More

    ಕುರುಬರಿಗೆ ಶೇ 7.5 ಮೀಸಲಾತಿ ಘೊಷಿಸಿ

    ಅಜ್ಜಂಪುರ: ಪ್ರಸ್ತುತ ಎಸ್​ಟಿ ಮೀಸಲಾತಿ ಕೇವಲ ಶೇ.3 ಇದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಮೀಸಲಾತಿ ಶೇ.25ರಷ್ಟು ಸಿಗಬೇಕು ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು.

    ಚೌಳಹಿರಿಯೂರು ಗ್ರಾಮದಲ್ಲಿ ಗುರುವಾರ ಭೋಗನಂಜುಂಡೇಶ್ವರ ಸ್ವಾಮಿ ವಿಶ್ವಸ್ಥ ಮಂಡಳಿ, ಕಡೂರು ತಾಲೂಕು ಗ್ರಾಮೀಣ ಕುರುಬರ ಸಂಘ, ಅಜ್ಜಂಪುರ ತಾಲೂಕು ಕನಕ ನೌಕರ ಸಂಘ ಕಾರ್ಯಕ್ರಮ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ಶೇ.25 ಮೀಸಲಾತಿಯಲ್ಲಿ ಕುರುಬರಿಗೆ ಶೇ.7.5 ಮೀಸಲಿಡಬೇಕು. ಇಂತಹ ಮೀಸಲಾತಿ ಹೋರಾಟಕ್ಕೆ ನನ್ನ ಬೆಂಬಲವಿದೆ ಎಂದರು.

    ಮುಖ್ಯಮಂತ್ರಿ ಆಗಿದ್ದ ಸಂದರ್ಭ ರಾಜ್ಯದಲ್ಲಿ ಶೋಷಿತರ ಪರ ಏಕಾಂಗಿಯಾಗಿ ಹೋರಾಡಿದ್ದೆ. ರಾಜಕೀಯ ಮೀಸಲಾತಿ ತಂದು ಪ್ರತಿಯೊಬ್ಬರಿಗೂ ನ್ಯಾಯ ಕೊಟ್ಟಿದ್ದೇನೆ. ಇಂದು ಯಾರಿಂದಲೂ ಮೀಸಲಾತಿಯ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದು ತಿಳಿಸಿದರು.

    ಪ್ರತಿಯೊಬ್ಬ ವ್ಯಕ್ತಿ ಶಿಕ್ಷಣ ಪಡೆದಾಗ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಸಮಾನತೆ ಬಂದಾಗ ಮಾತ್ರ ಮನುಷ್ಯ ಉನ್ನತಿ ಸಾಧ್ಯ. ಕನಕ ಜಯಂತಿ ಆಚರಣೆ ಕುರುಬ ಸಮುದಾಯಕ್ಕೆ ಮೀಸಲಲ್ಲ. ಅವರ ಆಚಾರ, ವಿಚಾರಗಳು ಜಾತಿ ವ್ಯವಸ್ಥೆ ಮೀರಿದವು. ಇವು ಇಂದಿನ ಯುವಪೀಳಿಗೆಗೆ ಮಾದರಿಯಾಗಬೇಕು ಎಂದು ಹೇಳಿದರು.

    ಯಾರಿಂದಲೋ ಕಾಯ್ದೆ ಬಗ್ಗೆ ತಿಳಿಯುವ ಅಗತ್ಯವಿಲ್ಲ: ಗೋವಿನ ಬಗ್ಗೆ ಯಾವುದೇ ಮಾಹಿತಿಯಿಲ್ಲದ ಗಿರಾಕಿಗಳಿಂದ ಗೋಹತ್ಯೆ ನಿಷೇಧ ಕಾಯ್ದೆ ಬಗ್ಗೆ ತಿಳಿಯುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು. ವಯಸ್ಸಾದ ಹಸು, ಎಮ್ಮೆಗಳನ್ನು ಸಾಕುವವರ್ಯಾರು? ಇದಕ್ಕೆ ರಾಜ್ಯ ಯಾವ ಕ್ರಮ ಕೈಗೊಳ್ಳಲಿದೆ ಎಂಬುದಕ್ಕೆ ಉತ್ತರ ಕೋಡಬೇಕು ಎಂದು ಒತ್ತಾಯಿಸಿದರು. ನಾನು ಮುಖ್ಯಮಂತ್ರಿಯಾದಾಗ ಕುರಿ ಸತ್ತರೆ 5 ಸಾವಿರ, ಹಸು, ಎಮ್ಮೆ ಸತ್ತರೆ 10 ಸಾವಿರ ರೂ. ಕೊಡಲು ನಿರ್ಣಯ ಮಾಡಿದ್ದೆವು. ಇಂದಿನ ಸರ್ಕಾರ ಅದನ್ನು ನಿಲ್ಲಿಸಿದೆ. ಇಂಥವರು ಗೋಹತ್ಯೆ ಬಗ್ಗೆ ಮಾತನಾಡುವುದು ಎಷ್ಟು ಸರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

    ಕುರುಬ ಸಮಾಜದ ಒಡಕಿಗೆ ನಿಂತ ಈಶ್ವರಪ್ಪ: ರಾಜಕೀಯ ಕಾರಣಗಳಿಗಾಗಿಯೇ ಸಿದ್ದರಾಮಯ್ಯ ಅವರನ್ನು ಕೆ.ಎಸ್.ಈಶ್ವರಪ್ಪ ತೆಗಳುತ್ತಿದ್ದಾರೆ. ಕುರುಬ ಸಮಾಜದ ಒಡಕಿಗೆ ಈಶ್ವರಪ್ಪ ನಿಂತಿದ್ದಾರೆ ಎಂದು ಹೆಬ್ಬಾಳ ಶಾಸಕ ಬೈರತಿ ಸುರೇಶ್ ಆರೋಪಿಸಿದರು.

    ಮೂರು ಬಾರಿ ಸಚಿವರಾಗಿದ್ದ ಈಶ್ವರಪ್ಪ, ಕುರುಬ ಸಮಾಜಕ್ಕೆ ಏನೂ ಮಾಡಿಲ್ಲ. ಅವರದ್ದೇ ಸರ್ಕಾರದ ಕ್ಯಾಬಿನೆಟ್​ನಲ್ಲಿ ಎಸ್​ಟಿ ಮೀಸಲಾತಿ ಬಗ್ಗೆ ಚಕಾರವೆತ್ತದ ಅವರ ಹೋರಾಟ ಯಾರ ವಿರುದ್ಧ ಎಂದು ಪ್ರಶ್ನಿಸಿದರು.

    ಎಸ್​ಟಿ ಹೋರಾಟಕ್ಕೆ ಸಿದ್ದರಾಮಯ್ಯ ಬೆಂಬಲವಿದೆ. ಹೋರಾಟದ ದಿಕ್ಕಿನ ಬಗ್ಗೆ ಅಸಮಾಧಾನವಿದೆ. ಎಸ್​ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿ ಕುರುಬರಿಗೆ ಶೇ.7.5 ಕಲ್ಪಿಸಬೇಕು ಎಂಬುದು ಅವರ ಧ್ಯೇಯ. ನಾವೆಲ್ಲ ಸಿದ್ದರಾಮಯ್ಯ ನಾಯಕತ್ವದಲ್ಲಿ ಸಮಾಜ ಕಟ್ಟೋಣ ಎಂದು ಮನವಿ ಮಾಡಿದರು.

    ಕೆ.ಆರ್.ನಗರ ಕನಕ ಗುರುಪೀಠದ ಶಿವಾನಂದಪುರಿ ಸ್ವಾಮೀಜಿ, ಬಿ.ವಿ.ನಗರದ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಯಾದವ ಗುರುಪೀಠದ ಕೃಷ್ಣಯಾದವಾನಂದ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭೋಗನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಅಧ್ಯಕ್ಷ ಎಚ್.ಸಿ.ರುದ್ರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಹೆಬ್ಬಾಳ ಶಾಸಕ ಬೈರತಿ ಸುರೇಶ್, ಹೊಸದುರ್ಗ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಮಾಜಿ ಶಾಸಕ ಜಿ.ಎಚ್.ಶ್ರೀನಿವಾಸ್, ಟಿ.ಎಚ್.ಶಿವಶಂಕರಪ್ಪ, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಜಿಪಂ ಸದಸ್ಯೆ ವನಮಾಲಾ ದೇವರಾಜ್, ರೇಣುಕಾ ನಟರಾಜ್, ರೇಖಾ ಹುಲಿಯಪ್ಪ ಗೌಡ, ಜಿಪಂ ಮಾಜಿ ಅಧ್ಯಕ್ಷ ಎಸ್.ತಿಪ್ಪೇರುದ್ರಯ್ಯ, ಮಾಜಿ ಸದಸ್ಯ ಎಂ.ಕೃಷ್ಣಮೂರ್ತಿ, ಬೋಗನಂಜುಂಡೇಶ್ವರ ವಿಶ್ವಸ್ಥ ಮಂಡಳಿ ಕಾರ್ಯದರ್ಶಿ ಎಚ್.ಟಿ.ಕೃಷ್ಣಮೂರ್ತಿ, ಪ್ರಕಾಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts