More

    ಕ್ಯಾನ್ಸರ್ ಗೆದ್ದು 84ನೇ ವಸಂತಕ್ಕೆ ಪದಾರ್ಪಣೆ; 14 ವರ್ಷಗಳ ನಡಿಗೆಯೇ ಇವರ ಆರೋಗ್ಯದ ಗುಟ್ಟು..

    ಬೆಂಗಳೂರು: ಕ್ಯಾನ್ಸರ್​ನಿಂದ ಬಳಲಿದರೂ ಅದನ್ನು ಯಶಸ್ವಿಯಾಗಿ ಹಿಮ್ಮೆಟ್ಟಿ 84ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿರಿಯ ಪತ್ರಕರ್ತ ಎಸ್​.ಕೆ. ಶೇಷಚಂದ್ರಿಕಾ ಅವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯುಜೆ) ಗೌರವ ಸಲ್ಲಿಸಿ, ಸನ್ಮಾನಿಸಿದೆ.

    75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಕೆಯುಡಬ್ಲ್ಯುಜೆ ಹಿರಿಯ ಪತ್ರಕರ್ತರನ್ನು ಗೌರವಿಸುವ ಮನೆಯಂಗಳದಲ್ಲಿ ಮನದುಂಬಿ ನಮನ ಸರಣಿ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಲಾಯಿತು.

    1960ರ ದಶಕದಲ್ಲಿ ಮುಂಬೈಯಲ್ಲಿ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ಮೂಲಕ ಸುದ್ದಿಮನೆಯಲ್ಲಿ ಪ್ರವೇಶ ಮಾಡಿ ಜನವಾಣಿ, ಪ್ರಜಾಮತ, ಸಂಯುಕ್ತ ಕರ್ನಾಟಕ, ಆಕಾಶವಾಣಿ, ದೂರದರ್ಶನ ಸೇರಿ ಹಲವು ಕಡೆ ನಾನಾ ಹಂತದಲ್ಲಿ ಕೆಲಸ ಮಾಡಿರುವ ಸ್ಮರಣೀಯ ದಿನಗಳನ್ನು ಅವರು ಇದೇ ವೇಳೆ ನೆನಪು ಮಾಡಿಕೊಂಡರು.

    ತಮ್ಮ ಅನಾರೋಗ್ಯದ ಸಂದರ್ಭ ಹಾಗೂ ಅದನ್ನು ಮೀರಿ ಬದುಕಿದ ಕುರಿತು ಕೂಡ ಅವರು ಈ ವೇಳೆ ಮಾತನಾಡಿದರು. ಬೆಂಗಳೂರು ಪ್ರೆಸ್​ಕ್ಲಬ್​ನಿಂದ ವಿದ್ಯಾಪೀಠದ ಬಳಿ ಇರುವ ನನ್ನ ಮನೆಗೆ ಎರಡು ಗಂಟೆಗಳ ನಡಿಗೆ. ಸತತ 14 ವರ್ಷಗಳ ಕಾಲ ನಡೆದೇ ಮನೆಗೆ ಬರುತ್ತಿದ್ದೆ. ಅದೇ ನನ್ನ ಆರೋಗ್ಯದ ಗುಟ್ಟು. ಆಪರೇಷನ್ ಆಗಿದ್ದರೂ ಎದೆಗುಂದದೆ ಕ್ಯಾನ್ಸರ್ ಎದುರಿಸಲು ನನಗೆ ಆ ಮನೋಬಲದಿಂದಲೇ ಸಾಧ್ಯವಾಯಿತು. ಈ ಸಂದರ್ಭದಲ್ಲಿ ನನ್ನ ಪತ್ನಿ ಪರಿಮಳ ಮತ್ತು ಮಕ್ಕಳು ಹಾಗೂ ಕುಟುಂಬ ನೀಡಿದ ಸಹಕಾರ ಮರೆಯಲಾಗದು ಎಂದು ಹೇಳಿದರು.

    ಇನ್ನು ಮಾಧ್ಯಮದ ಅನುಭವಗಳ ಕುರಿತು ಹೇಳಿಕೊಂಡ ಅವರು, ಪತ್ರಕರ್ತರಿಗೆ ಸಹನೆ-ವಿವೇಚನೆ ಮುಖ್ಯ. ಸುದ್ದಿಮನೆಯಲ್ಲಿ ಯಾವುದೇ ಕೆಲಸ ಮಾಡುವಾಗಲೂ ತಮ್ಮದೇ ಆದ ರೀತಿಯಲ್ಲಿ ಪೂರ್ವತಯಾರಿ ಮಾಡಿಕೊಂಡು ಕೆಲಸ ಮಾಡುವುದನ್ನು ಕಲಿಯಬೇಕು ಎಂದರು.

    ಕೆಯುಡಬ್ಲ್ಯುಜೆ ಪತ್ರಕರ್ತರೆಲ್ಲರ ಸಾಂಘಿಕ ವೇದಿಕೆ. ಈ ಸಂಘಕ್ಕೆ ತನ್ನದೇ ಆದ ಚಾರಿತ್ರಿಕ ಇತಿಹಾಸವಿದೆ. ಆ ಇತಿಹಾಸವನ್ನು ಮರಳಿ ನೆನಪಿಸುವ, ವೃತ್ತಿಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರ ನೇತೃತ್ವದಲ್ಲಿ ಮಾಡುತ್ತಿರುವುದು ಶ್ಲಾಘನೀಯ. ವಿಶೇಷವಾಗಿ ಕಷ್ಟದಲ್ಲಿರುವ ಪತ್ರಕರ್ತರಿಗೆ ನೆರವಾಗುತ್ತಿರುವ ಪರಿ ನನಗೆ ಅಚ್ಚರಿ ಉಂಟುಮಾಡಿದೆ. ಅಷ್ಟೊಂದು ಪತ್ರಕರ್ತರಿಗೆ ಪರಿಹಾರವನ್ನು ತಗಡೂರು ಅವರು ಕೊಡಿಸಿರುವುದು ಹೆಮ್ಮೆಯ ಸಂಗತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಹಿರಿಯ ಪತ್ರಕರ್ತ‌ ಈಶ್ವರ ದೈತೋಟ ಅವರು ಮಾತನಾಡಿ, ಹಿರಿಯರಾಗಿರುವ ಶೇಷಚಂದ್ರಿಕಾ ಅವರನ್ನು ಸನ್ಮಾನಿಸುವ ಮೂಲಕ ಕಿರಿಯರ ಹಾದಿಗೆ ಬೆಳಕಿನ ಮಾರ್ಗದರ್ಶನ ಮಾಡುತ್ತಿರುವ ಕೆಯುಡಬ್ಲ್ಯುಜೆ ಕಾರ್ಯ ಸ್ತುತ್ಯರ್ಹ ಎಂದು ಪ್ರಶಂಸಿದರು.

    ಕ್ಯಾನ್ಸರ್ ಗೆದ್ದು 84ನೇ ವಸಂತಕ್ಕೆ ಪದಾರ್ಪಣೆ; 14 ವರ್ಷಗಳ ನಡಿಗೆಯೇ ಇವರ ಆರೋಗ್ಯದ ಗುಟ್ಟು..

    ನಾನು ಪತ್ರಿಕೋದ್ಯಮಕ್ಕೆ ಬಂದ ದಿನಗಳಿಂದ ಈ ತನಕವೂ ಶೇಷಚಂದ್ರಿಕಾ ಅವರ ಜೊತೆ ಒಡನಾಟ ಹೊಂದಿದ್ದೇನೆ. ನಿಜಕ್ಕೂ ಇವರು ಮಾಹಿತಿ ಕಣಜ. ಅನೇಕಾನೇಕ ಘಟನಾವಳಿಗಳಿಗೆ ಸಾಕ್ಷಿಯಾಗಿದ್ದಾರೆ. ಅವರ ವೃತ್ತಿ ಬದುಕು ನಮ್ಮೆಲ್ಲರಿಗೆ ಮಾದರಿ ಎಂದರು.

    ಮತ್ತೊಬ್ಬ ಹಿರಿಯ ಪತ್ರಕರ್ತ ಕಂ.ಕ.ಮೂರ್ತಿ ಮಾತನಾಡಿ, ಹಿರಿಯ ಪತ್ರಕರ್ತರ ಸೇವೆ ಸ್ಮರಿಸಿ ಅವರ ಮನೆ ಅಂಗಳಕ್ಕೆ ಕೆಯುಡಬ್ಲ್ಯುಜೆ ಹೋಗುತ್ತಿರುವುದು ಹೊಸದೊಂದು ಸಂಪ್ರದಾಯವನ್ನು ಹುಟ್ಟು ಹಾಕಿದೆ. ಆ ಮೂಲಕ ಹಿರಿಯ ಮತ್ತು ಕಿರಿಯ ಮನಸ್ಸುಗಳನ್ನು ಬೆಸೆಯುವ ಕಾರ್ಯವಾಗುತ್ತಿದೆ ಎಂದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಆರು ದಶಕಗಳಿಗೂ ಹೆಚ್ಚು ಸುದ್ದಿಮನೆಯಲ್ಲಿ ಸಕ್ರಿಯವಾಗಿರುವ ಶೇಷಚಂದ್ರಿಕಾ ಅವರು ನಮ್ಮೆಲ್ಲರ ಹೆಮ್ಮೆಯ ಹಿರಿಯಣ್ಣ ಆಗಿದ್ದಾರೆ. ಅವರ ವೃತ್ತಿ ಬದುಕು ನಮ್ಮೆಲ್ಲರಿಗೂ ಆದರ್ಶಪ್ರಾಯವಾದದ್ದು ಎಂದರು.

    ಕೆಯುಡಬ್ಲ್ಯುಜೆ ಪ್ರಧಾನ ಕಾರ್ಯದರ್ಶಿ ಜೆ.ಸಿ.ಲೋಕೇಶ ಸ್ವಾಗತಿಸಿದರು. ನಿಯೋಜಿತ ಖಜಾಂಚಿ ವಾಸುದೇವ ಹೊಳ್ಳ ವಂದಿಸಿದರು. ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸೋಮಶೇಖರ ಗಾಂಧಿ, ದೇವರಾಜು, ಬೆಂಗಳೂರು ನಗರ ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಪಾರಿಕಟ್, ಫೋಟೋಗ್ರಾಫರ್ ಶರಣ ಬಸಪ್ಪ ಮತ್ತಿತರರು ಹಾಜರಿದ್ದರು.

    ಮುಂಬೈನಲ್ಲಿ ಈ 2 ಪ್ರಥಮಗಳನ್ನು ಸಾಧಿಸಿದ ಮೊದಲ ಕನ್ನಡ ಸಿನಿಮಾ ‘ಕಾಂತಾರ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts