More

    ಸಮಸ್ಯೆ ಬಗೆಹರಿಸದಿದ್ದರೆ ಹೋರಾಟ

    ಮಳವಳ್ಳಿ: ಪಟ್ಟಣದ ನಮ್ಮ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಕಸ ವಿಲೆವಾರಿಯಾಗದೆ ಅಶುಚಿತ್ವದಿಂದ ಕೂಡಿದೆ. ಹಂದಿ, ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನಸಾಮಾನ್ಯರ ನಿಂದನೆ ಕೇಳಬೇಕಿದೆ. ಈ ಎಲ್ಲ ಸಮಸ್ಯೆಗಳಿಗೆ ಮುಕ್ತಿ ಸಿಗಲಿಲ್ಲವೆಂದರೆ ಜನರೊಡನೆ ಪುರಸಭೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪುರಸಭಾ ಸದಸ್ಯರು ಎಚ್ಚರಿಕೆ ನೀಡಿದರು.

    ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಮಂಗಳವಾರ ಪುರಸಭೆ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಪುರಸಭೆಯ ಸದಸ್ಯರು ಒಕ್ಕೊರಲಿನಿಂದ ಮುಖ್ಯಾಧಿಕಾರಿ ನಾಗರತ್ನಾ ಹಾಗೂ ಆಡಳಿತ ವರ್ಗದ ವಿರುದ್ಧ ಪಟ್ಟಣದಲ್ಲಿನ ಸಮಸ್ಯೆಗಳ ಸುರಿಮಳೆಗೈದು ಕಿಡಿಕಾರಿದರು.

    ಸಭೆ ಆರಂಭವಾಗುತ್ತಿದ್ದಂತೆ ವಾರ್ಡ್‌ಗಳಲ್ಲಿನ ಮೂಲಸೌಕರ್ಯಗಳ ಕೊರತೆ ಹಾಗೂ ಸಮಸ್ಯೆ ಬಗ್ಗೆ ಸದಸ್ಯರು ಬೆಳಕು ಚೆಲ್ಲಿದರು. ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿ ವರ್ಗದವರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಬೀದಿದೀಪ ಸೇರಿದಂತೆ ಇತರ ಅಭಿವೃದ್ಧಿಗೆ ಬಿಡುಗಡೆ ಯಾಗಿರುವ ಅನುದಾನವನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಕೇಳಿದರೆ ಟೆಂಡರ್ ಕರೆದು ಬಗೆಹರಿಸಲಾಗುವುದು ಎಂದು ಹೇಳುತ್ತಾರೆಯೇ ವಿನಹ ಯಾವುದೇ ಪ್ರಗತಿ ಕಂಡಿಲ್ಲ. ಮುಖ್ಯಾಧಿಕಾರಿ ಪಟ್ಟಣದ ವಾರ್ಡ್‌ಗಳ ವೀಕ್ಷಣೆಗೆ ಬಂದಿಲ್ಲ. ನಿಗದಿತ ಸಮಯಕ್ಕೆ ಕಚೇರಿಗೆ ಬರುತ್ತಿಲ್ಲ. ಇದರಿಂದ ಆಡಳಿತಾತ್ಮಕ ತೊಡಕಾಗುತ್ತಿದೆ ಎಂದು ಆರೋಪಿಸಿದರು.

    ಮುಖ್ಯಾಧಿಕಾರಿ ನಾಗರತ್ನ ಅವರಿಂದ ಸ್ಪಷ್ಟನೆ ಪಡೆದು ಮಾತನಾಡಿದ ಆಡಳಿತಾಧಿಕಾರಿ ಶಿವಮೂರ್ತಿ, ಪಟ್ಟಣದಲ್ಲಿರುವ ಕುಡಿಯುವ ನೀರಿನ ಮತ್ತು ಕಸ ವಿಲೇವಾರಿ ಮಾಡಲು ತುರ್ತು ಕ್ರಮ ತೆಗೆದುಕೊಳ್ಳಲಾಗುವುದು. ಖಾಸಗಿ ಟೆಲಿಕಾಂ ಸಂಸ್ಥೆಯರಿಗೆ ನೋಟಿಸ್ ನೀಡಿ ಫೈಬರ್ ಕೇಬಲ್ ಅಳವಡಿಸಲು ಸೂಕ್ತ ಸುಂಕ ಕಟ್ಟಿಸಿಕೊಂಡು ಅನುಮತಿ ಕೊಡಲು ಕ್ರಮ ವಹಿಸಲಾಗುವುದು. ಹೋಟೆಲ್, ಮಾಂಸ ಮಾರಾಟ, ತರಕಾರಿ, ದಿನಸಿ ಅಂಗಡಿ ಮಾಲೀಕರ ಸಭೆ ಕರೆದು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವಂತೆ ಸಭೆಯಲ್ಲಿದ್ದ ಆರೋಗ್ಯ ಅಧಿಕಾರಿಗೆ ಸೂಚಿಸಿದರು.

    ಸಂತೆ ಮೈದಾನದಲ್ಲಿ ಮೂಲಸೌಲಭ್ಯಗಳನ್ನು ಕಲ್ಪಿಸಲು ಕ್ರಮ ತೆಗೆದುಕೊಳ್ಳಲಾಗುವುದು. ಬೀದಿ ನಾಯಿಗಳನ್ನು ಹಿಡಿಯಲು ಟೆಂಡರ್ ನೀಡಲಾಗಿದೆ. ಹಂದಿಗಳ ಹಾವಳಿ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

    ಪ್ರತಿಧ್ವನಿಸಿದ ವಿಜಯವಾಣಿ ವರದಿ: ‘ಮಳವಳ್ಳಿಯಲ್ಲಿ ಬೀದಿನಾಯಿ, ಹಂದಿಗಳ ಹಾವಳಿ’ ಶೀರ್ಷಿಕೆಯಡಿ ಜ.8ರಂದು ವಿಜಯವಾಣಿಯಲ್ಲಿ ಪ್ರಕಟವಾಗಿದ್ದ ವರದಿಯನ್ನು ನಂದಕುಮಾರ್ ಸಭೆಯಲ್ಲಿ ಪ್ರಸ್ತಾಪಿಸಿದರು. ಪಟ್ಟಣದಲ್ಲಿ ಹಂದಿ, ನಾಯಿಗಳ ಹಾವಳಿಯಿಂದ ಜನಸಾಮಾನ್ಯರಲ್ಲಿ ಆತಂಕ ಹೆಚ್ಚಾಗಿದೆ. ಈ ಬಗ್ಗೆ ಹಲವು ಬಾರಿ ಹಿಂದಿನ ಸಭೆಗಳಲ್ಲಿ ಗಮನಕ್ಕೆ ತಂದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆಡಳಿತ ವರ್ಗದ ನಿರ್ಲಕ್ಷೃದಿಂದಾಗಿ ಜನಪ್ರತಿನಿಧಿಗಳಾದ ನಾವು ಜನರಿಂದ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ ಎಂದು ಕಿಡಿಕಾರಿದರು. ಇದಕ್ಕೆ ಪ್ರಶಾಂತ್, ನೂರುಲ್ಲ, ಕೃಷ್ಣ, ಪುಟ್ಟಸ್ವಾಮಿ, ಶಿವಸ್ವಾಮಿ ಸೇರಿದಂತೆ ಹವಲರು ದನಿಗೂಡಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts