More

    ನರ್ಸ್ ಮನೆಯಲ್ಲಿಯೇ ಭ್ರೂಣಹತ್ಯೆ !

    ಮುದ್ದೇಬಿಹಾಳ: ತಾಲೂಕಿನ ಹುಲ್ಲೂರು ಗ್ರಾಮದ ಮನೆಯೊಂದರಲ್ಲಿ ಸರ್ಕಾರಿ ಆಸ್ಪತ್ರೆಯ ನರ್ಸ್‌ಗಳಿಂದಲೇ ನಡೆಯುತ್ತಿದ್ದ ಕಾನೂನು ಬಾಹಿರ ಗರ್ಭಪಾತ, ಭ್ರೂಣಹತ್ಯೆ ಕುರಿತು ಆಯೋಗದಿಂದ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುವುದಾಗಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ತಿಳಿಸಿದರು.

    ಕಾನೂನುಬಾಹಿರ ಗರ್ಭಪಾತ ಪ್ರಕರಣ ಬೆಳಕಿಗೆ ಬಂದಿರುವ ಹುಲ್ಲೂರು ಗ್ರಾಮದ ನರ್ಸ್ ಸಾವಿತ್ರಿ ಭಜಂತ್ರಿ ಅವರ ಮನೆಗೆ ಬುಧವಾರ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ, ಮನೆಯ ಮೇಲ್ಭಾಗದಲ್ಲಿಡಲಾಗಿದ್ದ ಗರ್ಭಪಾತಕ್ಕೆ ಬಳಸುತ್ತಿದ್ದ ವೈದ್ಯಕೀಯ ಉಪಕರಣ, ತ್ಯಾಜ್ಯ ಮತ್ತು ತಾಲೂಕು ಆರೋಗ್ಯಾಧಿಕಾರಿಯ ವರದಿ ಪರಿಶೀಲಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಸ್ತ್ರೀ ಸಮಾನತೆಗೆ ಹೋರಾಟ ಮಾಡಿರುವ ಬಸವಣ್ಣನ ಈ ನಾಡಿನಲ್ಲಿ ಭ್ರೂಣಹತ್ಯೆಯಂಥ ಕರಾಳ ದಂಧೆ ನಡೆಯುತ್ತಿರುವುದು ತಲೆತಗ್ಗಿಸುವಂಥದ್ದು. ಈ ಪ್ರಕರಣ ಕುರಿತು ವರದಿ ತರಿಸಿಕೊಳ್ಳುವಂತೆ ಆಯೋಗದ ಆಯುಕ್ತರಿಗೆ ಪತ್ರ ಬರೆದು ಸೂಚಿಸುತ್ತೇನೆ. ಅಧಿಕಾರಿಗಳ ವರದಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು ಎಂದರು.

    ಸರ್ಕಾರಿ ಆಸ್ಪತ್ರೆಯಲ್ಲಿರಬೇಕಾದ ಉಚಿತ ಪೂರೈಕೆಯ ವಸ್ತುಗಳು ನರ್ಸ್ ಒಬ್ಬರ ಮನೆಯಲ್ಲಿ ಸಿಗುತ್ತಿವೆ. ನರ್ಸ್ ತನ್ನ ಮನೆಯನ್ನೇ ಗರ್ಭಪಾತಕ್ಕೆ ಬಳಸಿಕೊಳ್ಳುತ್ತಿರುವುದು ಆಘಾತಕಾರಿ ಬೆಳವಣಿಗೆ. ಆಯೋಗದಿಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ. ಮಂಡ್ಯದ ಆಲೆಮನೆಯಲ್ಲಿ ಭ್ರೂಣಹತ್ಯೆ ಕುರಿತಾದ ಸಿಐಡಿ ತನಿಖೆ ಪ್ರಗತಿಯಲ್ಲಿರುವಾಗಲೇ ಇಲ್ಲಿಬ್ಬರು ಸರ್ಕಾರಿ ನರ್ಸಗಳೇ ಜೀವ ತೆಗೆಯುವ ಕೆಲಸ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು.

    ನೆಲಮಟ್ಟದಲ್ಲಿ ಕೆಲಸ ಮಾಡುವ ಆಶಾ ಕಾರ್ಯಕರ್ತೆಯರಿಗೆ ಯಾರು ಕಾನೂನು ಬಾಹಿರವಾಗಿ ಗರ್ಭಪಾತ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇರುತ್ತದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಆಶಾ ಕಾರ್ಯಕರ್ತೆಯರ ಮೂಲಕ ಅನಧಿಕೃತವಾಗಿ ಗರ್ಭಪಾತದಲ್ಲಿ ತೊಡಗಿದವರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಕೊಳ್ಳಬೇಕು. ಮುದ್ದೇಬಿಹಾಳದಲ್ಲಿ ಪತ್ತೆ ಆಗಿರುವ ಕಾನೂನುಬಾಹಿರ ಗರ್ಭಪಾತ ಪ್ರಕರಣದಲ್ಲಿ ವೈಫಲ್ಯ ಕಂಡು ಬಂದಿರುವ ಸಂಬಂಧಿಸಿದ ಆಶಾ ಕಾರ್ಯಕರ್ತೆಯರಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದರು.

    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾಕ್ಷಿ ಜಾನಕಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸತೀಶ ತಿವಾರಿ, ಸಿಡಿಪಿಒ ಶಿವಮೂರ್ತಿ ಕುಂಬಾರ, ಎಎಸ್‌ಐ ಕೆ.ಎಸ್. ಅಸ್ಕಿ, ಮುಖ್ಯಪೇದೆ ಎಸ್.ಜಿ. ಬನ್ನೆಟ್ಟಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts