More

    ಕಡೆಗಣಿಸಿದ್ರೆ ಎಫ್​ಐಆರ್: ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆಗೆ ಹೈಕೋರ್ಟ್ ಸೂಚನೆ

    ಆಯೋಜಕರಷ್ಟೇ ಅಲ್ಲ ಪಾಲ್ಗೊಂಡವರ ವಿರುದ್ಧವೂ ಬೀಳುತ್ತದೆ ಕೇಸ್

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಎರಡನೇ ಅಲೆ ಜೋರಾಗಿದ್ದರೂ, ಮಾರ್ಗಸೂಚಿ ಅನುಸರಿಸಲು ನಿರ್ಲಕ್ಷ್ಯ ತೋರುವವರ ವಿರುದ್ಧ ಇನ್ನು ಕಠಿಣ ಕ್ರಮ ಆಗಲಿದೆ. ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸದವರ ಮೇಲೆ ಎಫ್​ಐಆರ್ ದಾಖಲಿಸುವಂತೆ ರಾಜ್ಯ ಹೈಕೋರ್ಟ್ ಪೊಲೀಸರಿಗೆ ಖಡಕ್ ಆದೇಶ ನೀಡಿದೆ.

    ಸಭೆ-ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಓಡಾಡುವ ಪ್ರತಿಯೊಬ್ಬರ ವಿರುದ್ಧವೂ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಎಫ್​ಐಆರ್ ದಾಖಲಿಸಲು ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಸುತ್ತೋಲೆ ಹೊರಡಿಸುವಂತೆ ನ್ಯಾಯಾಲಯವು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದೆ.

    ರಾಜ್ಯದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಲೆಟ್ಜ್ ಕಿಟ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಗುರುವಾರ ನಡೆಸಿತು. ಸಭೆ-ಸಮಾರಂಭಗಳು, ರಾಜಕೀಯ ಹಾಗೂ ಧಾರ್ವಿುಕ ರ್ಯಾಲಿಗಳಲ್ಲಿ ಮಾಸ್ಕ್ ಧರಿಸದಿರುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದಿರುವುದು ಸೇರಿ ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದೆ. ಅಂಥವರಿಗೆ ದಂಡ ಮಾತ್ರ ವಿಧಿಸಲಾಗುತ್ತಿದೆ. ಆದ್ದರಿಂದ, ಸಮಾವೇಶಗಳ ಆಯೋಜಕರು ಮಾತ್ರವಲ್ಲದೆ ಅವುಗಳಲ್ಲಿ ಪಾಲ್ಗೊಂಡವರ ವಿರುದ್ಧವೂ ಸಾಂಕ್ರಾಮಿಕ ರೋಗಗಳ ಕಾಯ್ದೆ ಅನುಸಾರ ಎಫ್​ಐಆರ್ ದಾಖಲಿಸಲೇಬೇಕು, ಎಫ್​ಐಆರ್ ದಾಖಲಿಸಿದ ನಂತರವೂ ದಂಡ ವಿಧಿಸಬಹುದು ಎಂದು ಹೈಕೋರ್ಟ್ ಹೇಳಿದೆ. ಇದರ ಜವಾಬ್ದಾರಿಯನ್ನು ಪೊಲೀಸರಿಗೆ ವಹಿಸಿ ಅಧಿ ಕೃತ ಆದೇಶ ಹೊರಡಿಸುವಂತೆ ಡಿಜಿಪಿಗೆ ಸೂಚಿಸಿದೆ.

    ಗಣ್ಯರ ಬಗ್ಗೆ ಬೇಸರ: ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಚಿತ್ರನಟರು, ರಾಜಕೀಯ ಹಾಗೂ ಧಾರ್ವಿುಕ ಮುಖಂಡರೇ ಮಾರ್ಗಸೂಚಿ ಉಲ್ಲಂಘಿಸುತ್ತಿರುವುದು ಬೇಸರದ ಸಂಗತಿ. ಅಂಥವರ ಮೇಲೆ ಪೊಲೀಸರು ಎಫ್​ಐಆರ್ ದಾಖಲಿಸುತ್ತಿಲ್ಲ. ಹೆಚ್ಚು ಜನ ಸೇರಿದ್ದೆಡೆ ಮಾಸ್ಕ್ ಧರಿಸದ, ಅಂತರ ಕಾಯ್ದುಕೊಳ್ಳದ ಯಾರೇ ಇದ್ದರೂ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕು. ಸಭೆ-ಸಮಾವೇಶಗಳಲ್ಲಿ ಪಾಲ್ಗೊಂಡು ಮಾರ್ಗಸೂಚಿ ಉಲ್ಲಂಘಿಸುವ ಪ್ರತಿಯೊಬ್ಬರ ವಿರುದ್ಧವೂ ಸಾಂಕ್ರಾಮಿಕ ರೋಗಗಳ ಕಾಯ್ದೆ ಅಡಿ ಎಫ್​ಐಆರ್ ದಾಖಲಿಸುವ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ವ್ಯಾಪಕ ಪ್ರಚಾರ ನೀಡಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶಿಸಿತು.

    ಪರಿಸ್ಥಿತಿ ಗಂಭೀರವೆಂದ ಪೀಠ: ಸದ್ಯದ ಪರಿಸ್ಥಿತಿ ಗಂಭೀರವಾಗಿದ್ದು, ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡದಿದ್ದರೆ ಸೋಂಕು ಹೆಚ್ಚುವ ಸಾಧ್ಯತೆ ಇದೆ. ಪ್ರತಿಯೊಬ್ಬರಿಗೂ ಆರೋಗ್ಯದಿಂದ ಜೀವನ ನಡೆಸುವ ಹಕ್ಕನ್ನು ಸಂವಿಧಾನದಲ್ಲಿ ಕೊಡಲಾಗಿದೆ. ಜನರ ಆ ಹಕ್ಕನ್ನು ರಕ್ಷಿಸುವುದು ಸರ್ಕಾರದ ಆದ್ಯ ಕರ್ತವ್ಯ. ಆದ್ದರಿಂದ, ಈ ವಿಚಾರದಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲೇಬೇಕು ಎಂದು ಕೋರ್ಟ್ ಹೇಳಿತು. ಮುಂದಿನ ವಿಚಾರಣೆ ವೇಳೆ ಆದೇಶದ ಅನುಪಾಲನಾ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿ, ವಿಚಾರಣೆಯನ್ನು ಏ.22ಕ್ಕೆ ಮುಂದೂಡಿತು.

    ಮಾರ್ಗಸೂಚಿಯಲ್ಲೇನಿದೆ?

    • ತೆರೆದ ಪ್ರದೇಶದಲ್ಲಿ ನಡೆಯುವ ಮದುವೆ ಕಾರ್ಯಕ್ರಮದಲ್ಲಿ ಗರಿಷ್ಠ 500 ಜನ ಹಾಗೂ ಸಭಾಂಗಣ, ಮಂಟಪಗಳಲ್ಲಿ ನಡೆಯುವ ಮದುವೆಯಲ್ಲಿ ಗರಿಷ್ಠ 200 ಜನರಿಗೆ ಅವಕಾಶ
    • ಹುಟ್ಟುಹಬ್ಬ ಆಚರಣೆಯಲ್ಲಿ ತೆರೆದ ಪ್ರದೇಶದಲ್ಲಿ ಗರಿಷ್ಠ 100 ಜನರು, ಪಾರ್ಟಿ ಹಾಲ್​ಗಳಲ್ಲಿ ಆಚರಿಸಿದರೆ 50 ಜನರು ಮಾತ್ರ ಪಾಲ್ಗೊಳ್ಳಲು ಅನುಮತಿ
    • ಮೃತರ ದರ್ಶನಕ್ಕೆ ತೆರೆದ ಪ್ರದೇಶದಲ್ಲಿ 100 ಹಾಗೂ ಇಕ್ಕಟ್ಟು ಸ್ಥಳದಲ್ಲಿ 50 ಮಂದಿ ಮೀರಬಾರದು, ಅಂತ್ಯಕ್ರಿಯೆಯಲ್ಲಿ 50 ಜನ ಮಾತ್ರ ಭಾಗಿಯಾಗಲು ಅವಕಾಶ
    • ತೆರೆದ ಪ್ರದೇಶಗಳಲ್ಲಿ ನಡೆಯುವ ಧಾರ್ವಿುಕ ಆಚರಣೆಗಳು ಹಾಗೂ ರಾಜಕೀಯ ಸಭೆ ಸಮಾರಂಭಗಳಲ್ಲಿ ಗರಿಷ್ಠ 500 ಜನರು ಸೇರಲು ಅವಕಾಶ
    • ಸಭಾಂಗಣಗಳಲ್ಲಿ ನಡೆಯುವ ಇತರ ಸಮಾರಂಭಗಳಲ್ಲಿ ಹಾಲ್​ನ ವಿಸ್ತೀರ್ಣಕ್ಕೆ ಅನುಗುಣವಾಗಿ 100 ಜನ ಮೀರದಂತೆ ಜನ ಸೇರಬೇಕು. ಜಿಮ್ಲ್ಲಿ ಶೇ. 50 ಹಾಗೂ ಚಿತ್ರ ಮಂದಿರಗಳಲ್ಲಿ ಶೇ. 50 ಅವಕಾಶವಿದೆ.
    • ಈಜುಕೊಳ ಸಂಪೂರ್ಣ ಬಂದ್​ಗೆ ಆದೇಶಿಸಿದೆ
    • ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಕಡ್ಡಾಯ
    • ಕೋವಿಡ್ ಲಸಿಕೆ ಪಡೆದುಕೊಳ್ಳುವುದು ಹಾಗೂ ಸೋಂಕು ಲಕ್ಷಣಗಳಿದ್ದವರು ಪರೀಕ್ಷೆಗೆ ಒಳಪಡುವುದರ ಕುರಿತು ಮಾಧ್ಯಮ (ಮುದ್ರಣ, ವಿದ್ಯುನ್ಮಾನ, ಸಾಮಾಜಿಕ ಮಾಧ್ಯಮ ಇತ್ಯಾದಿ)ಗಳ ಮೂಲಕ ಆರೋಗ್ಯ ಶಿಕ್ಷಣ ನೀಡಿ ಜನರಲ್ಲಿ ಜಾಗೃತಿ ಮೂಡಿಸಬೇಕು

    ಮುಷ್ಕರ ವಿಚಾರ ಪ್ರಸ್ತಾಪ: ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರೊಬ್ಬರು ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ಕೂಡ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆಂದು ತಿಳಿಸಿ, ನ್ಯಾಯಪೀಠಕ್ಕೆ ಫೋಟೋಗಳನ್ನು ಸಲ್ಲಿಸಿದರು. ಅವುಗಳನ್ನು ಪರಿಶೀಲಿಸಿದ ಪೀಠ, ಮುಷ್ಕರ ನಿರತ ಕೆಎಎಸ್​ಆರ್​ಟಿಸಿ ನೌಕರರ ಒಕ್ಕೂಟ ಸೇರಿ ಯಾರಿಂದಲೇ ನಿಯಮ ಉಲ್ಲಂಘನೆಯಾದರೆ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು.

    ದಿನದ ಪ್ರಮುಖ ಬೆಳವಣಿಗೆ

    • ದೆಹಲಿಯಲ್ಲಿ ವಾರಾಂತ್ಯದ ಕರ್ಫ್ಯೂ ಘೋಷಣೆ
    • ಕರ್ನಾಟಕ ಸಹಿತ 10 ರಾಜ್ಯಗಳಲ್ಲಿ ದ್ವಿಗುಣ ರೂಪಾಂತರಿ ತಳಿ ಪತ್ತೆ
    • ಮಹಾರಾಷ್ಟ್ರದಲ್ಲಿ ಮಿನಿ ಲಾಕ್​ಡೌನ್ ಅಗತ್ಯ-ಪ್ರಧಾನಿಗೆ ಸಿಎಂ ಠಾಕ್ರೆ ಪತ್ರ
    • ದೇಶದ ಪುರಾತತ್ವ ಸರ್ವೆಕ್ಷಣಾಲಯದ ಸ್ಮಾರಕಗಳು ಮೇ 15ರವರೆಗೆ ಬಂದ್
    • ಅಗತ್ಯ ವಸ್ತುಗಳ ಸುಗಮ ವಹಿವಾಟಿಗೆ ಅಡಚಣೆ ಆಗದಂತೆ ನೋಡಿಕೊಳ್ಳಲು ರಾಜ್ಯಗಳಿಗೆ ಕೇಂದ್ರ ನಿರ್ದೇಶನ
    • ಉತ್ತರ ಪ್ರದೇಶದಲ್ಲಿ ಮೇ 15ರವರೆಗೆ ಶಾಲೆಗಳು ಬಂದ್. ಬೋರ್ಡ್ ಪರೀಕ್ಷೆ ಮುಂದೂಡಿಕೆ
    • ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆ ರದ್ದು, 12ನೇ ತರಗತಿ ಪರೀಕ್ಷೆ ಮುಂದೂಡಿಕೆ

    ನೀಟ್ ಮುಂದೂಡಿಕೆ: ದೇಶಾದ್ಯಂತ ಕೋವಿಡ್ 19 ಪ್ರಕರಣ ಹೆಚ್ಚಾಗುತ್ತಿರುವ ಕಾರಣ ಏ.18ರಂದು ನಡೆಯಬೇಕಾಗಿದ್ದ ನ್ಯಾಷನಲ್ ಎಲಿಜಿಬಿಲಿಟಿ-ಕಮ್​ಎಂಟ್ರನ್ಸ್ ಟೆಸ್ಟ್ (ನೀಟ್) ಅನ್ನು ಮುಂದೂಡಲಾಗಿದೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ಬಳಿಕ ನಿರ್ಧರಿಸಲಾಗುವುದು. ನಮ್ಮ ಎಲ್ಲ ಯುವ ವೈದ್ಯ ವಿದ್ಯಾರ್ಥಿಗಳ ಆರೋಗ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಗುರುವಾರ ಟ್ವೀಟ್ ಮೂಲಕ ತಿಳಿಸಿದ್ದಾರೆ.

    ದೇಶದಲ್ಲಿ 2 ಲಕ್ಷ , ರಾಜ್ಯದಲ್ಲಿ 14,000 ಕೇಸ್: ಕರ್ನಾಟಕದಲ್ಲಿ ಕರೊನಾ ಗುರುವಾರ ಮತ್ತೊಂದು ದಾಖಲೆ ಬರೆದಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿ ಒಂದೇ ದಿನ 14,738 ಜನರಿಗೆ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ 66 ಜನರು ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲೇ 10,497 ಮಂದಿ ಸೋಂಕಿಗೆ ಒಳಗಾಗಿದ್ದು, 30 ಜನರು ಮೃತಪಟ್ಟಿದ್ದಾರೆ. ಇನ್ನು ಭಾರತದಲ್ಲಿ ನಿತ್ಯ ಪ್ರಕರಣಗಳ ಸಂಖ್ಯೆ 2 ಲಕ್ಷದ ಗಡಿ ದಾಟಿದೆ. ಗುರುವಾರ ಬೆಳಗ್ಗೆ ಮುಕ್ತಾಯವಾದ ಅವಧಿಯಲ್ಲಿ 2,00,739 ಜನರಿಗೆ ಸೋಂಕು ದೃಢಪಟ್ಟಿದೆ. ಇದೇ ಅವಧಿಯಲ್ಲಿ 1,038 ಜನರು ಮೃತಪಟ್ಟಿದ್ದಾರೆ.

    ರಾಜಧಾನಿಯಲ್ಲಿ ಕೋವಿಡ್ ಶವ ಸಂಸ್ಕಾರಕ್ಕೂ ಕ್ಯೂ! ಚಿತಾಗಾರದ ಮುಂದೆ ಗಂಟೆಗಟ್ಟಲೆ ನಿಂತ ಆಂಬ್ಯುಲೆನ್ಸ್​

    ಬೆಚ್ಚಿಬೀಳಿಸುವಂತಿದೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನ ಪ್ರಮಾಣ!; ಇಂದು ಇದುವರೆಗಿನ ಗರಿಷ್ಠ ಪ್ರಕರಣ ದಾಖಲು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts