More

    ಫಿನ್​ಲ್ಯಾಂಡ್ ಅತಿ ಸಂತಸದ ದೇಶ; ಹ್ಯಾಪಿನೆಸ್ ಇಂಡೆಕ್ಸ್​ನಲ್ಲಿ ಭಾರತಕ್ಕೆ 126ನೇ ಸ್ಥಾನ

    ಹೆಲ್ಸಿಂಕಿ: ವಿಶ್ವಸಂಸ್ಥೆ ಪ್ರಾಯೋಜಿತ ‘ವಿಶ್ವ ಸಂತೋಷ’ದ ವರದಿಯಲ್ಲಿ ಫಿನ್​ಲ್ಯಾಂಡ್ ಸತತ ಏಳನೇ ವರ್ಷವೂ ಮೊದಲ ಸ್ಥಾನದಲ್ಲಿದೆ. ಬುಧವಾರ ಬಿಡುಗಡೆಯಾದ ವರದಿಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಭಾರತ ಸಂತೋಷ ಸೂಚ್ಯಂಕದಲ್ಲಿ 126ನೇ ಸ್ಥಾನದಲ್ಲಿದ್ದು, ನಾರ್ಡಿಕ್ ದೇಶಗಳು ಅತ್ಯಂತ ಹರ್ಷದಾಯಕ ಟಾಪ್ 10 ದೇಶಗಳಾಗಿ ತಮ್ಮ ಸ್ಥಾನಗಳನ್ನು ಉಳಿಸಿಕೊಂಡಿವೆ.

    ಡೆನ್ಮಾರ್ಕ್, ಐಸ್​ಲ್ಯಾಂಡ್ ಮತ್ತು ಸ್ವೀಡನ್​ಗಳು ಫಿನ್​ಲ್ಯಾಂಡ್​ಗಿಂತ ಹಿಂದುಳಿದಿವೆ. ಸಮೀಕ್ಷೆಗೆ ಒಳಪಟ್ಟ 143 ದೇಶಗಳಲ್ಲಿ 2020ರಲ್ಲಿ ತಾಲಿಬಾನ್ ಆಡಳಿತಕ್ಕೆ ಮರಳಿದ ಅಫ್ಘಾನಿಸ್ತಾನ ಕೆಳ ಹಂತದಲ್ಲಿದೆ. ಅಫ್ಘಾನಿಸ್ತಾನ, ಲೆಬನಾನ್ ಮತ್ತು ಜೋರ್ಡಾನ್​ನಲ್ಲಿ 2006-10ರ ಅವಧಿಯಲ್ಲಿ ಸಂತೋಷ ತೀವ್ರ ಕುಸಿತವಾಗಿದ್ದು, ಪೂರ್ವ ಯುರೋಪಿಯನ್ ದೇಶಗಳಾದ ಸೆರ್ಬಿಯಾ, ಬಲ್ಗೇರಿಯಾ ಮತ್ತು ಲಾಟ್ವಿಯಾಗಳ ಸ್ಥಾನ ಹೆಚ್ಚಳ ಕಂಡಿದೆ.ಅಮೆರಿಕ ಮತ್ತು ಜರ್ಮನಿಗಳು ಕ್ರಮವಾಗಿ 23 ಮತ್ತು 24ನೇ ಸ್ಥಾನ ಪಡೆದುಕೊಂಡಿವೆ. ಕೋಸ್ಟರಿಕಾ 12 ಮತ್ತು ಕುವೈತ್ 13ನೇ ಸ್ಥಾನದಲ್ಲಿದ್ದು, ವಿಶ್ವದ ಯಾವುದೇ ದೊಡ್ಡ ದೇಶಗಳು ಅಗ್ರ 20 ಸ್ಥಾನಗಳಲ್ಲಿ ಹೆಸರು ಗಿಟ್ಟಿಸಿಕೊಂಡಿಲ್ಲ.

    ಕಿರಿಯರಲ್ಲಿ ಹೆಚ್ಚು ಸಂತಸ: 2024ರ ವರದಿ ಪ್ರಕಾರ, ಪ್ರಪಂಚದ ಬಹುತೇಕ ಪ್ರದೇಶಗಳಲ್ಲಿ ಕಿರಿಯರು ಹಿರಿಯರಿ ಗಿಂತ ಹೆಚ್ಚು ಸಂತೋಷವಾಗಿದ್ದಾರೆ. ಆದರೆ, ಉತ್ತರ ಅಮೆರಿಕ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್​ನಲ್ಲಿ 2006-10ರ ಅವಧಿಯಲ್ಲಿ 30ವರ್ಷದೊಳಗಿನವರ ಸಂತಸ ಕುಸಿದಿದೆ. ಇದಕ್ಕೆ ವ್ಯತಿರಿಕ್ತವಾಗಿ ಮಧ್ಯ ಮತ್ತು ಪೂರ್ವ ಯುರೋಪ್​ನಲ್ಲಿ ಎಲ್ಲ ವಯಸ್ಸಿನ ಜನರ ಸಂತೋಷವು ಗಣನೀಯವಾಗಿ ಹೆಚ್ಚಳವಾಗಿದೆ. ಯುರೋಪ ಹೊರತುಪಡಿಸಿ ಇತರ ಪ್ರದೇಶದಲ್ಲಿ ಅಸಮಾನತೆ ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.

    ಮಾನದಂಡ ಏನು?: ಸಂತೋಷದ ಶ್ರೇಯಾಂಕವು ವ್ಯಕ್ತಿಗಳ ಜೀವನ ತೃಪ್ತಿಯ ಸ್ವಯಂ ಮೌಲ್ಯಮಾಪನವನ್ನು ಆಧರಿಸಿದೆ. ಇದರ ಜತೆಗೆ ತಲಾವಾರು ಜಿಡಿಪಿ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಭ್ರಷ್ಟಾಚಾರವನ್ನು ಮಾನದಂಡವಾಗಿಟ್ಟುಕೊಂಡು ವರದಿ ಸಿದ್ಧಪಡಿಸಲಾಗಿದೆ.

    ಪ್ರಕೃತಿಯೊಂದಿಗೆ ನಿಕಟ ಸಂಪರ್ಕ: ಫಿನ್ಲೆಂಡ್ ಪ್ರಜೆಗಳು ಪ್ರಕೃತಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದು, ಆರೋಗ್ಯಕರ ಕೆಲಸದ ಮೂಲಕ ಜೀವನವನ್ನು ಸಮತೋಲನವಾಗಿ ನಿಭಾಯಿಸುತ್ತಿದ್ದಾರೆ. ಹಾಗಾಗಿ ಅವರು ಹೆಚ್ಚು ತೃಪ್ತಿಯಾಗಿದ್ದಾರೆ ಎಂದು ಹೆಲ್ಸಿಂಕಿ ವಿಶ್ವವಿದ್ಯಾಲಯದ ಸಂಶೋಧಕ ಜೆನ್ನಿಫರ್ ಡಿ ಪಾವೊಲಾ ಹೇಳಿದ್ದಾರೆ. ಅಮೆರಿಕದಲ್ಲಿ ಯಶಸ್ಸನ್ನು ಹಣಕಾಸಿನ ಆಧಾರದ ಮೇಲೆ ಅಳೆಯುತ್ತಾರೆ. ಆದರೆ, ಫಿನ್ಲೆಂಡ್ ನಾಗರಿಕರು ಬಲಿಷ್ಠ ಸಮಾಜ, ಕಡಿಮೆ ಭ್ರಷ್ಟಾಚಾರ, ಉಚಿತ ಆರೋಗ್ಯ ಮತ್ತು ಶಿಕ್ಷಣ ಸೇರಿ ಸರ್ಕಾರದ ಮೇಲಿನ ನಂಬಿಕೆಗಳ ತಳಹದಿಯ ಮೇಲೆ ಯಶಸ್ಸು ಪರಿಗಣಿಸುತ್ತಾರೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts