಿ ಅಧೀನದಲ್ಲಿ ಈ ಇನ್‌ಸ್ಪೆಕ್ಟರ್ ಕರ್ತವ್ಯ ನಿರ್ವಹಿಸಲಿದ್ದು, ಕಾರ್ಯ ವ್ಯಾಪ್ತಿ ಇಡೀ ರಾಜ್ಯವಾಗಿರುತ್ತದೆ.

    ಇನ್ನೂ ಮುಂದೆ ರಾಜ್ಯ ಸರ್ಕಾರ ವರ್ಗಾವಣೆ ಮಾಡುವ ಪ್ರಕರಣಗಳ ಸಂಬಂಧ ಸಿಐಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಲಾಗುತ್ತದೆ. ಗಂಭೀರ ಪ್ರಕರಣಗಳನ್ನು ಮಾತ್ರ ತನಿಖೆ ನಡೆಸುವುದರಿಂದ ಮಾಹಿತಿ ಸೋರಿಕೆ ಆಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಸಿಸಿಬಿಗೂ ಅಧಿಕಾರ

    ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್‌ನಲ್ಲಿ ಇರುವ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಕ್ಕೂ ಪೊಲೀಸ್ ಠಾಣೆ ಅಧಿಕಾರವನ್ನು ರಾಜ್ಯ ಸರ್ಕಾರ ವಹಿಸಿದೆ. ಸಿಸಿಬಿಯಲ್ಲೇ ನೇರವಾಗಿ ಎಫ್ಐಆರ್ ದಾಖಲಿಸಿ ತನಿಖೆ ಶುರು ಮಾಡಬಹುದು. ಈ ಮೊದಲು ಸ್ಥಳೀಯ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳನ್ನು ಪೊಲೀಸ್ ಆಯುಕ್ತರು ಶಿಾರಸು ಮಾಡಿದಾಗ ಸಿಸಿಬಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಇದರ ಜತೆಗೆ ಸಿಸಿಬಿ ಪೊಲೀಸರು, ದೂರು ಪಡೆದು ಪ್ರಾಥಮಿಕ ತನಿಖೆ ನಡೆಸಿ ಕೃತ್ಯ ನಡೆದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿ ಮುಂದಿನ ತನಿಖೆ ನಡೆಸಿ ಕೋರ್ಟ್‌ಗೆ ಆರೋಪಪಟ್ಟಿ ಸಲ್ಲಿಸುತ್ತಿದ್ದರು. ಇದೀಗ ಪೊಲೀಸ್ ಠಾಣೆ ಅಧಿಕಾರವನ್ನು ಸಿಸಿಬಿ ವಹಿಸಲಾಗಿದೆ. ಚಾಮರಾಜಪೇಟೆ ಸಿಸಿಬಿ ಕಟ್ಟಡದಲ್ಲಿಯೇ ಪೊಲೀಸ್ ಠಾಣೆ ತೆರೆದು ಇನ್‌ಸ್ಪೆಕ್ಟರ್‌ನನ್ನು ನೇಮಕ ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts