More

    ಕಸ ವಿಂಗಡಿಸದಿದ್ದರೆ ತೆರಬೇಕು ದಂಡ !

    ರಾಣೆಬೆನ್ನೂರ: ಹಸಿ ಕಸ, ಒಣ ಕಸ ಬೇರ್ಪಡಿಸದೆ ಕಸದ ವಾಹನಗಳಿಗೆ ಕೊಟ್ಟರೆ ಇನ್ಮುಂದೆ ದಂಡ ಕಟ್ಟಬೇಕಾಗುತ್ತದೆ ಹುಷಾರ್…!

    ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಕೊಟ್ಟರಷ್ಟೇ ಪಡೆಯುವಂತೆ ಕಸ ಸಂಗ್ರಹಣೆಯ 24 ವಾಹನಗಳ ಪೌರ ಕಾರ್ವಿುಕರಿಗೆ ನಗರಸಭೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

    ನಗರಸಭೆ ಆಡಳಿತ ವರ್ಗಕ್ಕೆ ನಿತ್ಯ ಕಸದ್ದೇ ದೊಡ್ಡ ಸಮಸ್ಯೆಯಾಗುತ್ತಿದೆ. ನಗರದಲ್ಲಿ ಜನಬಳಕೆಯಿಂದ ಉತ್ಪತ್ತಿಯಾಗುವ ಹತ್ತಾರು ಟನ್​ಗಳಷ್ಟು ಕಸದಲ್ಲಿ ಹಸಿ ಹಾಗೂ ಒಣ ಕಸ ಬೇರ್ಪಡಿಸಲು ಪೌರ ಕಾರ್ವಿುಕರು ಹರಸಾಹಸ ಪಡುತ್ತಿದ್ದಾರೆ. ಹಸಿ ಕಸ ಬೇಗನೆ ಒಣಗುವುದಿಲ್ಲ. ಒಣ ಕಸದಿಂದ ಬೇಗನೆ ಗೊಬ್ಬರ ಮಾಡಲು ಅವಕಾಶವಿದೆ. ಆದರೆ, ನಗರ ವ್ಯಾಪ್ತಿಯಲ್ಲಿ ಕಸವು ಮಿಶ್ರಣವಾಗಿ ತ್ಯಾಜ್ಯ ಘಟಕಗಳಿಗೆ ಬರುತ್ತಿದೆ. ಇದನ್ನು ತಪ್ಪಿಸಲು ನಗರಸಭೆ ಜನ ಜಾಗೃತಿ ಕಾರ್ಯಕ್ಕೆ ಮುಂದಾಗಿದೆ.

    ಈ ಮೊದಲು ಜನರು ಕಸ ಎಲ್ಲೆಂದರಲ್ಲಿ ಬಿಸಾಡುತ್ತಿದ್ದರು. ಇದರಿಂದ ನಗರದ ಅಂದವೇ ಹಾಳಾಗಿ ಜನ ಮೂಗು ಮುಚ್ಚಿಕೊಂಡು ಓಡಾಡುವಂಥ ಪರಿಸ್ಥಿತಿ ಎದುರಾಗಿತ್ತು. ಸರ್ಕಾರವು ತ್ಯಾಜ್ಯದ ಬಗ್ಗೆಯೂ ಹೆಚ್ಚಿನ ಕಾಳಜಿ ವಹಿಸಿ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುವ ಬದಲು, ಸ್ಥಳೀಯ ಸಂಸ್ಥೆಗಳಿಂದ ಮನೆ ಮನೆಗೆ ಬರುವ ವಾಹನಗಳಿಗೆ ಕಸ ನೀಡಿ, ತ್ಯಾಜ್ಯ ಮುಕ್ತ ನಗರವನ್ನಾಗಿ ಮಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಕಸವನ್ನು ನಗರಸಭೆ ವಾಹನಕ್ಕೆ ಸಂಗ್ರಹಿಸಿಟ್ಟ ಕಸವನ್ನು ಕೊಡುತ್ತಿದ್ದಾರೆ.

    ಹಸಿ ಹಾಗೂ ಒಣ ಕಸ ಮನೆಯಿಂದಲೇ ಬೇರ್ಪಡಿಸಿ ಕೊಟ್ಟರೆ ತುಂಬ ಅನುಕೂಲವಾಗಲಿದೆ. ಇಲ್ಲದಿದ್ದರೆ ಕಸವನ್ನು ನಗರಸಭೆ ಸಿಬ್ಬಂದಿ ಒಯ್ಯುವುದಿಲ್ಲ ಎಂದು ಸೂಚನೆ ನೀಡಲಾಗಿದೆ. ಆದ್ದರಿಂದ ಈಗ ನಗರಸಭೆ ಸಿಬ್ಬಂದಿ ಮಿಶ್ರಣವಾದ ಕಸವನ್ನು ಸ್ವೀಕರಿಸುತ್ತಿಲ್ಲ.

    ಜನಜಾಗೃತಿಗಾಗಿ ಕ್ರಮ…!

    ಜನರಲ್ಲಿ ಹಸಿ, ಒಣ ಕಸದ ಬಗ್ಗೆ ಜಾಗೃತಿ ಮೂಡಿಸಬೇಕೆಂಬ ಉದ್ದೇಶದಿಂದಲೇ ಮಿಶ್ರಣವಾದ ಕಸವನ್ನು ಚಾಲಕರು ಪಡೆಯುತ್ತಿಲ್ಲ. ಕೆಲ ತಿಂಗಳ ಕಾಲ ಈ ರೀತಿ ಜಾಗೃತಿ ಮೂಡಿಸಿದರೆ, ಜನರು ತಮ್ಮ ಮನೆಯಲ್ಲಿಯೇ ಕಸ ಬೇರ್ಪಡಿಸಿ ಕೊಡಲಿದ್ದಾರೆ. ಇದೊಂದು ಜಾಗೃತಿ ಕೆಲಸವಾಗಿದೆ. ಒಂದು ವೇಳೆ ಜನ ಮಿಶ್ರಣವಾದ ಕಸವನ್ನು ಹಾಗೆಯೇ ಚೀಲದಲ್ಲಿ ಕೂಡಿಟ್ಟು ಕೊಟ್ಟರೆ ಅಂಥವರಿಗೆ ಮೊದಲು 100 ರೂ. ದಂಡ ವಿಧಿಸಲಾಗುವುದು. ನಿತ್ಯವೂ ಜನತೆ ತಪ್ಪು ಮಾಡಿದರೆ ಪ್ರತಿ ದಿನವೂ 100 ರೂ. ದಂಡ ವಿಧಿಸಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂಬುದು ನಗರಸಭೆ ಅಧಿಕಾರಿಗಳು ತಿಳಿಸಿದ್ದಾರೆ.

    ಹಸಿ ಹಾಗೂ ಒಣ ಕಸ ಬೇರ್ಪಡಿಸುವುದು ನಮಗೆ ಸವಾಲಿನ ಕೆಲಸವಾಗುತ್ತಿದೆ. ಜನರು ಮನೆಯಿಂದಲೇ ಎರಡೂ ಕಸವನ್ನು ಬೇರ್ಪಡಿಸಿ ಕೊಟ್ಟರೆ ಅನುಕೂಲ. ನಮ್ಮೆಲ್ಲ ವಾಹನಗಳಿಗೆ ಬೇರ್ಪಟ್ಟ ಕಸ ಮಾತ್ರ ಸಂಗ್ರಹಿಸುವಂತೆ ಈಗಾಗಲೇ ಸೂಚಿಸಿದ್ದೇವೆ. ಮಿಶ್ರಣದ ಕಸ ಪಡೆಯದಂತೆಯೂ ಹೇಳಿದ್ದೇವೆ. ಇನ್ಮುಂದೆ ಮಿಶ್ರಣದ ಕಸ ಕೊಟ್ಟರೆ ಅಂತಹ ಜನರಿಗೆ ದಂಡ ವಿಧಿಸಲಿದ್ದೇವೆ.
    | ಡಾ. ಎನ್. ಮಹಾಂತೇಶ, ನಗರಸಭೆ ಆಯುಕ್ತ ರಾಣೆಬೆನ್ನೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts