ಹಾವೇರಿ: ಶಿಗ್ಗಾವ್ನ ಶ್ರೀರಂಭಾಪುರಿ ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಪದವಿಪೂರ್ವ ಹಾಗೂ ಪದವಿ ಮಹಾವಿದ್ಯಾಲಯದ ವತಿಯಿಂದ ಹಾವೇರಿಯಲ್ಲಿ ಇಂದು ಆಜಾದಿ ಕ ಅಮೃತ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಂಗವಾಗಿ ವೀರ ಸೇನಾನಿ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಮೈಲಾರ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಇಲಾಖೆ ವತಿಯಿಂದ ಆಜಾದಿ ಕ ಅಮೃತ ಮಹೋತ್ಸವ ಆಯೋಜಿಸಲಾಗಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿದ ಮೈಲಾರ ಮಹದೇವಪ್ಪ, ತಿರಕಪ್ಪ ಮಡಿವಾಳರ, ಕೂಗಲೂರು ವೀರಯ್ಯ, ಹಿರೇಮಠ ಕೋಗನೂರು ಸ್ಮರಣಾರ್ಥ ಅವರ ಮೊಮ್ಮಕ್ಕಳನ್ನು ಸನ್ಮಾನಿಸಲಾಯಿತು.
ಮೊಮ್ಮಕ್ಕಳಾದ ಮಹಾದೇವಪ್ಪ, ಎಚ್.ಎಸ್. ಮೋಟೆಬೆನ್ನೂರು, ಚನ್ನಪ್ಪ ಟಿ. ಮಡಿವಾಳರ್ ಕೂಗಲೂರು, ವೀರಣ್ಣ ಹಿರೇಮಠ್ ಕೂಗಲೂರು ಇವರಿಗೆ ಶ್ರೀ ರಂಭಾಪುರಿ ವೀರಗಂಗಾಧರ ಮಹಾವಿದ್ಯಾಲಯ ಶಿಗ್ಗಾವಿ ವತಿಯಿಂದ ಪರಮಪೂಜ್ಯ ಶ್ರೀಮದ್ ರಂಭಾಪುರಿ ಜಗದ್ಗುರು ಡಾಕ್ಟರ್ ವೀರಸೋಮೇಶ್ವರ ಮಹಾಗುರುಗಳವರ ಪರಮಾನುಗ್ರಹದಿಂದ ಸನ್ಮಾನಿಸಲಾಯಿತು.
ಆಜಾದಿ ಕ ಅಮೃತ ಮಹೋತ್ಸವ ಶ್ರೀ ರಂಭಾಪುರೀ ಪೀಠದಲ್ಲಿ ಜು. 13ರಂದು ಉದ್ಘಾಟನೆಗೊಂಡು, ಜು. 19ರಂದು ದ್ರಾಕ್ಷಾ ರಾಮ ಕ್ಷೇತ್ರ ಆಂಧ್ರಪ್ರದೇಶ, ಜು.20ರಂದು ತೆಲಂಗಾಣದ ಕೊಲ್ಲಿಪಾಕಿ ಕ್ಷೇತ್ರದಲ್ಲಿ ನಡೆದಿದ್ದು, ಇಂದು ಹಾವೇರಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ನೆರವೇರಿದೆ.
ಪರಮಪೂಜ್ಯರ ಆಶೀರ್ವಾದದಿಂದ ರುದ್ರಾಕ್ಷಿ ಹಾರ ಶಾಲು ಹಾಗೂ ಅಮೃತ ರತ್ನ ಪ್ರಶಸ್ತಿಗಳನ್ನಿತ್ತು, ಸ್ವಾತಂತ್ರ್ಯ ಹೋರಾಟಗಾರರ ಮೊಮ್ಮಕ್ಕಳನ್ನು ಸನ್ಮಾನಿಸಲಾಯಿತು. ಜೊತೆಗೆ ದೇಶಾದ್ಯಂತ ಹಾಗೂ ಅಂತಾರಾಷ್ಟ್ರಮಟ್ಟದಲ್ಲಿ ಆಜಾದಿ ಕ ಅಮೃತ ಮಹೋತ್ಸವ ಕಾರ್ಯಕ್ರಮ ರಂಭಾಪುರಿ ಮಹಾವಿದ್ಯಾಲಯದಿಂದ ಆಯೋಜಿಸಲಾಗಿದೆ. ರೈಲ್ವೆ ಇಲಾಖೆಯಿಂದ 75 ರೈಲ್ವೆ ನಿಲ್ದಾಣಗಳಲ್ಲಿ ವಿಶೇಷವಾಗಿ ಆಜಾದಿ ಕ ಅಮೃತ ಮಹೋತ್ಸವ ಆಚರಿಸಲು ಆದೇಶಿಸಿದ್ದು, ಅವುಗಳಲ್ಲಿ ಹಾವೇರಿ ರೈಲ್ವೆ ನಿಲ್ದಾಣವನ್ನು ಆರಿಸಿಕೊಂಡಿದ್ದು ವಿಶೇಷ. ಅಲ್ಲದೆ ಸ್ವತಂತ್ರ ಸೇನಾನಿ ಶ್ರೀ ಮಹಾದೇವಪ್ಪ ಮೈಲಾರ ಅವರ ಹೆಸರಿಟ್ಟಿದ್ದು ಅಭಿಮಾನದ ಸಂಗತಿ. ಸ್ವಾತಂತ್ರ್ಯ ಹೋರಾಟದಲ್ಲಿ ವೀರಮರಣವನ್ನಪ್ಪಿದ ಇವರ ಹೆಸರಿನ ಮುಂದೆ ಹುತಾತ್ಮ ಎಂದೂ ಸೇರಿಸಿ ಹೆಸರಿಡಲು ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಶಿಗ್ಗಾವಿ ಎಸ್ಸಾರ್ ಜೀವಿ ಮಹಾವಿದ್ಯಾಲಯದಿಂದ ಮನವಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಶತಾಯುಷಿ ಮಲ್ಲಪ್ಪ ಕೊಪ್ಪದ್ ತಮ್ಮ ಅನುಭವ ಹಂಚಿಕೊಂಡರು. ಮೈಸೂರು ವಿಭಾಗದ ಅಧಿಕಾರಿ ರೈಲ್ವೆ ಇಲಾಖೆಯ ಅಡಿಷನಲ್ ಡಿವಿಜನಲ್ ಮ್ಯಾನೇಜರ್ ವಿಜಯ ಚೆನ್ನಮ್ಮ ಹಳ್ಳಿಕೇರಿ, ವಿ.ಎನ್.ತಿಪ್ಪನಗೌಡ, ಎಚ್.ಎಸ್. ಮಹದೇವಪ್ಪ, ಎಚ್.ಎಸ್. ನರೇಂದ್ರ, ಜಗದೀಶ್, ಮಹಾರಾಜಪೇಟೆ ಚಿಕ್ಕಮ್ಮ, ಆಡೂರು ಶಾಸಕ ನೆಹರು ಓಲೇಕಾರ್, ನಗರಸಭೆ ಅಧ್ಯಕ್ಷ ಸಂಜೀವಕುಮಾರ್ ನೀರಲಗಿ, ಸೀನಿಯರ್ ಡಿವಿಷನಲ್ ಪರ್ಸನಲ್ ಆಫೀಸರ್ ಪ್ರಶಾಂತ ಮಾಸ್ತಿಹೊಳಿ, ಡಿಎಸ್ಟಿಇ ಜಿ.ಚಂದ್ರಶೇಖರ್ ಹಾಗೂ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು. ಕಾಲೇಜು ವತಿಯಿಂದ ಡಾಕ್ಟರ್ ಬಾಲಚಂದ್ರ ತೊಂಡಿಹಾಳ ಹಾಗೂ ಪ್ರೊಫೆಸರ್ ಶಿವಪ್ರಕಾಶ್ ವಿ. ಬಳಿಗಾರ್ ಭಾಗವಹಿಸಿದ್ದರು.
ಆ್ಯಂಬುಲೆನ್ಸ್ ಅಪಘಾತ ಪ್ರಕರಣ; ಗ್ರಾಮಸ್ಥರಿಂದ ಸಾಮೂಹಿಕವಾಗಿ ನಾಲ್ವರ ಅಂತಿಮಸಂಸ್ಕಾರ