ಬೈಲಹೊಂಗಲ: ಪುರಾತನ ಕಾಲದಿಂದಲೂ ಹೆಣ್ಣಿಗೆ ಗೌರವಪೂರ್ವಕ ಸ್ಥಾನವಿದ್ದು, ಹೆಣ್ಣಿನ ಅವಹೇಳನ ಅತ್ಯಂತ ಕಳವಳಕಾರಿ ಸಂಗತಿ ಎಂದು ರಾಜ್ಯ ವಿಜ್ಞಾನ ಪರಿಷತ್ ಕಾರ್ಯಕಾರಿ ಸಮಿತಿ ನಿರ್ದೇಶಕಿ ಮೀನಾಕ್ಷಿ ಕುಡಸೋಮಣ್ಣವರ ಹೇಳಿದ್ದಾರೆ.
ಪಟ್ಟಣದ ಗಣಾಚಾರಿ ಶಿಕ್ಷಣ ಸಂಸ್ಥೆಯ ಅಕ್ಕಮ ಹಾದೇವಿ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯ, ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಆಶ್ರಯದಲ್ಲಿ ಈಚೆಗೆ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭದಲ್ಲಿ ಮಾತನಾಡಿದರು.
ಮಹಿಳಾ ಸೈನ್ಯ ಕಟ್ಟಿ ಶಿವಾಜಿಯೊಂದಿಗೆ ಹೋರಾಡಿದ ವೀರವನಿತೆ ಬೆಳವಡಿ ಮಲ್ಲಮ್ಮ, ಬ್ರಿಟಿಷರನ್ನು ಸೋಲಿಸಿದ ವೀರರಾಣಿ ಕಿತ್ತೂರು ಚನ್ನಮ್ಮ, ಒನಕೆ ಒಬ್ಬವ್ವ ಅವರ ಧೈರ್ಯ, ಸಾಹಸ ಮಹಿಳೆಯರಿಗೆ ಸ್ಫೂರ್ತಿ. ಮಹಿಳೆಯರು ಬದುಕಿನಲ್ಲಿ ಸ್ವಾವಲಂಬಿಯಾಗಿ ಬದುಕಿ ತೋರಿಸಬೇಕು ಎಂದರು.
ಉಪನ್ಯಾಸಕಿ ವಿನೋದಾ ಅಂಗಡಿ ಮಾತನಾಡಿ, ಅಡುಗೆ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಪ್ರತಿ ಕ್ಷೇತ್ರದಲ್ಲಿ ಗಣನೀಯ ಸಾಧನೆಗೈಯುತ್ತಿದ್ದು ಹೆಮ್ಮೆಯ ವಿಷಯವಾಗಿದೆ. ತಾಯಂದಿರು ತಮ್ಮ ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ಪ್ರಯತ್ನಿಸಬೇಕಾಗಿದೆ. ಆ ಮೂಲಕ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು ಎಂದು ತಿಳಿಸಿದರು.
ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಕುಡಸೋಮಣ್ಣವರ, ಸಂಸ್ಥೆಯ ಆಡಳಿತಾಧಿಕಾರಿಎಂ.ಎಚ್. ಪೆಂಟೇದ, ಮಹಾಂತೇಶ ರಾಜಗೋಳಿ ಮಾತನಾಡಿದರು.
ಪ್ರಾಚಾರ್ಯ ಡಾ. ಸಿ.ಬಿ.ಗಣಾಚಾರಿ ಅಧ್ಯಕ್ಷತೆ ವಹಿಸಿದ್ದರು. ಮೀನಾಕ್ಷಿ ಕುಡಸೋಮಣ್ಣವರ, ಮಹಾಂತೇಶ ರಾಜಗೋಳಿ ಸತ್ಕರಿಸಲಾಯಿತು. ಉಪನ್ಯಾಸಕಿ ಭಾರತಿ ಪಾಟೀಲ, ಸವಿತಾ ರೊಟ್ಟಿ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶ್ರೀದೇವಿ ಪಡೆಣ್ಣವರ ಸ್ವಾಗತಿಸಿದರು. ಅಕ್ಷತಾ ಕುರುಬರ ನಿರೂಪಿಸಿದರು. ಅಕ್ಷತಾ ಸೂರ್ಯವಂಶಿ ವಂದಿಸಿದರು.