More

    ಬಿಡದಿ ಇನ್‌ಸ್ಪೆಕ್ಟರ್ ವಿರುದ್ಧ ಎಫ್ಐಆರ್; ಸುಳ್ಳು ಕೇಸ್ ದಾಖಲಿಸಿ 72 ಲಕ್ಷ ದುರ್ಬಳಕ್ಕೆ ಆರೋಪ

    ಬೆಂಗಳೂರು: ಉದ್ಯಮಿ ಬಳಿ ಕಳ್ಳತನ ಮಾಡಿದ್ದ ಆತನ ಕಾರು ಚಾಲಕನ ವಿರುದ್ಧ ಸುಳ್ಳು ಕೇಸ್ ಮಾಡಿ 72 ಲಕ್ಷ ರೂ. ವಸೂಲಿ ಮಾಡಿ ಸರ್ಕಾರಕ್ಕೆ ಒಪ್ಪಿಸದೆ ವಂಚಿಸಿದ ಆರೋಪ ಇನ್‌ಸ್ಪೆಕ್ಟರ್ ವಿರುದ್ಧ ಕೇಳಿಬಂದಿದೆ.

    ಕೆಂಗೇರಿ ಗೇಟ್ ಉಪವಿಭಾಗ ಎಸಿಪಿ ಭರತ್ ಎಸ್. ರೆಡ್ಡಿ ನೀಡಿದ ದೂರಿನ ಮೇರೆಗೆ ಇನ್‌ಸ್ಪೆಕ್ಟರ್ ಜಿ. ಕೆ.ಶಂಕರ್ ನಾಯಕ್ ಮತ್ತು ದಲ್ಲಾಳಿ ಲೋಕನಾಥ್ ಸಿಂಗ್ ವಿರುದ್ಧ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಕೇಸ್ ದಾಖಲಾಗಿದ್ದು, ಹೆಚ್ಚಿನ ತನಿಖೆ ಸಲುವಾಗಿ ಪ್ರಕರಣ ವರ್ಗಾವಣೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಬ್ಯಾಟರಾಯನಪುರ ಠಾಣೆಯಲ್ಲಿ 2022ರಲ್ಲಿ ಇನ್‌ಸ್ಪೆಕ್ಟರ್ ಆಗಿದ್ದ ಶಂಕರ್ ನಾಯ್ಕ ಕರ್ತವ್ಯ ನಿರ್ವಹಿಸುತ್ತಿದ್ದರು. ಮಧ್ಯವರ್ತಿ ಲೋಕನಾಥ್ ಸಿಂಗ್, ತನ್ನ ಪರಿಚಯಸ್ಥ ಉದ್ಯಮಿ ಹರೀಶ್ ಬಳಿ ಆತನ ಕಾರು ಚಾಲಕ ಸಂತೋಷ್ ಎಂಬಾತ 75 ಲಕ್ಷ ರೂ. ಕಳ್ಳತನ ಮಾಡಿದ್ದಾನೆ. ಅದನ್ನು ವಸೂಲಿ ಮಾಡಿಕೊಡುವಂತೆ ಇನ್‌ಸ್ಪೆಕ್ಟರ್ ಬಳಿ ಮನವಿ ಮಾಡಿದ್ದ.

    ಕೆಲಸ ಮಾಡಿಕೊಡಲು ಇನ್‌ಸ್ಪೆಕ್ಟರ್ ಶಂಕರ್ ನಾಯ್ಕ, ಉದ್ಯಮಿ ಬಳಿ 20 ಲಕ್ಷ ರೂ.ಗೆ ಕಮಿಷನ್ ಕೇಳಿದ್ದ. ಅದಕ್ಕೆ ಉದ್ಯಮಿ ಒಪ್ಪಿಕೊಂಡಾಗ ಸಂತೋಷ್ ವಿರುದ್ಧ 2022ರ ಅಕ್ಟೋಬರ್ 12ಕ್ಕೆ ಸ್ವತಃ ಇನ್‌ಸ್ಪೆಕ್ಟರ್ ಕನ್ನಡದಲ್ಲಿ ಸುಳ್ಳು ದೂರು ಸೃಷ್ಟಿ ಮಾಡಿದ್ದರು. ಕನ್ನಡ ಓದಲು ಬರೆಯಲು ಉದ್ಯಮಿ ಹರೀಶ್‌ಗೆ ಬರುತ್ತಿರಲಿಲ್ಲ. ಜತೆಗೆ ಹೊಸಕೋಟೆಯಲ್ಲಿ ಕೃತ್ಯ ನಡೆದಿದ್ದು, ಬ್ಯಾಟರಾಯನಪುರದಲ್ಲಿ ಕೇಸ್ ಕೊಡಲು ಉದ್ಯಮಿ ಹಿಂದೇಟು ಹಾಕಿದ್ದರು. ಆಗ ಉದ್ಯಮಿ ಸ್ನೇಹಿತನ ಜಾನ್ ಕಡೆಯಿಂದ ದೂರಿನ ಪ್ರತಿಗೆ ಸಹಿ ಪಡೆದು ಸಂತೋಷ್ ವಿರುದ್ಧ ಎ್ಐಆರ್ ದಾಖಲಿಸದ್ದರು. ಇದಾದ ಮೇಲೆ ಸಂತೋಷ್‌ನನ್ನು ವಶಕ್ಕೆ ಪಡೆದು ಆತನ ಕಡೆಯಿಂದ 500 ರೂ. ಮುಖ ಬೆಲೆಯ 72 ಲಕ್ಷ ರೂ. ಅನ್ನು ಜಪ್ತಿ ಮಾಡಿದ್ದ ಇನ್‌ಸ್ಪೆಕ್ಟರ್ ಶಂಕರ್ ನಾಯ್ಕ, ಪ್ರಕರಣ ಸಂಬಂಧ ಕೋರ್ಟ್‌ಗೆ ವರದಿ ಸಲ್ಲಿಸಿದ್ದರು. ಇದೇ ವೇಳೆ ಪಶ್ಚಿಮ ವಿಭಾಗ ಡಿಸಿಪಿಗೆ ವರದಿ ಸಲ್ಲಿಸಿದ್ದರು.

    ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ತನಿಖೆಯನ್ನು ಕೆಂಗೇರಿ ಗೇಟ್ ಉಪವಿಭಾಗ ಎಸಿಪಿಗೆ ಪ್ರಕರಣ ವರ್ಗಾವಣೆ ಮಾಡಿದ್ದರು. ಆದರೆ, ಇನ್‌ಸ್ಪೆಕ್ಟರ್ ಕೇವಲ ಕಡತ ಒಪ್ಪಿಸಿದ್ದರೂ ಜಪ್ತಿಯಾದ ಹಣ ಒಪ್ಪಿಸಿರುವುದಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಎಸಿಪಿ ಕೋದಂಡರಾಮ್, ಸುರಕ್ಷತೆ ದೃಷ್ಟಿಯಿಂದ 72 ಲಕ್ಷ ರೂ.ಅನ್ನು ಸರ್ಕಾರದ ಖಜಾನೆಗೆ ಒಪ್ಪಿಸುವಂತೆ ಇನ್‌ಸ್ಪೆಕ್ಟರ್‌ಗೆ ಜ್ಞಾಪನ ಪತ್ರ ನೀಡಿದ್ದರು. ನಿರ್ಲಕ್ಷ್ಯ ಮಾಡಿದ ಇನ್‌ಸ್ಪೆಕ್ಟರ್, ಹಣವನ್ನು ದುರ್ಬಳಕ್ಕೆ ಮಾಡಿಕೊಂಡಿದ್ದರು. ಅಷ್ಟರಲ್ಲಿ ಬ್ಯಾಟರಾಯನಪುರ ಠಾಣೆಯಿಂದ ಶಂಕರ್ ನಾಯ್ಕ, ಬೇರೆಡೆ ವರ್ಗಾವಣೆ ಆಗಿ ಅಲ್ಲಿಗೆ ನಿಂಗನಗೌಡ ಎ. ಪಾಟೀಲ್ ಬಂದಿದ್ದರು. ಆಗಲೂ 72 ಲಕ್ಷ ರೂ.ಅನ್ನು ಶಂಕರ್ ನಾಯ್ಕ ನೀಡುವುದಿಲ್ಲ. ಈ ಬಗ್ಗೆ ಲಿಖಿತವಾಗಿ ನೋಟಿಸ್ ಕೊಟ್ಟಾಗ ಆರೋಪಿತ ಇನ್‌ಸ್ಪೆಕ್ಟರ್, ಚೀಲದಲ್ಲಿ 72 ಲಕ್ಷ ರೂ. ಅಂದು ಪೊಲೀಸ್ ಠಾಣೆಯಲ್ಲಿ ಇಟ್ಟು ಹೋಗಿದ್ದರು. ಕೋರ್ಟ್ ಗಮನಕ್ಕೆ ತಂದಾಗ 2023ರ ಏಪ್ರಿಲ್ 19ರಂದು ಆದಾಯ ತೆರಿಗೆ ಇಲಾಖೆಗೆ ಒಪ್ಪಿಸುವಂತೆ ಆದೇಶಿಸಿತ್ತು.

    ಚೀಲದಲ್ಲಿ ತಂದಿಟ್ಟಿದ್ದ ಪಿಐ :
    ಬ್ಯಾಟರಾಯನಪುರ ಇನ್‌ಸ್ಪೆಕ್ಟರ್ ನಿಂಗನಗೌಡ ಎ. ಪಾಟೀಲ್, ನೋಟಿಸ್ ನೀಡಿದ ಕಾರಣಕ್ಕೆ ಆರೋಪಿ ಶಂಕರ್ ನಾಯ್ಕ, ಚೀಲದಲ್ಲಿ 75 ಲಕ್ಷ ರೂ. ತಂದು ಠಾಣೆಯಲ್ಲಿ ಇಟ್ಟು ಹೋಗಿದ್ದರು. ಅದರಲ್ಲಿ 100, 200, 500 ಮತ್ತು 2 ಸಾವಿರ ರೂ. ಮುಖ ಬೆಲೆಯ ನೋಟುಗಳು ಇದ್ದವು. ಆದರೆ, ಜಪ್ತಿ ಮಾಡಿದ ಸಂದರ್ಭದಲ್ಲಿ 500 ರೂ. ಮುಖ ಬೆಲೆಯ ನೋಟುಗಳು ಎಂದು ಕೋರ್ಟ್‌ಗೆ ವರದಿ ಸಲ್ಲಿಸಲಾಗಿತ್ತು. ಅಂದರೇ ಜಪ್ತಿ ಮಾಡಿದ್ದ ಹಣವನ್ನು ದುರ್ಬಳಕ್ಕೆ ಮಾಡಿಕೊಂಡು ಬೇರೆಯೇ ಹಣ ತಂದಿಟ್ಟಿದ್ದಾರೆ. ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಬೇಕಾದರೇ ಅಕ್ರಮವಾಗಿ ಹಣ ಸಂಪಾದನೆ ಮಾಡಿದ್ದಾರೆ ಎಂದು ಎಸಿಪಿ ಭರತ್ ಎಸ್. ರೆಡ್ಡಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts