More

    ಹೆಣ್ಣು ಭ್ರೂಣ ಹತ್ಯೆಗೆ ಆಕ್ರೋಶ: ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ

    ಮಂಡ್ಯ: ಹೆಣ್ಣು ಭ್ರೂಣ ಹತ್ಯೆ ವಿರೋಧಿಸಿ ನಗರದಲ್ಲಿ ಮಹಿಳಾ ಮುನ್ನಡೆ, ವಿಮೋಚನಾ ಮಹಿಳಾ ಸಂಘಟನೆ, ರಾಜ್ಯ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಹಾಗೂ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
    ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಜಮಾಯಿಸಿದ ಸಂಘಟನೆ ಪದಾಧಿಕಾರಿಗಳು, ಬಳಿಕ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಡಿಸಿ ಡಾ.ಕುಮಾರ ಅವರಿಗೆ ಮನವಿ ಸಲ್ಲಿಸಿದರು.
    ಜಿಲ್ಲೆಯ ಹಾಡ್ಯ ಗ್ರಾಮದಲ್ಲಿ ಹೆಣ್ಣು ಭ್ರೂಣ ಪತ್ತೆ ಮತ್ತು ಹತ್ಯೆ ಮಾಡುವ ಕರಾಳ ದಂಧೆ ನಡೆದಿದೆ. ಆದರೂ ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಬೇಜವಾಬ್ದಾರಿ ತೋರಿದೆ. ದಂಧೆಕೋರರು ಸಾಕ್ಷ್ಯ ನಾಶ ಮಾಡಿಕೊಳ್ಳಲು ಅನುಕೂಲವಾಗುವಂತೆ ಅಧಿಕಾರಿಗಳು ವಿಳಂಬವಾಗಿ ಸ್ಥಳಕ್ಕೆ ತೆರಳಿದ್ದರು. ಇದನ್ನು ನೋಡಿದರೆ ಪ್ರಕರಣ ಮುಚ್ಚಿ ಹಾಕುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
    ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರೂ ಆರೋಪಿಗಳಿಗೆ ಜಾಮೀನು ಸಿಕ್ಕಿ ಜೈಲಿನಿಂದ ಹೊರ ಬರುತ್ತಿರುವುದು ಸರಿಯಾದ ಕ್ರಮವಲ್ಲ. ಸಾಕ್ಷ್ಯ ನಾಶ ಮಾಡಲು ತಾವೇ ಅವಕಾಶ ಒದಗಿಸಿದಂತೆ ಆಗುತ್ತದೆ. ಇದಕ್ಕೆ ಎಡೆಮಾಡಿಕೊಡದೆ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
    ಹೆಣ್ಣು ಭ್ರೂಣ ಹತ್ಯೆ ಜಾಲ ರಾಜ್ಯದ ಎಲ್ಲೆಡೆ ವಿಸ್ತರಿಸಿದ್ದು, ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಭ್ರೂಣ ಪತ್ತೆ ನಿಷೇಧ ಕಾಯ್ದೆ ಅನ್ವಯ ಕಾನೂನು ಕ್ರಮ ವಹಿಸಬೇಕು. ಕಾಯ್ದೆ ಉಲ್ಲಂಘಿಸುವ ವೈದ್ಯರು ಮತ್ತು ಸ್ಕ್ಯಾನಿಂಗ್ ಸೆಂಟರ್‌ಗಳ ಪರವಾನಗಿ ಶಾಶ್ವತವಾಗಿ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
    ಜಿಲ್ಲೆಯ ಪಿ.ಸಿ ಮತ್ತು ಪಿಎನ್‌ಡಿಟಿ ಖಾತೆಯಲ್ಲಿ ಹಣ ಇದ್ದರೂ ಜಾಗೃತಿ ಆಂದೋಲನ ಆಯೋಜಿಸಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸಬೇಕು. ಹಾಡ್ಯ ಪ್ರಕರಣದಲ್ಲಿ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯ ಕಂಡುಬಂದಿದ್ದು, ಸಂಬಂಧಪಟ್ಟವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
    ಸ್ಕಾೃನಿಂಗ್ ಸೆಂಟರ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ದಾಖಲೆ ಪರಿಶೀಲಿಸಿ ನ್ಯೂನತೆ ಕಂಡುಬಂದರೆ ದೂರು ದಾಖಲಿಸಬೇಕು. 900ಕ್ಕೂ ಹೆಚ್ಚು ಹೆಣ್ಣು ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಕುಟುಂಬ, ಸಂಬಂಧಿಕರು ಹಾಗೂ ಏಜೆಂಟ್‌ಗಳನ್ನು ಪತ್ತೆ ಹಚ್ಚಿ ಕ್ರಮ ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಹಾಗೂ ಪ್ರಗತಿ ಪರ ಸಂಘಟನೆಗಳ ಮುಖಂಡರ ಸಭೆ ಕರೆದು ಸಲಹೆ ಪಡೆಯಬೇಕು. ವಿಳಂಬ ನೋಂದಣಿ ಮಾಡಿಸುವ ಗರ್ಭಿಣಿಯರ ಮೇಲೆ ನಿಗಾ ಇರಿಸಿ ಅರಿವು ಮೂಡಿಸಬೇಕು. ಜಿಲ್ಲಾ ಮಟ್ಟದಲ್ಲಿ ದೂರು ನೀಡಲು ಜಿಲ್ಲಾ ಸಹಾಯವಾಣಿ ಕೇಂದ್ರ ತೆರಯಬೇಕು ಎಂದು ಮನವಿ ಮಾಡಿದರು.
    ವಿಮೋಚನಾ ಮಹಿಳಾ ಸಂಘಟನೆಯ ಜಿಲ್ಲಾ ಸಂಚಾಲಕ ಜನಾರ್ಧನ್, ಸಿಐಟಿಯುನ ಸಿ.ಕುಮಾರಿ, ಜನವಾದಿ ಮಹಿಳಾ ಸಂಘಟನೆಯ ಡಿ.ಕೆ.ಲತಾ, ರಾಣಿ, ಸುಶೀಲಾ, ರೈತ ಸಂಘದ ಸುನಂದಾ ಜಯರಾಂ, ವಕೀಲೆ ಎಚ್.ಎಸ್.ನಾಗರತ್ನಮ್ಮ, ಪೂರ್ಣಿಮಾ, ಲಕ್ಷ್ಮೀ, ಮುತ್ತಮ್ಮ, ನಾಗಮ್ಮ, ಮಹಾದೇವಮ್ಮ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts